ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಮಹತ್ವದ ಸಭೆ ನಡೆಯಿತು. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೈಬ್ರಿಡ್ ವಾರ್ಷಿಕ ಅನುದಾನ ಮಾದರಿ(ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ)ಯಲ್ಲಿ ರಾಷ್ಟ್ರೀಯ ಹೆದ್ದಾರಿ-7 (ಜಿರಾಕ್‌ಪುರ-ಪಾಟಿಯಾಲ) ಜಂಕ್ಷನ್‌ನಿಂದ ಪ್ರಾರಂಭವಾಗಿ ರಾಷ್ಟ್ರೀಯ ಹೆದ್ದಾರಿ-5 (ಜಿರಾಕ್‌ಪುರ-ಪರ್ವಾನೂ) ಜಂಕ್ಷನ್‌ನಲ್ಲಿ ಕೊನೆಗೊಳ್ಳುವ 6 ಪಥದ ಜಿರಾಕ್‌ಪುರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಧಾನಮಂತ್ರಿಗಳ ಗತಿಶಕ್ತಿ ರಾಷ್ಟ್ರೀಯ ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್) ತತ್ವದ ಅಡಿ, ಸಮಗ್ರ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ಸುಗಮಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.
ಯೋಜನೆಯ ಒಟ್ಟು ಬಂಡವಾಳ ವೆಚ್ಚ 1878.31 ಕೋಟಿ ರೂ. ಆಗಿದೆ.
ಜಿರಾಕ್‌ಪುರದ ರಾಷ್ಟ್ರೀಯ ಹೆದ್ದಾರಿ-7 (ಚಂಡೀಗಢ-ಭಟಿಂಡಾ) ಜಂಕ್ಷನ್‌ನಿಂದ ಜಿರಾಕ್‌ಪುರ ಬೈಪಾಸ್ ರಸ್ತೆಪ್ರಾರಂಭವಾಗುತ್ತದೆ, ಈ ಯೋಜನೆಯು ಪಂಜಾಬ್ ರಾಜ್ಯದ ವ್ಯಾಪ್ತಿಯಲ್ಲಿ ಪಂಜಾಬ್ ಸರ್ಕಾರದ ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್)ಗೆ ಒಳಪಟ್ಟಿರುತ್ತದೆ. ಹರಿಯಾಣದ ಪಂಚಕುಲದಲ್ಲಿರುವ ರಾಷ್ಟ್ರೀಯ ಹೆದ್ದಾರಿ-5 (ಜಿರಾಕ್‌ಪುರ-ಪರ್ವಾನೂ) ಜಂಕ್ಷನ್‌ನಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಈ ಯೋಜನೆಯು ಪಂಜಾಬ್‌ನ ಜಿರಾಕ್‌ಪುರ ಮತ್ತು ಹರಿಯಾಣದ ಪಂಚಕುಲದ ಹೆಚ್ಚು ನಗರೀಕರಣಗೊಂಡ ಪ್ರದೇಶ ಮತ್ತು ಜನದಟ್ಟಣೆಯ ಪ್ರದೇಶವನ್ನು ತಪ್ಪಿಸುತ್ತದೆ.
ಪಾಟಿಯಾಲ, ದೆಹಲಿ, ಮೊಹಾಲಿ ಏರೋಸಿಟಿಯಿಂದ ಸಂಚಾರ ತಿರುಗಿಸುವ ಮೂಲಕ ಮತ್ತು ಹಿಮಾಚಲ ಪ್ರದೇಶಕ್ಕೆ ನೇರ ಸಂಪರ್ಕ ಒದಗಿಸುವ ಮೂಲಕ ಜಿರಾಕ್‌ಪುರ, ಪಂಚಕುಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಪ್ರಸ್ತುತ ಪ್ರಸ್ತಾವನೆಯು ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ, ಎನ್ಎಚ್-7, ಎನ್ಎಚ್-5 ಮತ್ತು ಎನ್ಎಚ್-152ರ ಜನದಟ್ಟಣೆ ಇರುವ ನಗರಗಳಲ್ಲಿ ರಗಳೆ-ಮುಕ್ತ ಸಂಚಾರ ಖಚಿತಪಡಿಸುವ ಗುರಿ ಹೊಂದಿದೆ.
ಕೇಂದ್ರ ಸರ್ಕಾರವು ಚಂಡೀಗಢ, ಪಂಚಕುಲ ಮತ್ತು ಮೊಹಾಲಿ ನಗರಗಳ ಜನದಟ್ಟಣೆ ನಿವಾರಿಸಲು ರಸ್ತೆ ಜಾಲ ಅಭಿವೃದ್ಧಿಪಡಿಸುವ ಕ್ರಮ ಕೈಗೊಂಡಿದ್ದು, ನಕ್ಷೆಯಲ್ಲಿ ಸೂಚಿಸಿರುವಂತೆ ಇದು ವರ್ತುಲ ರಸ್ತೆಯಾಗಿ ರೂಪುಗೊಳ್ಳುತ್ತದೆ. ಜಿರಾಕ್‌ಪುರ ಬೈಪಾಸ್ ಅಭಿವೃದ್ಧಿಯು ಈ ಯೋಜನೆಯ ಪ್ರಮುಖ ಭಾಗವಾಗಿದೆ.
Cabinet approval for the construction of the 6-lane Zirakpur Bypass will reduce travel time and also improve connectivity to Himachal Pradesh and NCR. It is also in line with our PM GatiShakti effort to build seamless, future-ready transport infrastructure.…
— Narendra Modi (@narendramodi) April 9, 2025