ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಒಟ್ಟು 12461 ಕೋಟಿ ರೂ. ವೆಚ್ಚದೊಂದಿಗೆ ಜಲವಿದ್ಯುತ್ ಯೋಜನೆಗಳಿಗೆ (ಎಚ್ ಇ ಪಿ) ಸಂಬಂಧಿಸಿದ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಬಜೆಟ್ ಬೆಂಬಲದ ಯೋಜನೆಯನ್ನು ತಿದ್ದುಪಡಿ ಮಾಡುವ ವಿದ್ಯುತ್ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಯೋಜನೆಯು 2024-25ನೇ ಹಣಕಾಸು ವರ್ಷದಿಂದ 2031-32ನೇ ಹಣಕಾಸು ವರ್ಷದವರೆಗೆ ಜಾರಿಯಾಗಲಿದೆ.
ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ಅಡ್ಡಿಯಾಗುವ ದೂರ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಮೂಲಸೌಕರ್ಯಗಳ ಕೊರತೆ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರವು ಹಲವಾರು ನೀತಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಲವಿದ್ಯುತ್ ಕ್ಷೇತ್ರವನ್ನು ಉತ್ತೇಜಿಸಲು ಮತ್ತು ಅದನ್ನು ಹೆಚ್ಚು ಕಾರ್ಯಸಾಧ್ಯಗೊಳಿಸಲು, ಸಂಪುಟವು ಮಾರ್ಚ್, 2019 ರಲ್ಲಿ ಬೃಹತ್ ಜಲವಿದ್ಯುತ್ ಯೋಜನೆಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳೆಂದು ಘೋಷಿಸುವುದು, ಜಲವಿದ್ಯುತ್ ಖರೀದಿ ಬಾಧ್ಯತೆ (ಎಚ್ ಪಿ ಒ), ಸುಂಕದ ತರ್ಕಬದ್ಧಗೊಳಿಸುವಿಕೆ, ಶೇಖರಣಾ ಎಚ್ ಇ ಪಿ ಗಳಲ್ಲಿ ಪ್ರವಾಹವನ್ನು ನಿಯಂತ್ರಿಸಲು ಬಜೆಟ್ ಬೆಂಬಲ ಮತ್ತು ಮೂಲಭೂತ ಸೌಕರ್ಯಗಳನ್ನು ಅಂದರೆ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣವನ್ನು ಸಕ್ರಿಯಗೊಳಿಸುವ ವೆಚ್ಚಕ್ಕೆ ಬಜೆಟ್ ಬೆಂಬಲದಂತಹ ಕ್ರಮಗಳನ್ನು ಅನುಮೋದಿಸಿತು.
ಜಲವಿದ್ಯುತ್ ಯೋಜನೆಗಳ ತ್ವರಿತ ಅಭಿವೃದ್ಧಿ ಮತ್ತು ದೂರ ಪ್ರದೇಶದ ಯೋಜನೆಯ ಸ್ಥಳಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗಾಗಿ, ಹಿಂದಿನ ಯೋಜನೆಯಲ್ಲಿ ಈ ಕೆಳಗಿನ ಮಾರ್ಪಾಡುಗಳನ್ನು ಮಾಡಲಾಗಿದೆ:
ಎ) ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣದ ಹೊರತಾಗಿ ಇನ್ನೂ ನಾಲ್ಕು ಘಟಕಗಳನ್ನು ಸೇರಿಸುವ ಮೂಲಕ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ವೆಚ್ಚಕ್ಕಾಗಿ ಬಜೆಟ್ ಬೆಂಬಲದ ವ್ಯಾಪ್ತಿಯನ್ನು ವಿಸ್ತರಿಸಲು, ಅಂದರೆ, ಇದರ ನಿರ್ಮಾಣಕ್ಕೆ ತಗಲುವ ವೆಚ್ಚ: (i) ಪವರ್ ಹೌಸ್ ನಿಂದ ಹತ್ತಿರದ ಪೂಲಿಂಗ್ ಪಾಯಿಂಟ್ ಗೆ ಪ್ರಸರಣ ಮಾರ್ಗ ರಾಜ್ಯ/ಕೇಂದ್ರ ಪ್ರಸರಣ ಸೌಲಭ್ಯ (ii) ರೋಪ್ ವೇಗಳು (iii) ರೈಲ್ವೇ ಸೈಡಿಂಗ್ ಮತ್ತು (iv) ಸಂವಹನ ಮೂಲಸೌಕರ್ಯಗಳ ಪೂಲಿಂಗ್ ಸಬ್ಸ್ಟೇಷನ್ ನ ಉನ್ನತೀಕರಣ ಸೇರಿದಂತೆ. ಯೋಜನೆಗೆ ದಾರಿ ಮಾಡಿಕೊಡುವ ಅಸ್ತಿತ್ವದಲ್ಲಿರುವ ರಸ್ತೆಗಳು/ಸೇತುವೆಗಳ ಬಲವರ್ಧನೆಯು ಈ ಯೋಜನೆಯಡಿಯಲ್ಲಿ ಕೇಂದ್ರದ ನೆರವಿಗೆ ಅರ್ಹವಾಗಿರುತ್ತದೆ.
ಬಿ) ಈ ಯೋಜನೆಯು 2024-25ನೇ ವರ್ಷದಿಂದ 2031-32ನೇ ಸಾಲಿನವರೆಗೆ ಅನುಷ್ಠಾನಗೊಳ್ಳಲಿರುವ ಸುಮಾರು 31350 ಮೆಗಾವ್ಯಾಟ್ ಸಂಚಿತ ಉತ್ಪಾದನಾ ಸಾಮರ್ಥ್ಯಕ್ಕಾಗಿ ಒಟ್ಟು 12,461 ಕೋಟಿ ರೂ. ವೆಚ್ಚವನ್ನು ಹೊಂದಿದೆ.
