ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಇಂದು ಲಡಾಖ್ ನಲ್ಲಿ ಹಸಿರು ಇಂಧನ ಕಾರಿಡಾರ್ (ಜಿಇಸಿ) ಹಂತ-II - ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ (ಐಎಸ್ ಟಿಎಸ್) ಯೋಜನೆಗೆ 13 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯನ್ನು ಹಣಕಾಸು ವರ್ಷ 2029-30 ರೊಳಗೆ ಒಟ್ಟು ಅಂದಾಜು ವೆಚ್ಚ ರೂ.20,773.70 ಕೋಟಿ ಮತ್ತು ಕೇಂದ್ರ ಹಣಕಾಸು ನೆರವು (ಸಿಎಫ್ ಎ) ಯೋಜನಾ ವೆಚ್ಚದ ಶೇಕಡಾ 40ರಷ್ಟು ಅಂದರೆ ರೂ.8,309.48 ಕೋಟಿಗಳೊಂದಿಗೆ ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಲಡಾಖ್ ಪ್ರದೇಶದ ಸಂಕೀರ್ಣ ಭೂಪ್ರದೇಶ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಗಡಿ ರಕ್ಷಣಾ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (POWERGRID) ಈ ಯೋಜನೆಗೆ ಅನುಷ್ಠಾನದ ಏಜೆನ್ಸಿಯಾಗಿದೆ. ಅತ್ಯಾಧುನಿಕ ವೋಲ್ಟೇಜ್ ಸೋರ್ಸ್ ಪರಿವರ್ತಕ (ವಿಎಸ್ ಸಿ) ಆಧಾರಿತ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಚ್ ವಿಡಿಸಿ) ಸಿಸ್ಟಮ್ ಮತ್ತು ಎಕ್ಸ್ಟ್ರಾ ಹೈವೋಲ್ಟೇಜ್ ಆಲ್ಟರ್ನೇಟಿಂಗ್ ಕರೆಂಟ್ (ಇಎಚ್ ವಿ ಎ ಸಿ) ಸಿಸ್ಟಮ್ಗಳನ್ನು ಸ್ಥಾಪಿಸಲಾಗುವುದು.
ಈ ವಿದ್ಯುತ್ ಶಕ್ತಿಯನ್ನು ಕೊಂಡೊಯ್ಯುವ ಪ್ರಸರಣ ಮಾರ್ಗವು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಮೂಲಕ ಹರಿಯಾಣದ ಕೈತಾಲ್ ವರೆಗೆ ಹಾದುಹೋಗುತ್ತದೆ, ಅಲ್ಲಿ ಅದು ರಾಷ್ಟ್ರೀಯ ಗ್ರಿಡ್ನೊಂದಿಗೆ ಸಂಯೋಜಿಸಲ್ಪಡುತ್ತದೆ. ಲಡಾಖ್ ಗೆ ವಿಶ್ವಾಸಾರ್ಹ ವಿದ್ಯುತ್ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಲೇಹ್ ನಲ್ಲಿರುವ ಈ ಯೋಜನೆಯಿಂದ ಅಸ್ತಿತ್ವದಲ್ಲಿರುವ ಲಡಾಖ್ ಗ್ರಿಡ್ ಗೆ ಪರಸ್ಪರ ಸಂಪರ್ಕವನ್ನು ಸಹ ಯೋಜಿಸಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ವಿದ್ಯುತ್ ಒದಗಿಸಲು ಲೇಹ್-ಅಲುಸ್ಟೆಂಗ್-ಶ್ರೀನಗರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯಿಂದಾಗಿ 713 ಕಿಮೀ ಪ್ರಸರಣ ಮಾರ್ಗಗಳು (480 ಕಿಮೀ ಎಚ್ವಿಡಿಸಿ ಲೈನ್ ಸೇರಿದಂತೆ) ಮತ್ತು 5 ಗಿಗಾವ್ಯಾಟ್ ಸಾಮರ್ಥ್ಯದ ಎಚ್ ವಿಡಿಸಿ ಟರ್ಮಿನಲ್ ಗಳು ಪಾಂಗ್ (ಲಡಾಖ್) ಮತ್ತು ಕೈತಾಲ್ (ಹರಿಯಾಣ) ನಲ್ಲಿ ಸ್ಥಾಪನೆಗೊಳ್ಳುತ್ತದೆ.
