ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟವು ನಗರಗಳ ಆಯ್ದ ಯೋಜನೆಗಳ ಆವಿಷ್ಕಾರ, ಸಂಯೋಜನೆ ಮತ್ತು ಸುಸ್ಥಿರಗೊಳಿಸುವ ನಗರ ಹೂಡಿಕೆಗಳಿಗೆ(ಸಿಐಟಿಐಐಎಸ್ 2.0) ಅನುಮೋದನೆ ನೀಡಿದೆ. ಸಿಐಟಿಐಐಎಸ್ 2.0 ಎಂಬುದು ಫ್ರೆಂಚ್ ಅಭಿವೃದ್ಧಿ ಏಜೆನ್ಸಿ(ಎಎಫ್ ಡಿ), ಕ್ರೆಡಿಟಾನ್ ಸ್ಟಾಲ್ಟ್ ಫರ್ ವೀಡರಾಫ್ ಬೌ(ಕೆಎಫ್ ಡಬ್ಲ್ಯು), ಐರೋಪ್ಯ ಒಕ್ಕೂಟ ಮತ್ತು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ(ಎನ್ಐಯುಎ) ಸಹಭಾಗಿತ್ವದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ನಾಲ್ಕು ವರ್ಷಗಳ ಅವಧಿಗೆ ಅಂದರೆ 2023ರಿಂದ 2027ರ ವರೆಗೆ.ನಡೆಯಲಿದೆ.
ನಗರ ಮಟ್ಟದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಆಧಾರಿತ ಸುಧಾರಣಾ ಕ್ರಮಗಳು ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆ ಮತ್ತು ಜ್ಞಾನದ ಪ್ರಸರಣ ಕೇಂದ್ರೀಕರಿಸುವ ಮೂಲಕ ಸುಸ್ಥಿರ ಅಥವಾ ಪರಿಸರಸ್ನೇಹಿ ಆರ್ಥಿಕತೆಯನ್ನು ಉತ್ತೇಜಿಸುವ ಸ್ಪರ್ಧಾತ್ಮಕವಾಗಿ ಆಯ್ಕೆ ಮಾಡಿದ ಯೋಜನೆಗಳನ್ನು ಬೆಂಬಲಿಸುವುದು ಈ ಕಾರ್ಯಕ್ರಮವು ಉದ್ದೇಶವಾಗಿದೆ.
ಆಯ್ದ ನಗರ ಯೋಜನೆಗಳಿಗೆ(ಸಿಐಟಿಐಐಎಸ್ 2.0) ಫ್ರೆಂಚ್ ಅಭಿವೃದ್ಧಿ ಏಜೆನ್ಸಿಯು 1,760 ಕೋಟಿ ರೂ.(200 ದಶಲಕ್ಷ ಯೂರೊ), ಕೆಎಫ್ ಡಬ್ಲ್ಯು 100 ದಶಲಕ್ಷ ಯೂರೊ ಮತ್ತು ಐರೋಪ್ಯ ಒಕ್ಕೂಟವು ತಾಂತ್ರಿಕ ನೆರವಾಗಿ 106 ಕೋಟಿ ರೂ.(12 ದಶಲಕ್ಷ ಯೂರೊ) ಅನುದಾನ ಒದಗಿಸಲಿವೆ.
ಸಿಐಟಿಐಐಎಸ್ 1.0 ಯೋಜನೆಯ ಕಲಿಕೆಗಳು ಮತ್ತು ಯಶಸ್ಸನ್ನು ಹತೋಟಿ ತರುವ ಮತ್ತು ಅಳೆಯುವ ಗುರಿಯನ್ನು ಸಿಐಟಿಐಐಎಸ್ 2.0 ಯೋಜನೆ ಹೊಂದಿದೆ. 2018 ರಲ್ಲಿ ಸಿಐಟಿಐಐಎಸ್ 1.0 ಯೋಜನೆಯನ್ನು ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ, ಎಎಫ್ ಡಿ, ಐರೋಪ್ಯ ಒಕ್ಕೂಟ ಮತ್ತು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ(ಎನ್ಐಯುಎ) ಜಂಟಿಯಾಗಿ ಪ್ರಾರಂಭಿಸಿದ್ದು, ಒಟ್ಟು 933 ಕೋಟಿ ರೂ.(106 ದಶಲಕ್ಷ ಯೂರೊ) ವೆಚ್ಚವಾಗಿದೆ. ಸಿಐಟಿಐಐಎಸ್ 1.0 ಯೋಜನೆಯು 3 ಘಟಕಗಳನ್ನು ಒಳಗೊಂಡಿದೆ:
ಘಟಕ 1: 12 ನಗರ ಮಟ್ಟದ ಯೋಜನೆಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ.
