ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಟಲ್ ನಾವೀನ್ಯತೆ ಅಭಿಯಾನ (ಎಐಎಂ) ಅನ್ನು ಮಾರ್ಚ್ 2023ರವರೆಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ದೇಶದಲ್ಲಿ ನಾವೀನ್ಯತೆ ಸಂಸ್ಕೃತಿ ಮತ್ತು ಉದ್ಯಮಶೀಲತೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶಿತ ಗುರಿಯ ಮೇಲೆ ಎಐಎಂ ಕೆಲಸ ಮಾಡುತ್ತದೆ. ಇದನ್ನು ಎಐಎಂ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಲಿದೆ.
ಎಐಎಂ ಸಾಧಿಸಲಿರುವ ಉದ್ದೇಶಿತ ಗುರಿಗಳೆಂದರೆ:
10,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು (ಎಟಿಎಲ್ ಗಳು) ಸ್ಥಾಪನೆ,
101 ಅಟಲ್ ಇನ್ ಕ್ಯುಬೇಶನ್ ಕೇಂದ್ರ(ಎಐಸಿ)ಗಳ ಸ್ಥಾಪನೆ,
50 ಅಟಲ್ ಸಮುದಾಯ ನಾವೀನ್ಯತೆ ಕೇಂದ್ರ (ಎಸಿಐಸಿ) ಸ್ಥಾಪನೆ ಮತ್ತು
ಅಟಲ್ ನವ ಭಾರತ ಸವಾಲು (ನ್ಯೂ ಇಂಡಿಯಾ ಚಾಲೆಂಜ್) ಗಳ ಮೂಲಕ 200 ನವೋದ್ಯಮಗಳಿಗೆ ಬೆಂಬಲ.
ಸ್ಥಾಪನೆ ಮತ್ತು ಬೆಂಬಲಿಸುವ ಪ್ರಕ್ರಿಯೆಯಲ್ಲಿ ಫಲಾನುಭವಿಗಳಿಗಾಗಿ ಒಟ್ಟು 2000 ಕೋಟಿ ರೂ.ಗಳಿಗೂ ಅಧಿಕ ಆಯವ್ಯಯದಲ್ಲಿ ಹಂಚಿಕೆ ಮಾಡಲಾದ ವೆಚ್ಚವನ್ನು ಮಾಡಲಾಗುವುದು
2015ರ ಬಜೆಟ್ ಭಾಷಣದಲ್ಲಿ ಮಾನ್ಯ ಹಣಕಾಸು ಸಚಿವರು ಘೋಷಿಸಿದಂತೆ, ನೀತಿ ಆಯೋಗದ ಅಡಿಯಲ್ಲಿ ಅಭಿಯಾನವನ್ನು ರೂಪಿಸಲಾಗಿದೆ. ಶಾಲೆ, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳು, ಎಂಎಸ್ಎಂಇ ಮತ್ತು ಕೈಗಾರಿಕಾ ಮಟ್ಟದಲ್ಲಿ ಹಸ್ತಕ್ಷೇಪಗಳ ಮೂಲಕ ದೇಶಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಮತ್ತು ಉತ್ತೇಜಿಸುವುದು ಎಐಎಂನ ಉದ್ದೇಶವಾಗಿದೆ. ಎಐಎಂ ಮೂಲಸೌಕರ್ಯ ಸೃಷ್ಟಿ ಮತ್ತು ಸಾಂಸ್ಥಿಕ ಕಟ್ಟಡ ನಿರ್ಮಾಣ ಎರಡರ ಬಗ್ಗೆಯೂ ಗಮನ ಹರಿಸಲಿದೆ. ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಸಂಯೋಜಿಸಲು ಎಐಎಂ ಶ್ರಮಿಸುತ್ತಿದೆ ಎಂಬುದು ಈ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ:
ರಷ್ಯಾದೊಂದಿಗೆ ಎಐಎಂ – ಎಸ್.ಐ.ಆರ್.ಐ.ಯು.ಎಸ್. ವಿದ್ಯಾರ್ಥಿ ನಾವೀನ್ಯತೆ ವಿನಿಮಯ ಕಾರ್ಯಕ್ರಮ, ಡೆನ್ಮಾರ್ಕ್ ನೊಂದಿಗೆ ಎಐಎಂ – ಐಸಿಡಿಕೆ (ಡೆನ್ಮಾರ್ಕ್ ನಾವೀನ್ಯತೆ ಕೇಂದ್ರ) ಜಲ ಸವಾಲು ಮತ್ತು ಆಸ್ಟ್ರೇಲಿಯಾದೊಂದಿಗಿನ ಐಎಸಿಇ (ಭಾರತ ಆಸ್ಟ್ರೇಲಿಯ ವೃತ್ತಾಕಾರದ ಆರ್ಥಿಕತೆ ಹ್ಯಾಕಥಾನ್) ನಂತಹ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೇಲೆ ಸಮನ್ವಯ ಸಹಯೋಗವನ್ನು ನಿರ್ಮಿಸಲು ಎಐಎಂ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಸೃಷ್ಟಿಸಿದೆ.
