ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬಿಹಾರದ ದರ್ಭಾಂಗದಲ್ಲಿ ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಅನುಮೋದನೆ ನೀಡಿದೆ.
ಇದನ್ನು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಅಡಿಯಲ್ಲಿ ಸ್ಥಾಪಿಸಲಾಗುವುದು. ಈ ಏಮ್ಸ್ ಗಾಗಿ ಎನ್ ಪಿ ಎ ಜೊತೆಗೆ 2,25,000 ರೂ. (ಸ್ಥಿರ) ಮೂಲ ವೇತನದಲ್ಲಿ (ವೇತನ ಮತ್ತು ಎನ್ ಪಿ ಎ 2,37,500 ರೂ. ಮೀರದಂತೆ) ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸಲು ಸಹ ಸಂಪುಟ ಅನುಮೋದನೆ ನೀಡಿತು.
1264 ಕೋಟಿ ರೂ. ಒಟ್ಟು ವೆಚ್ಚದ ಈ ಸಂಸ್ಥೆಯು ಕೇಂದ್ರ ಸರ್ಕಾರವು ಅನುಮೋದನೆ ನೀಡಿದ 48 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಜನ ಸಾಮಾನ್ಯರಿಗೆ ಪ್ರಯೋಜನಗಳು/ ಮುಖ್ಯಾಂಶಗಳು
- ಹೊಸ ಏಮ್ಸ್ 100 ಸ್ನಾತಕ (ಎಂಬಿಬಿಎಸ್) ಸೀಟುಗಳನ್ನು ಮತ್ತು 60 ಬಿಎಸ್ಸಿ (ನರ್ಸಿಂಗ್) ಸೀಟುಗಳನ್ನು ಹೊಂದಿರುತ್ತದೆ.
- ಹೊಸ ಏಮ್ಸ್ 15 ರಿಂದ 20 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿರುತ್ತದೆ.
- ಹೊಸ ಏಮ್ಸ್ 750 ಆಸ್ಪತ್ರೆಯ ಹಾಸಿಗೆಗಳನ್ನು ಹೊಂದಿರುತ್ತದೆ.
- ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಏಮ್ಸ್ ಮಾಹಿತಿಯ ಪ್ರಕಾರ, ಪ್ರತಿ ಹೊಸ ಏಮ್ಸ್ ದಿನಕ್ಕೆ ಸುಮಾರು 2000 ಹೊರ ರೋಗಿಗಳು ಮತ್ತು ತಿಂಗಳಿಗೆ ಸುಮಾರು 1000 ಒಳರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತದೆ.
- ಸ್ನಾತಕೋತ್ತರ ಮತ್ತು ಡಿಎಂ / ಎಂ.ಸಿ.ಎಚ್ ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗಳನ್ನು ಸಹ ಸೂಕ್ತ ಸಮಯದಲ್ಲಿ ಪ್ರಾರಂಭಿಸಲಾಗುವುದು.
ಯೋಜನೆಯ ವಿವರಗಳು:
ಹೊಸ ಏಮ್ಸ್ ಸ್ಥಾಪನೆಯು ಆಸ್ಪತ್ರೆ, ವೈದ್ಯಕೀಯ ಮತ್ತು ಶುಶ್ರೂಷಾ ಕೋರ್ಸ್‌ಗಳಿಗೆ ಬೋಧನಾ ಕಟ್ಟಡ, ವಸತಿ ಸಂಕೀರ್ಣ ಮತ್ತು ಸಂಬಂಧಿತ ಸೌಲಭ್ಯಗಳು / ಸೇವೆಗಳನ್ನು ನಿರ್ಮಾಣವನ್ನು ಒಳಗೊಂಡಿರುತ್ತದೆ. ನವದೆಹಲಿಯ ಏಮ್ಸ್ ಮತ್ತು ಇತರ ಆರು ಹೊಸ ಏಮ್ಸ್ ಮಾದರಿಯಲ್ಲಿ ಪಿಎಂಎಸ್‌ಎಸ್‌ವೈ ಹಂತ -1 ರ ಅಡಿಯಲ್ಲಿ ಇದನ್ನು ಕೈಗೊಳ್ಲಲಾಗುವುದು. ಈ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಶುಶ್ರೂಷಾ ಶಿಕ್ಷಣ ಮತ್ತು ಸಂಶೋಧನೆಗಳನ್ನು ಒದಗಿಸಲು ಹೊಸ ಏಮ್ಸ್ ಅನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
ಪ್ರಸ್ತಾವಿತ ಸಂಸ್ಥೆಯು 750 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಂದಿರುತ್ತದೆ. ಇದರಲ್ಲಿ ತುರ್ತು / ಅಪಘಾತ ಹಾಸಿಗೆಗಳು, ಐಸಿಯು ಹಾಸಿಗೆಗಳು, ಆಯುಷ್ ಹಾಸಿಗೆಗಳು, ಖಾಸಗಿ ಹಾಸಿಗೆಗಳು ಮತ್ತು ವಿಶೇಷ ಮತ್ತು ಸೂಪರ್ ವಿಶೇಷ ಹಾಸಿಗೆಗಳು ಸೇರಿವೆ. ಇದಲ್ಲದೆ, ವೈದ್ಯಕೀಯ ಕಾಲೇಜು, ಆಯುಷ್ ಬ್ಲಾಕ್, ಸಭಾಂಗಣ, ರಾತ್ರಿ ತಂಗುದಾಣ, ಅತಿಥಿ ಗೃಹ, ವಸತಿ ನಿಲಯಗಳು ಮತ್ತು ವಸತಿ ಸೌಲಭ್ಯಗಳು ಇರಲಿವೆ. ಹೊಸ ಏಮ್ಸ್ ಸ್ಥಾಪನೆಯು ಬಂಡವಾಳ ಸ್ವತ್ತುಗಳನ್ನು ಸೃಷ್ಟಿಸುತ್ತದೆ, ಇದಕ್ಕಾಗಿ ಆರು ಹೊಸ ಏಮ್ಸ್ ಮಾದರಿಯಲ್ಲಿ, ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಅಗತ್ಯವಾದ ವಿಶೇಷ ಮಾನವಶಕ್ತಿಯನ್ನು ಸೃಷ್ಟಿಸಲಾಗುತ್ತದೆ. ಈ ಸಂಸ್ಥೆಗಳ ವೆಚ್ಚವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿಎಂಎಸ್ಎಸ್ವೈ ಯೋಜನಾ ಬಜೆಟ್ ನ ಅನುದಾನದಿಂದ ಒದಗಿಸಲಾಗುತ್ತದೆ.