ಘಟಕ 2: ಒಡಿಶಾ ರಾಜ್ಯದಲ್ಲಿ ಸಾಮರ್ಥ್ಯ-ಅಭಿವೃದ್ಧಿ ಚಟುವಟಿಕೆಗಳು.
ಘಟಕ 3: ಸಿಐಟಿಐಐಎಸ್ 1.0 ಯೋಜನೆಗಾಗಿ ಕಾರ್ಯಕ್ರಮ ನಿರ್ವಹಣಾ ಘಟಕ (ಪಿಎಂಯು) ಆಗಿದ್ದ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ(ಎನ್ಐಯುಎ) ಕೈಗೊಂಡ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ನಗರ ನಿರ್ವಹಣೆ ಉತ್ತೇಜಿಸುವುದಾಗಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ತಜ್ಞರ ಮೂಲಕ ಎಲ್ಲಾ 3 ಹಂತಗಳಲ್ಲಿ ಕಾರ್ಯಕ್ರಮದ ಅಡಿ ತಾಂತ್ರಿಕ ನೆರವು ಲಭ್ಯವಾಯಿತು. ಇದು ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಗಳ ಆಧಾರದ ಮೇಲೆ ವಿಶಿಷ್ಟವಾದ ಸವಾಲು-ಚಾಲಿತ ಹಣಕಾಸು ಮಾದರಿಯ ಮೂಲಕ ನವೀನ, ಸಮಗ್ರ ಮತ್ತು ಸುಸ್ಥಿರ ನಗರಾಭಿವೃದ್ಧಿ ಅಭ್ಯಾಸಗಳ ಮುಖ್ಯವಾಹಿನಿಗೆ ಕಾರಣವಾಗಿದೆ.
ಸಿಐಟಿಐಐಎಸ್ 1.0 ಮಾದರಿ ಅನುಸರಿಸಿ, ಸಿಐಟಿಐಐಎಸ್ 2.0 ಯೋಜನೆಯು 3 ಪ್ರಮುಖ ಅಂಶಗಳನ್ನು ಹೊಂದಿದೆ:
ಘಟಕ 1: ಸಮಗ್ರ ತ್ಯಾಜ್ಯ ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಿ ಸುಸ್ಥಿರ ಅಥವಾ ಪರಿಸರಸ್ನೇಹಿ ಆರ್ಥಿಕತೆ(ಸರ್ಕುಲರ್ ಎಕಾನಮಿ) ಉತ್ತೇಜಿಸಲು ಸ್ಪರ್ಧಾತ್ಮಕವಾಗಿ ಆಯ್ಕೆ ಮಾಡಿದ ಯೋಜನೆಗಳ ಮೂಲಕ 18 ಸ್ಮಾರ್ಟ್ ಸಿಟಿಗಳಲ್ಲಿ ಹವಾಮಾನ ಚೇತರಿಕೆ, ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಮೇಲೆ ಕೇಂದ್ರೀಕೃತ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಮತ್ತು ತಾಂತ್ರಿಕ ಬೆಂಬಲ.