ಸಿ) ಪಾರದರ್ಶಕ ಆಧಾರದ ಮೇಲೆ ಹಂಚಿಕೆ ಮಾಡಲಾದ ಖಾಸಗಿ ವಲಯದ ಯೋಜನೆಗಳು ಸೇರಿದಂತೆ 25 ಮೆ.ವ್ಯಾ. ಗಿಂತ ಹೆಚ್ಚಿನ ಸಾಮರ್ಥ್ಯದ ಎಲ್ಲಾ ಜಲವಿದ್ಯುತ್ ಯೋಜನೆಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಈ ಯೋಜನೆಯು ಕ್ಯಾಪ್ಟಿವ್/ಮರ್ಚೆಂಟ್ ಪಿ ಎಸ್ ಪಿ ಗಳನ್ನು ಒಳಗೊಂಡಂತೆ ಎಲ್ಲಾ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ (ಪಿ ಎಸ್ ಪಿ) ಸಹ ಅನ್ವಯಿಸುತ್ತದೆ, ಯೋಜನೆಯನ್ನು ಪಾರದರ್ಶಕ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು 15,000 ಮೆ.ವ್ಯಾ. ಸಂಚಿತ ಪಿ ಎಸ್ ಪಿ ಸಾಮರ್ಥ್ಯವನ್ನು ಬೆಂಬಲಿಸಲಾಗುತ್ತದೆ.
ಡಿ) 30.06.2028 ರವರೆಗೆ ಮೊದಲ ಪ್ರಮುಖ ಪ್ಯಾಕೇಜ್ ನ ಆದೇಶವನ್ನು ನೀಡಲಾದ ಯೋಜನೆಗಳನ್ನು ಈ ಯೋಜನೆಯ ಅಡಿಯಲ್ಲಿ ಪರಿಗಣಿಸಲಾಗುತ್ತದೆ.
ಇ) ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ವೆಚ್ಚದ ಬಜೆಟ್ ಬೆಂಬಲದ ಮಿತಿಯನ್ನು 200 ಮೆ.ವ್ಯಾ. ವರೆಗಿನ ಯೋಜನೆಗಳಿಗೆ 1.0 ಕೋಟಿ/ ಮೆ.ವ್ಯಾ.ಗೆ ತರ್ಕಬದ್ಧಗೊಳಿಸಲಾಗಿದೆ ಮತ್ತು 200 ಮೆ.ವ್ಯಾ.ಗಿಂತ ಹೆಚ್ಚಿನ ಯೋಜನೆಗಳಿಗೆ 200 ಕೋಟಿ ರೂ ಜೊತೆಗೆ ಮೆ.ವ್ಯಾ.ಗೆ 0.75 ಕೋಟಿ ರೂ. ಒದಗಿಸಲಾಗುವುದು. ಅಸಾಧಾರಣ ಸಂದರ್ಭಗಳಲ್ಲಿ ಸಾಕಷ್ಟು ಸಮರ್ಥನೆಯನ್ನು ಒದಗಿಸಿದರೆ ಬಜೆಟ್ ಬೆಂಬಲದ ಮಿತಿಯು 1.5 ಕೋಟಿ/ ಮೆ.ವ್ಯಾ.ವರೆಗೆ ಹೋಗಬಹುದು.
ಎಫ್) ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ವೆಚ್ಚಕ್ಕೆ ಬಜೆಟ್ ಬೆಂಬಲಕ್ಕೆ ಡಿಐಬಿ/ಪಿಐಬಿ ಮೂಲಕ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ವೆಚ್ಚದ ಮೌಲ್ಯಮಾಪನದ ನಂತರ ಮತ್ತು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮೋದನೆಯ ಅನ್ವಯ ಒದಗಿಸಲಾಗುತ್ತದೆ.
ಪ್ರಯೋಜನಗಳು:
ಈ ಪರಿಷ್ಕೃತ ಯೋಜನೆಯು ಜಲವಿದ್ಯುತ್ ಯೋಜನೆಗಳ ತ್ವರಿತ ಅಭಿವೃದ್ಧಿಗೆ ಸಹಾಯ ಮಾಡುತ್ತದೆ, ದೂರ ಪ್ರದೇಶದ ಮತ್ತು ಗುಡ್ಡಗಾಡು ಪ್ರದೇಶದ ಯೋಜನಾ ಸ್ಥಳಗಳಲ್ಲಿ ಮೂಲಸೌಕರ್ಯವನ್ನು ಸುಧಾರಿಸುತ್ತದೆ ಮತ್ತು ಸಾರಿಗೆ, ಪ್ರವಾಸೋದ್ಯಮ, ಸಣ್ಣ-ಪ್ರಮಾಣದ ವ್ಯಾಪಾರದ ಮೂಲಕ ಪರೋಕ್ಷ ಉದ್ಯೋಗ / ಉದ್ಯಮಶೀಲತೆಯ ಅವಕಾಶಗಳೊಂದಿಗೆ ಸ್ಥಳೀಯ ಜನರಿಗೆ ಹೆಚ್ಚಿನ ಸಂಖ್ಯೆಯ ನೇರ ಉದ್ಯೋಗವನ್ನು ಒದಗಿಸುತ್ತದೆ. ಇದು ಜಲವಿದ್ಯುತ್ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳನ್ನು ಉತ್ತೇಜಿಸುತ್ತದೆ ಮತ್ತು ಹೊಸ ಯೋಜನೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಪ್ರೋತ್ಸಾಹಿಸುತ್ತದೆ.