ಪರಿಣಾಮ:
ಹೊಸ ಏಮ್ಸ್ ಸ್ಥಾಪನೆಯು ಆರೋಗ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಪರಿವರ್ತನೆಯನ್ನು ತರುವುದಲ್ಲದೇ, ಈ ಪ್ರದೇಶದ ಆರೋಗ್ಯ ವೃತ್ತಿಪರರ ಕೊರತೆಯನ್ನು ಬಗೆಹರಿಸುತ್ತದೆ. ಹೊಸ ಏಮ್ಸ್ ಸ್ಥಾಪನೆಯು ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಯನ್ನು ಒದಗಿಸುವ ಉಭಯ ಉದ್ದೇಶವನ್ನು ಪೂರೈಸುತ್ತದೆ ಮತ್ತು ಈ ಪ್ರದೇಶದಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ದೊಡ್ಡ ಗುಂಪನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಸ್ಥೆಗಳು / ಸೌಲಭ್ಯಗಳ ಅಡಿಯಲ್ಲಿ ಲಭ್ಯವಾಗಲಿದೆ. ಹೊಸ ಏಮ್ಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಸಂಪೂರ್ಣ ಹಣವನ್ನು ಒದಗಿಸುತ್ತದೆ. ಹೊಸ ಏಮ್ಸ್ ನ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳನ್ನು ಸಹ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಭರಿಸುತ್ತದೆ.
ಉದ್ಯೋಗ ಸೃಷ್ಟಿ:
ರಾಜ್ಯದಲ್ಲಿ ಹೊಸ ಏಮ್ಸ್ ಸ್ಥಾಪಿಸುವುದರಿಂದ ವಿವಿಧ ಬೋಧಕವರ್ಗ ಮತ್ತು ಬೋಧಕೇತರ ಹುದ್ದೆಗಳಲ್ಲಿ ಸುಮಾರು 3000 ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಇದಲ್ಲದೆ, ಹೊಸ ಏಮ್ಸ್ ಸುತ್ತಮುತ್ತ ಬರುವ ಶಾಪಿಂಗ್ ಸೆಂಟರ್, ಕ್ಯಾಂಟೀನ್ ಮುಂತಾದ ಸೌಲಭ್ಯಗಳು ಮತ್ತು ಸೇವೆಗಳಿಂದಾಗಿ ಪರೋಕ್ಷವಾಗಿಯೂ ಉದ್ಯೋಗ ಸೃಷ್ಟಿಯಾಗಲಿದೆ. ಭೌತಿಕ ಮೂಲಸೌಕರ್ಯಗಳ ನಿರ್ಮಾಣ ಹಂತದಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
ಇದು ತೃತೀಯ ಆರೋಗ್ಯ-ರಕ್ಷಣೆಯ ಮೂಲಸೌಕರ್ಯಗಳಲ್ಲಿನ ಅಂತರವನ್ನು ನಿವಾರಿಸುತ್ತದೆ ಮತ್ತು ರಾಜ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳನ್ನು ಒದಗಿಸುತ್ತದೆ. ಏಮ್ಸ್ ಹೆಚ್ಚು ಅಗತ್ಯವಿರುವ ಸೂಪರ್ ಸ್ಪೆಷಾಲಿಟಿ / ತೃತೀಯ ಆರೋಗ್ಯ ಸೇವೆಯನ್ನು ಕೈಗೆಟುಕುವ ವೆಚ್ಚದಲ್ಲಿ, ಬಡವರಿಗೆ ಮತ್ತು ನಿರ್ಗತಿಕರಿಗೆ ಒದಗಿಸುತ್ತದೆ. ಇದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ / ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತರ ಆರೋಗ್ಯ ಕಾರ್ಯಕ್ರಮಗಳಿಗೆ ತರಬೇತಿ ಪಡೆದ ವೈದ್ಯಕೀಯ ಮಾನವಶಕ್ತಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಸಂಸ್ಥೆಯು ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ನೀಡುವ ಬೋಧನಾ ಸಂಪನ್ಮೂಲ / ತರಬೇತಿ ಪಡೆದ ಬೋಧಕವರ್ಗವನ್ನೂ ಸಹ ಸೃಷ್ಟಿಸುತ್ತದೆ.