ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ ವಲಯದಲ್ಲಿ ಹಲವಾರು ರಚನಾತ್ಮಕ ಮತ್ತು ಪ್ರಕ್ರಿಯೆಯ ಸುಧಾರಣೆಗಳಿಗೆ ತನ್ನ ಅನುಮೋದನೆ ನೀಡಿದೆ. ಈ ಸುಧಾರಣೆಗಳು ಉದ್ಯೋಗಾವಕಾಶಗಳನ್ನು ರಕ್ಷಿಸುವ ಮತ್ತು ಸೃಷ್ಟಿಸುವ, ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವ, ಗ್ರಾಹಕರ ಹಿತವನ್ನು ರಕ್ಷಿಸುವ, ಹಣ ಪೂರಣ ಮಾಡುವ, ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಇದು ದೂರಸಂಪರ್ಕ ಸೇವೆಗಳ ಪೂರೈಕೆದಾರರ (ಟಿಎಸ್.ಪಿ.ಗಳು)ಮೇಲಿನ ನಿಯಂತ್ರಣದ ಹೊರೆಯನ್ನು ತಗ್ಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ದತ್ತಾಂಶ ಬಳಕೆ, ಆನ್ ಲೈನ್ ಶಿಕ್ಷಣ, ವರ್ಕ್ ಫ್ರಂ ಹೋಂ, ಸಾಮಾಜಿಕ ಮಾಧ್ಯಮದ ಮೂಲಕ ಪರಸ್ಪರ ಸಂಪರ್ಕ, ವರ್ಚುವಲ್ ಸಭೆಗಳು ಇತ್ಯಾದಿಗಳೊಂದಿಗೆ ಕೋವಿಡ್ -19ರ ಸವಾಲುಗಳನ್ನು ಎದುರಿಸುವಲ್ಲಿ ಟೆಲಿಕಾಂ ವಲಯದ ಅತ್ಯುತ್ತಮ ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ, ಸುಧಾರಣಾ ಕ್ರಮಗಳು ಬ್ರಾಡ್‌ಬ್ಯಾಂಡ್ ಮತ್ತು ಟೆಲಿಕಾಂ ಸಂಪರ್ಕದ ಪ್ರಸರಣ ಮತ್ತು ಅದರ ಹರಿವಿಗೆ ಮತ್ತಷ್ಟು ಉತ್ತೇಜನ ನೀಡುತ್ತವೆ. ಸಂಪುಟದ ನಿರ್ಣಯಗಳು, ದೂರಸಂಪರ್ಕ ಕ್ಷೇತ್ರವನ್ನು ಚೈತನ್ಯಶೀಲಗೊಳಿಸುವ ಪ್ರಧಾನಮಂತ್ರಿಗಳ ದೃಷ್ಟಿಕೋನವನ್ನು ಪುನಶ್ಚೇತನಗೊಳಿಸುತ್ತವೆ. ಸ್ಪರ್ಧೆ ಮತ್ತು ಗ್ರಾಹಕರ ಆಯ್ಕೆಯೊಂದಿಗೆ, ಸಮಗ್ರ ಅಭಿವೃದ್ಧಿ ಮತ್ತು ದುರ್ಬಲ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರಲು ಮತ್ತು ಸಂಪರ್ಕಿತರಲ್ಲದವರನ್ನು ಸಂಪರ್ಕ ವ್ಯಾಪ್ತಿಗೆ ತರಲು ಸಾರ್ವತ್ರಿಕ ಬ್ರಾಡ್ ಬ್ಯಾಂಡ್ ಪ್ರವೇಶಕ್ಕಾಗಿ ಅಂತ್ಯೋದಯವಾಗಿದೆ. ಈ ಪ್ಯಾಕೇಜ್ 4 ಜಿ ಪ್ರಸರಣವನ್ನು ಹೆಚ್ಚಿಸುತ್ತದೆ, ಹಣ ಪೂರಣ ಮಾಡುತ್ತದೆ ಮತ್ತು 5 ಜಿ ನೆಟ್ ವರ್ಕ್ ಗಳಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಒಂಬತ್ತು ರಚನಾತ್ಮಕ ಸುಧಾರಣೆಗಳು ಮತ್ತು ಐದು ಪ್ರಕ್ರಿಯೆಯ ಸುಧಾರಣೆಗಳು ಮತ್ತು ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಪರಿಹಾರ ಕ್ರಮಗಳು ಈ ಕೆಳಕಂಡಂತಿವೆ:
ರಚನಾತ್ಮಕ ಸುಧಾರಣೆಗಳು
1. ಹೊಂದಾಣಿಕೆಯ ಒಟ್ಟು ಆದಾಯದ ತರ್ಕಬದ್ಧಗೊಳಿಸುವಿಕೆ: ದೂರಸಂಪರ್ಕೇತರ ಆದಾಯವನ್ನು ಸಂಭಾವ್ಯತೆ ಆಧಾರದ ಮೇಲೆ ಎ.ಜಿ.ಆರ್.ನ ವ್ಯಾಖ್ಯಾನದಿಂದ ಹೊರಗಿಡಲಾಗುತ್ತದೆ.
2. ಬ್ಯಾಂಕ್ ಖಾತ್ರಿ (ಬಿ.ಜಿ.ಗಳು)ಯ ತರ್ಕಬದ್ಧೀಕರಣ: ಪರವಾನಗಿ ಶುಲ್ಕ (ಎಲ್.ಎಫ್.) ಮತ್ತು ಇತರ ಅದೇ ರೀತಿಯಲ್ಲಿ ವಿಧಿಸಲಾಗುವ ಶುಲ್ಕಕ್ಕೆ ಪ್ರತಿಯಾಗಿ ಬ್ಯಾಂಕ್ ಖಾತ್ರಿ ಅಗತ್ಯದ (ಶೇ.80)ಬೃಹತ್ ಇಳಿಕೆ. ದೇಶದ ವಿಭಿನ್ನ ಪರವಾನಗಿ ಸೇವೆಗಳ ಕ್ಷೇತ್ರ ವಲಯದಲ್ಲಿ (ಎಲ್.ಎಸ್.ಎ.ಗಳು) ಬಹು ಬಿಜಿಗಳ ಅಗತ್ಯ ಇರುವುದಿಲ್ಲ. ಬದಲಾಗಿ ಒಂದು ಬಿಜಿ ಸಾಕಾಗುತ್ತದೆ.
3. ಬಡ್ಡಿ ದರಗಳ ತರ್ಕಬದ್ಧೀಕರಣ / ದಂಡದ ತೆರವು: 1 ನೇ ಅಕ್ಟೋಬರ್, 2021 ರಿಂದ, ಪರವಾನಗಿ ಶುಲ್ಕ (ಎಲ್.ಎಫ್.)/ ತರಂಗಾಂತರ ಬಳಕೆ ಶುಲ್ಕ (ಎಸ್.ಯು.ಸಿ.)ನ ವಿಳಂಬ ಪಾವತಿಗಳು ಎಸ್.ಬಿ.ಐ.ನ ಎಂ.ಸಿ.ಎಲ್.ಆರ್. ಮತ್ತು ಶೇ.2ರ ಬದಲಿಗೆ ಎಂ.ಸಿ.ಎಲ್.ಆರ್. ಜೊತೆಗೆ ಶೇ.4 ಬಡ್ಡಿ ದರವನ್ನು ಆಕರ್ಷಿಸುತ್ತದೆ; ಬಡ್ಡಿಯನ್ನು ತಿಂಗಳ ಬದಲು ವಾರ್ಷಿಕವಾಗಿ ಒಗ್ಗೂಡಿಸಲಾಗುತ್ತದೆ; ದಂಡ ಮತ್ತು ದಂಡದ ಮೇಲಿನ ಬಡ್ಡಿಯನ್ನು ತೆಗೆದುಹಾಕಲಾಗಿದೆ.
