2798.16 ಕೋಟಿ ರೂ.ಅಂದಾಜು ವೆಚ್ಚದಲ್ಲಿ ರೈಲ್ವೆ ಸಚಿವಾಲಯ ನಿರ್ಮಿಸಲಿರುವ ತರಂಗ ಹಿಲ್-ಅಂಬಾಜಿ-ಅಬು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ತನ್ನ ಅನುಮೋದನೆ ನೀಡಿದೆ.
116.65 ಕಿ.ಮೀ. ಉದ್ದದ ಹೊಸ ರೈಲು ಮಾರ್ಗದ ಕಾಮಗಾರಿ 2026-27ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಯು ನಿರ್ಮಾಣ ಸಮಯದಲ್ಲಿ ಸುಮಾರು 40 ಲಕ್ಷ ಮಾನವ ದಿನಗಳಿಗೆ ನೇರ ಉದ್ಯೋಗ ಸೃಷ್ಟಿಸಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತ ನಿರ್ಮಾಣ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಯೋಜನೆಯು ರೈಲು ಸಂಪರ್ಕ ಹೆಚ್ಚಿಸಲು ಮತ್ತು ಈ ಭಾಗದ ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುವ ಚಲನಶೀಲತೆ ಸುಧಾರಿಸಲು ನೆರವಾಗಲಿದೆ.
ಅಂಬಾಜಿ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ, ಇದು ಭಾರತದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಗುಜರಾತ್‌ನಿಂದ ಮತ್ತು ದೇಶದ ಇತರ ಭಾಗಗಳಿಂದ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ರೈಲು ಮಾರ್ಗ ನಿರ್ಮಾಣದಿಂದ ಲಕ್ಷಾಂತರ ಭಕ್ತರಿಗೆ ಸರಾಗ ಪ್ರಯಾಣಕ್ಕೆ ಅನುಕೂಲವಾಗಲಿದೆ. ಇದಲ್ಲದೆ, ತರಂಗ ಬೆಟ್ಟದಲ್ಲಿರುವ ಅಜಿತನಾಥ ಜೈನ ದೇವಾಲಯಕ್ಕೆ (24 ಪವಿತ್ರ ಜೈನ ತೀರ್ಥಂಕರರಲ್ಲಿ ಒಬ್ಬರು) ಭೇಟಿ ನೀಡುವ ಭಕ್ತರು ಈ ಸಂಪರ್ಕದಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ತರಂಗ ಹಿಲ್-ಅಂಬಾಜಿ-ಅಬು ನಡುವಿನ ಈ ಹೊಸ ರೈಲು ಮಾರ್ಗವು ಈ 2 ಪ್ರಮುಖ ಧಾರ್ಮಿಕ ತಾಣಗಳನ್ನು ರೈಲ್ವೆಯ ಮುಖ್ಯ ಜಾಲಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈ ನೂತನ ರೈಲು ಮಾರ್ಗವು ಕೃಷಿ ಮತ್ತು ಸ್ಥಳೀಯ ಉತ್ಪನ್ನಗಳ ವೇಗದ ಸಾಗಣೆಯನ್ನು ಸುಗಮಗೊಳಿಸುತ್ತದೆ. ಗುಜರಾತ್, ರಾಜಸ್ಥಾನ ಮತ್ತು ದೇಶದ ಇತರ ಭಾಗಗಳ ಪ್ರದೇಶದ ಜನರಿಗೆ ಸುಧಾರಿತ ಚಲನಶೀಲತೆ ಒದಗಿಸಲಿದೆ. ಈ ಯೋಜನೆಯು ಅಸ್ತಿತ್ವದಲ್ಲಿರುವ ಅಹಮದಾಬಾದ್-ಅಬು ರೋಡ್ ರೈಲು ಮಾರ್ಗಕ್ಕೆ ಪರ್ಯಾಯ ಮಾರ್ಗ ಒದಗಿಸಲಿದೆ.
ಉದ್ದೇಶಿತ ಜೋಡಿ ಮಾರ್ಗವು ರಾಜಸ್ಥಾನದ ಸಿರೋಹಿ ಜಿಲ್ಲೆ ಮತ್ತು ಗುಜರಾತ್‌ನ ಬನಸ್ಕಾಂತ ಮತ್ತು ಮಹೇಶನಾ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಹೊಸ ರೈಲು ಮಾರ್ಗ ನಿರ್ಮಾಣವು ಅಪಾರ ಹೂಡಿಕೆಯನ್ನು ಆಕರ್ಷಿಸುತ್ತದೆ. ಒಟ್ಟಾರೆ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ.