ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಶ್ರೀ ಗುರು ನಾನಕ್ ದೇವ್ ಜೀ ಅವರ 550 ನೇ ಜನ್ಮ ವರ್ಷವನ್ನು ಆಚರಿಸಲು ಗೊತ್ತುವಳಿಯನ್ನು ಅಂಗೀಕರಿಸಿತು. ಮುಂದಿನ ವರ್ಷ ಗುರು ನಾನಕ್ ದೇವ್ ಜೀ ಅವರ 550 ನೇ ಜನ್ಮ ವರ್ಷ ಬರಲಿದ್ದು ದೇಶದ ಮಟ್ಟದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಇದನ್ನು ಅದ್ದೂರಿಯಾಗಿ ಮತ್ತು ಸೂಕ್ತ ರೀತಿಯಲ್ಲಿ ರಾಜ್ಯ ಸರಕಾರಗಳು ಮತ್ತು ವಿದೇಶದಲ್ಲಿರುವ ಭಾರತದ ಮಿಶನ್ ಗಳ ಜೊತೆಗೂಡಿ ಆಚರಿಸಲಾಗುವುದು. ಗುರು ನಾನಕ್ ದೇವ್ ಜೀ ಅವರ ಬೋಧನೆಗಳಾದ ಪ್ರೀತಿ, ಶಾಂತಿ, ಸಮಾನತೆ, ಮತ್ತು ಸಹೋದರತ್ವಗಳಿಗೆ ಚಿರಂತನ ಮೌಲ್ಯವಿದೆ.
ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಪ್ರಮುಖಾಂಶಗಳು ಈ ಕೆಳಗಿನಂತಿವೆ:
ಕರ್ತಾರ್ಪುರ ಸಾಹೀಬ್ ಕಾರಿಡಾರ್ ಅಭಿವೃದ್ಢಿ :
ಪ್ರಮುಖ ನಿರ್ಧಾರವೊಂದರಲ್ಲಿ ಕೇಂದ್ರ ಸಂಪುಟವು ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ನಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಮತ್ತು ಅಭಿವೃದ್ದಿಗೆ ತನ್ನ ಅನುಮೋದನೆ ನೀಡಿತು. ಇದರಿಂದ ಭಾರತದಲ್ಲಿ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ರಾವಿ ನದಿ ದಂಡೆಯಲ್ಲಿರುವ ದುರುದ್ವಾರಾ ದರ್ಬಾರ್ ಸಾಹೀಬ್ ಕರ್ತಾರ್ಪುರಕ್ಕೆ ಭೇಟಿ ನೀಡಲು ಅನುಕೂಲವಾಗಲಿದೆ. ಇಲ್ಲಿ ಗುರು ನಾನಕ್ ದೇವ್ ಜೀ ಅವರು 18 ವರ್ಷ ಕಾಲ ತಂಗಿದ್ದರು. ಆ ಬಳಿಕ ಯಾತ್ರಾರ್ಥಿಗಳು ವರ್ಷಪೂರ್ತಿ ಪವಿತ್ರ ದೇವಾಲಯಕ್ಕೆ ಭೇಟಿ ನೀಡುವುದು ಸಾಧ್ಯವಾಗುತ್ತದೆ.
ಕರ್ತಾರ್ಪುರ ಕಾರಿಡಾರನ್ನು ಭಾರತ ಸರಕಾರದ ಹಣಕಾಸು ನೆರವಿನೊಂದಿಗೆ ಸಮಗ್ರ ಅಭಿವೃದ್ಧಿ ಯೋಜನೆಯಾಗಿ ಅನುಷ್ಟಾನಕ್ಕೆ ತರಲಾಗುವುದು. ಇದು ಸುಲಲಿತ ಸಂಚಾರಕ್ಕೆ ಅನುಕೂಲವಾಗಿರುವಂತೆ , ಆಧುನಿಕ ಸೌಲಭ್ಯಗಳೊಂದಿಗೆ ರೂಪಿಸಲಾಗುವುದು. ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಭಾರತ ಸರಕಾರವು ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತದೆ. ಪಾಕಿಸ್ತಾನ ಸರಕಾರಕ್ಕೆ ಸಿಖ್ ಸಮುದಾಯದ ಭಾವನೆಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗುತ್ತದೆ ಮತ್ತು ಅದರ ಭೂಭಾಗದಲ್ಲಿ ಕಾರಿಡಾರ್ ಅಭಿವೃದ್ಧಿ ಮಾಡಿ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಕೋರಲಾಗುತ್ತದೆ.