4. ಇನ್ನು ಮುಂದೆ ಮಾಡಲಾಗುವ ಹರಾಜುಗಳಿಗೆ ಕಂತಿನ ಪಾವತಿಯ ಖಾತ್ರಿಗೆ ಯಾವುದೇ ಬ್ಯಾಂಕ್ ಖಾತ್ರಿ ಅಗತ್ಯ ಇರುವುದಿಲ್ಲ. ಉದ್ಯಮವು ಪ್ರಬುದ್ಧವಾಗಿದೆ ಮತ್ತು ಹಿಂದಿನ ಬಿಜಿಯ ರೂಢಿ ಇನ್ನು ಮುಂದೆ ಅಗತ್ಯವಿರುವುದಿಲ್ಲ.
5. ತರಂಗಾಂತರ ಅವಧಿ: ಭವಿಷ್ಯದ ಹರಾಜುಗಳಲ್ಲಿ, ತರಂಗಾಂತರ ಅವಧಿಯನ್ನು 20 ರಿಂದ 30 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ.
6. ಭವಿಷ್ಯದ ಹರಾಜುಗಳಲ್ಲಿ ಪಡೆಯಲಾಗುವ ತರಂಗಾಂತರಗಳನ್ನು 10 ವರ್ಷಗಳ ನಂತರ ಮರಳಿ ಹಿಂತಿರುಗಿಸಲು ಅನುಮತಿ ನೀಡಲಾಗುವುದು.
7. ಭವಿಷ್ಯದ ತರಂಗಾಂತರ ಹರಾಜಿನಲ್ಲಿ ಪಡೆದ ತರಂಗಾಂತರಗಳಿಗೆ ಯಾವುದೇ ತರಂಗಾಂತರ ಬಳಕೆ ಶುಲ್ಕ (ಎಸ್.ಯು.ಸಿ.) ಇರುವುದಿಲ್ಲ.
8. ಸ್ಪೆಕ್ಟ್ರಮ್ ಹಂಚಿಕೆಯನ್ನು ಪ್ರೋತ್ಸಾಹಿಸಲಾಗಿದೆ- ಸ್ಪೆಕ್ಟ್ರಮ್ ಹಂಚಿಕೆಗಾಗಿ ಶೇ.0.5 ಹೆಚ್ಚುವರಿ ಎಸ್.ಯು.ಸಿ. ತೆಗೆದುಹಾಕಲಾಗಿದೆ.
9. ಹೂಡಿಕೆಯನ್ನು ಉತ್ತೇಜಿಸಲು, ಶೇ.100ರಷ್ಟು ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ.)ಗೆ ಸ್ವಯಂಚಾಲಿತ ಮಾರ್ಗದಲ್ಲಿ ದೂರಸಂಪರ್ಕ ವಲಯದಲ್ಲಿ ಅನುಮತಿಸಲಾಗಿದೆ. ಎಲ್ಲಾ ಸುರಕ್ಷತಾ ಕ್ರಮಗಳು ಅನ್ವಯವಾಗುತ್ತವೆ.
ಪ್ರಕ್ರಿಯೆಯ ಸುಧಾರಣೆಗಳು
1. ಹರಾಜು ವೇಳಪಟ್ಟಿ ಸ್ಥಿರವಾಗಿರುತ್ತದೆ - ತಂರಂಗಾಂತರ ಹರಾಜು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಡೆಯಲಿದೆ.
2. ಸುಗಮ ವಾಣಿಜ್ಯದ ಉತ್ತೇಜನ – ನಿಸ್ತಂತು ಸಾಧನಗಳ ಕುರಿತ 1953ರ ಸೀಮಾಸುಂಕ ಅಧಿಸೂಚನೆಯ ಅಡಿಯಲ್ಲಿ ತೊಡಕಿನಿಂದ ಕೂಡಿದ್ದ ಪರವಾನಗಿಗಳ ಅಗತ್ಯವನ್ನು ತೆಗೆದುಹಾಕಲಾಗಿದೆ. ಸ್ವಯಂ ಘೋಷಣೆಯೊಂದಿಗೆ ಇದನ್ನು ಬದಲಾಯಿಸಲಾಗಿದೆ.
3. ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆ.ವೈ.ಸಿ.) ಸುಧಾರಣೆಗಳು: ಸ್ವಯಂ-ಕೆ.ವೈ.ಸಿ. (ಆಫ್ ಆಧಾರಿತ) ಅನುಮತಿಸಲಾಗಿದೆ. ಇ-ಕೆವೈಸಿ ದರವನ್ನು ಕೇವಲ ಒಂದು ರೂಪಾಯಿಗೆ ಪರಿಷ್ಕರಿಸಲಾಗಿದೆ. ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಮತ್ತು ಪೋಸ್ಟ್ ಪೈಯ್ಡ್ ನಿಂದ ಪ್ರೀಪೈಯ್ಡ್ ಗೆ ಬದಲಾಯಿಸಲು ತಾಜಾ ಕೆವೈಸಿ ಅಗತ್ಯವಿರುವುದಿಲ್ಲ.
4. ಕಾಗದದ ಮೂಲಕ ಗ್ರಾಹಕರಿಂದ ಪಡೆಯುತ್ತಿದ್ದ ಅರ್ಜಿಗಳ (ಸಿ.ಎ.ಎಫ್.)ನ್ನು ಡಿಜಿಟಲ್ ದತ್ತಾಂಶ ಸಂಗ್ರಹಣೆಯೊಂದಿಗೆ ಬದಲಾಯಿಸಲಾಗಿದೆ. ಸುಮಾರು 300-400 ಕೋಟಿ ಕಾಗದದ ಅರ್ಜಿಗಳು ವಿವಿಧ ಟಿಎಸ್.ಪಿ.ಗಳ ಗೋದಾಮುಗಳಲ್ಲಿ ಬಿದ್ದಿದ್ದು, ಮುಂದೆ ಇದರ ಅಗತ್ಯ ಇರುವುದಿಲ್ಲ. ಸಿ.ಎ.ಎಫ್.ನ ಗೋದಾಮಿನ ಪರಿಶೋಧನೆ ಇನ್ನು ಮುಂದೆ ಅಗತ್ಯವಿರುವುದಿಲ್ಲ.
5. ದೂರಸಂಪರ್ಕ ಗೋಪುರಗಳ ಎಸ್.ಎ.ಸಿ.ಎಫ್.ಎ. ಅನುಮೋದನೆ ಸುಗಮಗೊಳಿಸಲಾಗಿದೆ. ಸ್ವಯಂ ಘೋಷಣೆಯ ಆಧಾರದ ಮೇಲೆ ಡಿಓ.ಟಿ. ಪೋರ್ಟಲ್ ನಲ್ಲಿ ದತ್ತಾಂಶವನ್ನು ಸ್ವೀಕರಿಸಲಾಗುತ್ತದೆ. ಇತರ ಏಜೆನ್ಸಿಗಳ ಪೋರ್ಟಲ್ ಗಳನ್ನು (ನಾಗರಿಕ ವಿಮಾನಯಾನದಂತಹವು) ಡಿಓಟಿ ಪೋರ್ಟಲ್ ನೊಂದಿಗೆ ಸಂಪರ್ಕಿಸಲಾಗುತ್ತದೆ.
