ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಡೆಯಿತು. ರಫ್ತು ಸಾಲ ಖಾತ್ರಿ ನಿಗಮ ನಿಯಮಿತ(ಇಸಿಜಿಸಿ)ವು ಆರಂಭಿಕ ಷೇರು ಬಿಡುಗಡೆ(ಐಪಿಒ) ಮೂಲಕ ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಭೆ ಇಂದು ಅನುಮೋದನೆ ನೀಡಿತು.
ಷೇರು ಮಾರುಕಟ್ಟೆಯಲ್ಲಿ ಇದುವರೆಗೆ ನೋಂದಣಿ ಆಗದ ಕೇಂದ್ರ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮ(ಸಿಪಿಎಸ್ಇ)ವಾಗಿರುವ ಇಸಿಜಿಸಿ, 2018ರ ಸೆಬಿ ನಿಯಂತ್ರಣಗಳ ಅಡಿ, ಇದೀಗ ನೋಂದಣಿಗೆ ಸಾರ್ವಜನಿಕರಿಂದ ಷೇರುಗಳನ್ನು ಕ್ರೋಡೀಕರಿಸಿದೆ.
ಭಾರತ ಸರ್ಕಾರದ ಸಂಪೂರ್ಣ ಒಡೆತನ ಹೊಂದಿರುವ ರಫ್ತು ಸಾಲ ಖಾತ್ರಿ ನಿಗಮ ನಿಯಮಿತವು, ರಫ್ತು ವಹಿವಾಟಿನಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಸ್ಥಾಪನೆಯಾಗಿದೆ. ರಫ್ತುದಾರರಿಗೆ ಸಾಲ ಸೌಲಭ್ಯ, ಸಾಲ ಹಾನಿ (ರಿಸ್ಕ್) ವಿಮಾ ರಕ್ಷಣೆ ಮತ್ತು ಇತರೆ ಸಂಬಂಧಿತ ಸೇವೆಗಳನ್ನು ಇದು ಒದಗಿಸಲಿದೆ. ಈ ಕಂಪನಿಯು ಈಗಿರುವ 1 ಲಕ್ಷ ಕೋಟಿ ರೂಪಾಯಿ ಮೂಲ ಬಂಡವಾಳ ಬಾಧ್ಯತೆಯನ್ನು 2025-26ರ ಹೊತ್ತಿಗೆ ಗರಿಷ್ಠ 2.03 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.
ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಇಸಿಜಿಸಿಯ ಉದ್ದೇಶಿತ ಪ್ರಸ್ತಾವನೆಯು ಕಂಪನಿಯ ನೈಜ ಮಾರುಕಟ್ಟೆ ಮೌಲ್ಯವನ್ನು ಹೊರಹಾಕಲಿದೆ. ಜತೆಗೆ, ಕಂಪನಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಅವರ ಷೇರು ಬಂಡವಾಳ ಹಿಡಿತ ಹೆಚ್ಚಿಸಿ ಸಾರ್ವಜನಿಕ ಒಡೆತನವನ್ನು ಉತ್ತೇಜಿಸಲಿದೆ. ಇನ್ನೂ ವಿಶೇಷವಾಗಿ, ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಮೂಲಕ ಕಾರ್ಪೊರೇಟ್ ಆಡಳಿತವನ್ನು ಉತ್ತೇಜಿಸಲಿದೆ.
ಕಂಪನಿಯು ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಪ್ರಸ್ತಾವನೆಯು ಇಸಿಜಿಸಿಗೆ ಮಾರುಕಟ್ಟೆಯಲ್ಲಿ ತಾಜಾ ಬಂಡವಾಳ ಕ್ರೋಡೀಕರಿಸಲು ಅನುವು ಮಾಡಿಕೊಡಲಿದೆ. ಆರಂಭಿಕ ಷೇರು ಬಿಡುಗಡೆ ಮೂಲಕ ಅಥವಾ ತರುವಾಯ ಸಾರ್ವಜನಿಕ ಷೇರು ಕ್ರೋಡೀಕರಣದ ಅನುಸರಣೆ (ಫಾಲೋ-ಆನ್ ಪಬ್ಲಿಕ್ ಆಫರ್) ಮೂಲಕ ತಾಜಾ ಬಂಡವಾಳ ಸಂಗ್ರಹಕ್ಕೆ ನೋಂದಣಿ ಪ್ರಸ್ತಾವನೆ ಅನುವು ಮಾಡಿಕೊಡಲಿದೆ. ಈ ಮೂಲಕ ಗರಿಷ್ಠ ಬಂಡವಾಳ ಹೊಂದುವ ಬಾಧ್ಯತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಲಿದೆ.
ಸಾರ್ವಜನಿಕ ವಲಯದ ಘಟಕಗಳ ಬಂಡವಾಳ ಹಿಂತೆಗೆತದಿಂದ ಬರುವ ವರಮಾನವನ್ನು ಸಾಮಾಜಿಕ ವಲಯದ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲಾಗುತ್ತದೆ.