ಭಾರತ ಮತ್ತು ಸಿಂಗಾಪುರದ ನಡುವೆ ಆಯೋಜಿಸಲಾದ ನಾವೀನ್ಯತೆ ನವೋದ್ಯಮ ಶೃಂಗಸಭೆ ಇನ್ ಸ್ಪ್ರೆನಿಯರ್ ಯಶಸ್ಸಿನಲ್ಲಿ ಎಐಎಂಗಳು ಪ್ರಮುಖ ಪಾತ್ರ ವಹಿಸಿವೆ.
ರಕ್ಷಣಾ ಕ್ಷೇತ್ರದಲ್ಲಿ ಆವಿಷ್ಕಾರ ಮತ್ತು ಖರೀದಿಯನ್ನು ಪ್ರೋತ್ಸಾಹಿಸುತ್ತಿರುವ ರಕ್ಷಣಾ ಆವಿಷ್ಕಾರ ಸಂಸ್ಥೆಯನ್ನು ಸ್ಥಾಪಿಸಲು ಎಐಎಂ ರಕ್ಷಣಾ ಸಚಿವಾಲಯದೊಂದಿಗೆ ಸಹಯೋಗ ಹೊಂದಿದೆ.
ಹಿಂದಿನ ವರ್ಷಗಳಲ್ಲಿ, ದೇಶಾದ್ಯಂತ ನಾವಿನ್ಯತೆಯ ಚಟುವಟಿಕೆಗಳನ್ನು ಸಂಯೋಜಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸಲು ಎಐಎಂ ಶ್ರಮಿಸಿದೆ. ತನ್ನ ಕಾರ್ಯಕ್ರಮಗಳ ಮೂಲಕ, ಇದು ಲಕ್ಷಾಂತರ ಶಾಲಾ ಮಕ್ಕಳಲ್ಲಿ ನಾವೀನ್ಯತೆ ಮೂಡಿಸಿದೆ. ಎಐಎಂ ಬೆಂಬಲಿತ ನವೋದ್ಯಮಗಳು ಸರ್ಕಾರ ಮತ್ತು ಖಾಸಗಿ ಈಕ್ವಿಟಿ ಹೂಡಿಕೆದಾರರಿಂದ 2000+ ಕೋಟಿ ರೂ.ಗಳನ್ನು ಸಂಗ್ರಹಿಸಿವೆ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ರಾಷ್ಟ್ರೀಯ ಆಸಕ್ತಿಯ ವಿಷಯಗಳ ಬಗ್ಗೆ ಎಐಎಂ ಹಲವಾರು ನಾವೀನ್ಯತೆಯ ಸವಾಲುಗಳನ್ನು ಕಾರ್ಯಗತಗೊಳಿಸಿದೆ. ಒಟ್ಟಾಗಿ, ಎಐಎಂನ ಕಾರ್ಯಕ್ರಮಗಳು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತವೆ, ನಾವಿನ್ಯತೆಯ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಪ್ರೇರೇಪಿಸುವ ಮೂಲಕ ಭಾರತದ ಜನಸಂಖ್ಯಾ ಲಾಭಾಂಶವನ್ನು ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ.
ಇದನ್ನು ಮುಂದುವರಿಯಲು ಸಂಪುಟ ಅನುಮೋದನೆ ನೀಡುವುದರೊಂದಿಗೆ, ಎ.ಐ.ಎಂ. ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸುಲಭವಾಗುವಂತಹ ಅಂತರ್ಗತ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ರೂಪಿಸುವ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.