ದೂರಸಂಪರ್ಕ ಸೇವೆ ಪೂರೈಕೆದಾರರ ನಗದು ಅಗತ್ಯಗಳ ಪರಿಹಾರ
ಎಲ್ಲ ದೂರಸಂಪರ್ಕ ಸೇವಾ ಪೂರೈಕೆದಾರರಿಗಾಗಿ (ಟಿ.ಎಸ್.ಪಿ.ಗಳು) ಸಂಪುಟ ಈ ಕೆಳಕಂಡವುಗಳನ್ನು ಅನುಮೋದಿಸಿದೆ.:
1. ಎಜಿಆರ್ ತೀರ್ಪಿನಿಂದ ಉಂಟಾಗುವ ಬಾಕಿಯ ವಾರ್ಷಿಕ ಪಾವತಿಗಳಲ್ಲಿ ನಾಲ್ಕು ವರ್ಷಗಳ ಕಂತು ಪಾವತಿ ಮುಂದೂಡಿಕೆ (Moratorium )/ಮುಂದೂಡಿಕೆ, ಆದಾಗ್ಯೂ, ನಿವ್ವಳ ಪ್ರಸ್ತುತ ಮೌಲ್ಯವನ್ನು (ಎನ್.ಪಿ.ವಿ.) ರಕ್ಷಿಸುವ ಮೂಲಕ ಬಾಕಿ ಇರುವ ಮೊತ್ತವನ್ನು ಕಾಪಾಡಲಾಗುವುದು.
2. ಹಿಂದಿನ ಹರಾಜಿನಲ್ಲಿ (2021ರ ಹರಾಜನ್ನು ಹೊರತುಪಡಿಸಿ) ನಾಲ್ಕು ವರ್ಷಗಳವರೆಗೆ ಖರೀದಿಸಿದ ತರಂಗಾಂತರಗಳ ಪಾವತಿಗಳ ಮೇಲೆ ಕಂತು ಪಾವತಿ ಮುಂದೂಡಿಕೆ(Moratorium )/ಮುಂದೂಡಿಕೆ ಆಯಾ ಹರಾಜಿನಲ್ಲಿ ನಿಗದಿಪಡಿಸಿದ ಬಡ್ಡಿ ದರದಲ್ಲಿ ಎನ್.ಪಿ.ವಿ. ಕಾಪಾಡಲಾಗುವುದು.
3. ಈಕ್ವಿಟಿಯ ಮೂಲಕ ಪಾವತಿಯ ಮುಂದೂಡಿಕೆಯಿಂದ ಉಂಟಾದ ಬಡ್ಡಿ ಮೊತ್ತವನ್ನು ಪಾವತಿಸಲು ಟಿಎಸ್ಪಿಗಳಿಗೆ ಆಯ್ಕೆ ನೀಡಲಾಗುವುದು.
4. ಸರ್ಕಾರದ ಆಯ್ಕೆಯಲ್ಲಿ, ಮೊರಟೋರಿಯಂ/ಮುಂದೂಡುವಿಕೆಯ ಅವಧಿಯ ಕೊನೆಯಲ್ಲಿ ಈಕ್ವಿಟಿ ಮೂಲಕ ಹೇಳಲಾದ ವಿಳಂಬಿತ ಪಾವತಿಗೆ ಸಂಬಂಧಿಸಿದ ಬಾಕಿ ಮೊತ್ತವನ್ನು ಪರಿವರ್ತಿಸಲು, ಮಾರ್ಗಸೂಚಿಗಳನ್ನು ಹಣಕಾಸು ಸಚಿವಾಲಯವು ಆಖೈರುಗೊಳಿಸುತ್ತದೆ.
ಮೇಲಿನ ಎಲ್ಲವೂ ಎಲ್ಲ ಟಿ.ಎಸ್.ಪಿ.ಗಳಿಗೆ ಅನ್ವಯವಾಗುತ್ತದೆ ಮತ್ತು ನಗದು ಸುಗಮಗೊಳಿಸುವ ಮತ್ತು ನಗದು ಹರಿವಿನ ಮೂಲಕ ಪರಿಹಾರ ಒದಗಿಸುತ್ತದೆ. ಇದು ದೂರಸಂಪರ್ಕ ವಲಯಕ್ಕೆ ಗಣನೀಯ ತೆರೆದುಕೊಂಡಿರುವ ವಿವಿಧ ಬ್ಯಾಂಕುಗಳಿಗೂ ಸಹಾಯ ಮಾಡುತ್ತದೆ.