ಸುಲ್ತಾನ್ ಪುರ್ ಲೋಧಿಯ ಅಭಿವೃದ್ಧಿ:
ಶ್ರೀ ಗುರು ನಾನಕ್ ದೇವ್ ಜೀ ಅವರ ಜೀವನದ ಜೊತೆ ಸಂಬಂಧ ಹೊಂದಿರುವ ಚಾರಿತ್ರಿಕ ಪಟ್ಟಣ ಸುಲ್ತಾನ್ ಪುರ ಲೋಧಿಯನ್ನು ಪಾರಂಪರಿಕ ಪಟ್ಟಣವಾಗಿ ಅಭಿವೃದ್ಧಿಪಡಿಸುವುದಕ್ಕೂ ಕೇಂದ್ರ ಸಂಪುಟವು ನಿರ್ಧರಿಸಿತು ಮತ್ತು ಇದನ್ನು ಸ್ಮಾರ್ಟ್ ಸಿಟಿ ತತ್ವಗಳ ಆಧಾರದಲ್ಲಿ ಮತ್ತು ಇಂಧನ ದಕ್ಷತೆಯೂ ಸೇರಿದಂತೆ ಶ್ರೀ ಗುರು ನಾನಕ್ ದೇವ್ ಜೀ ಅವರು ಪ್ರಕೃತಿಗೆ ಸಂಬಂಧಿಸಿದ ಸಹ್ಯ ಮತ್ತು ಪೂಜ್ಯತೆಗೆ ಆದ್ಯತೆ ನೀಡಿದ್ದನ್ನು ಪರಿಗಣಿಸಿ ಅದನ್ನು ಪ್ರಚುರಪಡಿಸುವಂತಹ ಮಾದರಿಯಲ್ಲಿ ಈ ಅಭಿವೃದ್ಧಿಯನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿ ಸುಲ್ತಾನ್ ಪುರ ಲೋಧಿಯಲ್ಲಿ ಶ್ರೀ ಗುರು ನಾನಕ್ ದೇವ್ ಜೀ ಕಾಲದ ಜನಜೀವನವನ್ನು ಪ್ರತಿನಿಧಿಸುವಂತೆ “ಪಿಂಡ್ ಬಾಬೆ ನಾನಕ್ ದಾ” ಪಾರಂಪರಿಕ ಸಂಕೀರ್ಣವನ್ನು ಸ್ಥಾಪಿಸಲಾಗುತ್ತದೆ. ಸುಲ್ತಾನ್ ಪುರ ಲೋಧಿ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಮತ್ತು ಎಲ್ಲಾ ಆಧುನಿಕ ಸೌಕರ್ಯಗಳನ್ನು ಒದಗಿಸಲಾಗುತ್ತದೆ.
ಅಂತರ್ ಧರ್ಮೀಯ ಅಧ್ಯಯನ ಕೇಂದ್ರ ಮತ್ತು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಪೀಠಗಳು:
ಅಂತರ್ ಧರ್ಮೀಯ ಅಧ್ಯಯನ ಕೇಂದ್ರವನ್ನು ಅಮೃತಸರದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುವುದು. ಶ್ರೀ ಗುರು ನಾನಕ್ ದೇವ್ ಜೀ ಕುರಿತ ಪೀಠಗಳನ್ನು ಯುನೈಟೆಡ್ ಕಿಂಗ್ಡಂ ಮತ್ತು ಕೆನಡಾಗಳಲ್ಲಿ ಸ್ಥಾಪಿಸಲಾಗುವುದು. ಶ್ರೀ ಗುರು ನಾನಕ್ ದೇವ್ ಜೀ ಅವರ ಜೀವನ ಮತ್ತು ಬೋಧನೆಗಳನ್ನು ಕುರಿತಂತೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹೊಸದಿಲ್ಲಿಯಲ್ಲಿ ಆಯೋಜಿಸಲಾಗುವುದು.
ದೇಶಾದ್ಯಂತ ಮತ್ತು ಜಾಗತಿಕ ಮಟ್ಟದಲ್ಲಿ ಆಚರಣೆ:
ಶ್ರೀ ಗುರು ನಾನಕ್ ದೇವ್ ಜೀ ಅವರ 550 ನೇ ಜನ್ಮ ವರ್ಷವನ್ನು ಸೂಕ್ತ ರೀತಿಯಲ್ಲಿ ಆಚರಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗುವುದು. ಸಾಗರೋತ್ತರ ಭಾರತೀಯ ಮಿಶನ್ ಗಳು ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿವೆ.
ಧಾರ್ಮಿಕ ಚಟುವಟಿಕೆಗಳು ಮತ್ತು ಪ್ರಕಟಣೆಗಳು:
ದೇಶಾದ್ಯಂತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶ್ರೀ ಗುರು ನಾನಕ್ ದೇವ್ ಜೀ ಮತ್ತು ಗುರುಬಾನಿ ಕುರಿತಂತೆ ದೂರದರ್ಶನವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ನ್ಯಾಶನಲ್ ಬುಕ್ ಟ್ರಸ್ಟ್ ವಿವಿಧ ಭಾರತೀಯ ಭಾಷೆಗಳಲ್ಲಿ ಗುರುಬಾನಿಯನ್ನು ಪ್ರಕಟಿಸಲಿದೆ. ಶ್ರೀ ಗುರು ನಾನಕ್ ದೇವ್ ಜೀ ಅವರ ಬರಹಗಳನ್ನು ವಿಶ್ವ ಭಾಷೆಗಳಲ್ಲಿ ಪ್ರಕಟಿಸುವಂತೆ ಯುನೆಸ್ಕೋವನ್ನು ಕೋರಲಾಗುವುದು.
ಯಾತ್ರಾರ್ಥಿಗಳಿಗೆ ವಿಶೇಷ ರೈಲುಗಳು:
ರೈಲ್ವೇ ಸಚಿವಾಲಯವು ಶ್ರೀ ಗುರು ನಾನಕ್ ದೇವ್ ಜೀ ಅವರು ಸಂಬಂಧ ಹೊಂದಿರುವ ವಿವಿಧ ಪವಿತ್ರ ಸ್ಥಳಗಳ ಮೂಲಕ ಸಾಗುವ ರೈಲನ್ನು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗಾಗಿ ಓಡಿಸಲಿದೆ.