ಘಟಕ 2: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬೇಡಿಕೆಯ ಆಧಾರದ ಮೇಲೆ ಬೆಂಬಲಕ್ಕೆ ಅರ್ಹವಾಗಿರುತ್ತವೆ. (ಎ). ರಾಜ್ಯಗಳಿಗೆ ತಮ್ಮ ಅಸ್ತಿತ್ವದಲ್ಲಿರುವ ರಾಜ್ಯ ಹವಾಮಾನ ಕೇಂದ್ರಗಳನು, ಹವಾಮಾನ ಕೋಶಗಳು ಮತ್ತು ಅವುಗಳಿಗೆ ಸರಿ ಸಮಾನವಾದವುಗಳನ್ನು ಸ್ಥಾಪಿಸಲು, ಬಲಪಡಿಸಲು, ಅಭಿವೃದ್ಧಿಪಡಿಸಲು ಬೆಂಬಲ ಒದಗಿಸಲಾಗುವುದು. (ಬಿ). ರಾಜ್ಯ ಮತ್ತು ನಗರ ಮಟ್ಟದ ಹವಾಮಾನ ದತ್ತಾಂಶ ವೀಕ್ಷಣಾಲಯಗಳನ್ನು ನಿರ್ಮಿಸುವುದು. (ಸಿ). ಹವಾಮಾನ-ದತ್ತಾಂಶ ಚಾಲಿತ ಯೋಜನೆಯನ್ನು ಸುಗಮಗೊಳಿಸಲು, ಹವಾಮಾನ ಕ್ರಿಯಾಯೋಜನೆಗಳನ್ನು ಅಭಿವೃದ್ಧಿಪಡಿಸುವುದು. (ಡಿ). ಪುರಸಭೆ ಅಧಿಕಾರಿಗಳ ಸಾಮರ್ಥ್ಯ ನಿರ್ಮಿಸುವುದು. ಈ ಉದ್ದೇಶಗಳನ್ನು ಸಾಧಿಸಲು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ(ಎನ್ಐಯುಎ)ಯಲ್ಲಿ ಪಿಎಂಯು ರಾಜ್ಯ ಸರ್ಕಾರಗಳಿಗೆ ತಾಂತ್ರಿಕ ನೆರವು ಮತ್ತು ಕಾರ್ಯತಂತ್ರದ ಬೆಂಬಲ ಒದಗಿಸುವುದನ್ನು ಸಂಘಟಿಸುತ್ತದೆ.
ಘಟಕ 3: ಎಲ್ಲಾ 3 ಹಂತಗಳಲ್ಲಿ ಮಧ್ಯಸ್ಥಿಕೆ; ಕೇಂದ್ರ, ರಾಜ್ಯ ಮತ್ತು ನಗರಗಳು ಸಾಂಸ್ಥಿಕ ಬಲವರ್ಧನೆ, ಜ್ಞಾನ ಪ್ರಸಾರ, ಪಾಲುದಾರಿಕೆ, ಕಟ್ಟಡ ಸಾಮರ್ಥ್ಯ, ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಭಾರತದ ನಗರಗಳಲ್ಲಿ ಮತ್ತಷ್ಟು ಹವಾಮಾನ ಆಡಳಿತವನ್ನು ಎಲ್ಲಾ ರಾಜ್ಯಗಳು ಮತ್ತು ನಗರಗಳಾದ್ಯಂತ ಹೆಚ್ಚಿಸುವುದನ್ನು ಬೆಂಬಲಿಸುತ್ತದೆ.
ಸಿಐಟಿಐಐಸ್ 2.0 ತನ್ನ ಚಾಲ್ತಿಯಲ್ಲಿರುವ ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಭಾರತ ಸರ್ಕಾರದ ಹವಾಮಾನ ಕ್ರಮಗಳನ್ನು ಪೂರೈಸುತ್ತದೆ (ಸುಸ್ಥಿರ ಆವಾಸಸ್ಥಾನದ ರಾಷ್ಟ್ರೀಯ ಮಿಷನ್, ಅಮೃತ್ 2.0, ಸ್ವಚ್ಛ ಭಾರತ್ ಮಿಷನ್ 2.0 ಮತ್ತು ಸ್ಮಾರ್ಟ್ ಸಿಟೀಸ್ ಮಿಷನ್). ಹಾಗೆಯೇ, ಭಾರತದ ಉದ್ದೇಶಿತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳಿಗೆ (INDC) ಮತ್ತು ಹವಾಮಾನ ಬದಲಾವಣೆ ಸಮ್ಮೇಳನ(COP26)ದ ಬದ್ಧತೆಗಳಿಗೆ ಸಕಾರಾತ್ಮಕ ಕೊಡುಗೆ ನೀಡುತ್ತದೆ.