ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಜೆಟ್ ಅನ್ನು ಶ್ಲಾಘಿಸಿದ್ದು, ಇದು ನವ ಭಾರತದ ಬಜೆಟ್ ಮತ್ತು ದೇಶಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.
2019-20ರ ಸಾಲಿನ ಬಜೆಟ್ ಮಂಡನೆಯ ಬಲಿಕ ಸರಣಿ ಟ್ವೀಟ್ ಮತ್ತು ಹೇಳಿಕೆ ನೀಡಿರುವ ಅವರು, 12 ಕೋಟಿ ರೈತರು ಮತ್ತು ಅವರ ಕುಟುಂಬದವರು, 3 ಕೋಟಿ ಮಧ್ಯಮವರ್ಗದ ತೆರಿಗೆದಾರರು, ವೃತ್ತಿಪರರು ಮತ್ತು ಅವರ ಕುಟುಂಬದವರು ಮತ್ತು 30-40 ಕೋಟಿ ಕಾರ್ಮಿಕರಿಂದ ನವ ಭಾರತದ ಬಜೆಟ್ ಧನ್ಯವಾದ ಸ್ವೀಕರಿಸುತ್ತದೆ ಎಂದಿದ್ದಾರೆ.
ಎನ್.ಡಿ.ಎ. ಸರ್ಕಾರದ ಅಭಿವೃದ್ಧಿ ಉಪಕ್ರಮಗಳು ರೈತರಿಂದ ಹಿಡಿದು ಮಧ್ಯಮವರ್ಗದವರ ಕಲ್ಯಾಣ, ಉತ್ಪಾದಕರಿಂದ ಹಿಡಿದು ಎಂ.ಎಸ್.ಎಂ.ಇ.ವರೆಗೆ ತೆರಿಗೆ ವಿನಾಯಿತಿ, ಆರೋಗ್ಯದಿಂದ ವಸತಿವರೆಗೆ, ಅಭಿವೃದ್ಧಿಯ ವೇಗದ ಹೆಚ್ಚಳದಿಂದ ನವಭಾರತದವರೆಗೆ ಹಲವರ ಬದುಕನ್ನು ತಟ್ಟಿದ್ದು, ಅದು ಈ ಬಜೆಟ್ ನಲ್ಲಿ ಪ್ರತಿಬಿಂಬಿತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಅಲುಗಾಡದ ದಾರಿದ್ರ್ಯದಿಂದ ಹೆಚ್ಚು ಜನರನ್ನು ಹೊರ ತರಲಾಗಿದೆ ಎಂಬುದು ಸಂತಸದ ಸಂಗತಿ ಎಂದು ಅವರು ಹೇಳಿದ್ದಾರೆ. ನಮ್ಮ ನಿಯೋ ಮಧ್ಯಮವರ್ಗ ಮತ್ತು ಅವರ ಕನಸುಗಳು ಹೆಚ್ಚುತ್ತಿವೆ ಎಂದು ತಿಳಿಸಿರುವ ಪ್ರಧಾನಮಂತ್ರಿ, ತೆರಿಗೆಯಲ್ಲಿನ ಪರಿಹಾರಕ್ಕಾಗಿ ಮಧ್ಯಮವರ್ಗದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಾಗಿ ಮಧ್ಯಮವರ್ಗದವರಿಗೆ ವಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಜೆಟ್ ನಲ್ಲಿ ರೈತರ ಪರವಾದ ಉಪಕ್ರಮಗಳ ಕುರಿತಂತೆ, ಹಲವಾರು ವರ್ಷಗಳಿಂದ ರೈತರಿಗಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಆದರೆ, ಹಲವು ರೈತರು ಈ ಯೋಜನೆಗಳ ಅಡಿಯಲ್ಲಿ ಬಂದೇ ಇಲ್ಲ ಎಂಬುದು ದುಃಖದ ಸಂಗತಿ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿ ರೈತರ ಕಲ್ಯಾಣದಲ್ಲಿ ಐತಿಹಾಸಿಕ ಕ್ರಮವಾಗಿದ್ದು, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಪಶು ಸಂಗೋಪನೆ ವಲಯ, ಮೀನುಗಾರಿಕೆಯನ್ನು ನವ ಭಾರತದ ಬಜೆಟ್ ನಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಸಂಘಟಿತ ವಲಯದವರ ಹಿತಾಸಕ್ತಿಯನ್ನು ಕಾಯುವ ಅಗತ್ಯವನ್ನು ಒತ್ತಿ ಹೇಳಿರುವ ಪ್ರಧಾನಮಂತ್ರಿಯವರು, ಪಿ.ಎಂ. ಶ್ರಮ ಯೋಗಿ ಮಾನ್ ಧನ್ ಯೋಜನೆಯಿಂದ ದೊಡ್ಡ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಈ ವಲಯಕ್ಕೆ ಅವರ ಹಿತಾಸಕ್ತಿಯನ್ನು ರಕ್ಷಿಸುವ ಹೆಚ್ಚಿನ ಅಗತ್ಯವಿದೆ ಮತ್ತು ನವ ಭಾರತದ ಬಜೆಟ್ ಅದನ್ನು ಮಾಡಿದೆ ಎಂದು ಹೇಳಿದ್ದಾರೆ. ಆಯುಷ್ಮಾನ್ ಭಾರತ ಯೋಜನೆ ಮತ್ತು ಸಾಮಾಜಿಕ ಭದ್ರತೆ ಯೋಜನೆಗಳು ಸಹ ಅವರ ಬದುಕನ್ನು ಸ್ಪರ್ಶಿಸಲಿವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಸಮಾಜದ ಎಲ್ಲ ವರ್ಗಕ್ಕೂ ಅಭಿವೃದ್ಧಿಯ ಲಾಭ ತಲುಪುವುದನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಪ್ರತಿಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಬಜೆಟ್ ಬಡವರ ಸಬಲೀಕರಣ ಮಾಡುತ್ತದೆ, ರೈತರಿಗೆ ಚೈತನ್ಯ ನೀಡುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಇಂಬು ನೀಡುತ್ತದೆ ಎಂದು ತಿಳಿಸಿದ್ದಾರೆ.”