ಈ ಯೋಜನೆಯು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನಗಳಿಂದ 500 ಗಿಗಾವ್ಯಾಟ್ ಸ್ಥಾಪಿಸಲಾದ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಸಾಧಿಸಲು ಕೊಡುಗೆ ನೀಡುತ್ತದೆ. ಈ ಯೋಜನೆಯು ದೇಶದ ದೀರ್ಘಾವಧಿಯ ಇಂಧನ ಭದ್ರತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಪರಿಸರದ ದೃಷ್ಟಿಯಿಂದ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಇಂಧನ ಮತ್ತು ಇತರ ಸಂಬಂಧಿತ ವಲಯಗಳಲ್ಲಿ, ವಿಶೇಷವಾಗಿ ಲಡಾಖ್ ಪ್ರದೇಶದಲ್ಲಿ ಕೌಶಲ್ಯ ಮತ್ತು ಕೌಶಲ್ಯರಹಿತ ಸಿಬ್ಬಂದಿಗೆ ಅಪಾರ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಈ ಯೋಜನೆಯು ಗ್ರಿಡ್ ಸಮೀಕರಣ ಮತ್ತು ಸುಮಾರು 20 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ರವಾನಿಸುವಿಕೆಗೆ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂಟ್ರಾ-ಸ್ಟೇಟ್ ಟ್ರಾನ್ಸ್ಮಿಷನ್ ಸಿಸ್ಟಮ್ ಗ್ರೀನ್ ಎನರ್ಜಿ ಕಾರಿಡಾರ್ ಹಂತ-II (ಐಎನ್ಎಸ್ ಟ ಎಸ್ ಜಿಇಸಿ -II) ಕ್ಕೆ ಹೆಚ್ಚುವರಿಯಾಗಿದೆ ಮತ್ತು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಐಎನ್ಎಸ್ ಟ ಎಸ್ ಜಿಇಸಿ -II ಯೋಜನೆಯು ಹೆಚ್ಚುವರಿ 10753 ಸಿಸಿಎಂ ಪ್ರಸರಣ ಮಾರ್ಗಗಳನ್ನು ಮತ್ತು 27546 ಎಂವಿಎ ಸಾಮರ್ಥ್ಯದ ಸಬ್-ಸ್ಟೇಷನ್ಗಳನ್ನು ಹೊಂದಲಿದ್ದು ಇದರ ಅಂದಾಜು ಯೋಜನಾ ವೆಚ್ಚರೂ.12,031.33 ಕೋಟಿ ಮತ್ತು ಕೇಂದ್ರ ಹಣಕಾಸು ನೆರವು (ಸಿಎಫ್ ಎ) ಯೋಜನಾ ವೆಚ್ಚದ 33% ರಷ್ಟು ಅಂದರೆ ರೂ.3970.34 ಕೋಟಿ.
ಹಿನ್ನೆಲೆ:
ಪ್ರಧಾನಮಂತ್ರಿಯವರು ಆಗಸ್ಟ್ 15 2020 ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಲಡಾಖ್ ನಲ್ಲಿ 7.5 ಗಿಗಾವ್ಯಾಟ್ ಸೋಲಾರ್ ಪಾರ್ಕ್ ಸ್ಥಾಪನೆಯನ್ನು ಘೋಷಿಸಿದರು. ವ್ಯಾಪಕವಾದ ಕ್ಷೇತ್ರ ಸಮೀಕ್ಷೆಯ ನಂತರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಲಡಾಖ್ನ ಪಾಂಗ್ನಲ್ಲಿ 12 ಜಿಡಬ್ಲ್ಯೂಎಚ್ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ (ಬಿಇಎಸ್ ಎಸ್) ಜೊತೆಗೆ 13 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸಿದೆ. ಈ ಬೃಹತ್ ಪ್ರಮಾಣದ ವಿದ್ಯುತ್ ಅನ್ನು ರವಾನಿಸಲು, ಅಂತರ-ರಾಜ್ಯ ಪ್ರಸರಣ ಮೂಲಸೌಕರ್ಯವನ್ನು ರಚಿಸುವುದು ಅಗತ್ಯವಾಗಿರುತ್ತದೆ.