ಗ್ಲಾಸ್ಗೊದಲ್ಲಿ ನವೆಂಬರ್ 1ರಂದು ಜರುಗಿದ ಸಿಒಪಿ26 ವಿಶ್ವ ನಾಯಕರ ಸಮಾವೇಶದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್|ಡಂ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
- ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಒಡಂಬಡಿಕೆ ಸಮಾವೇಶ ಸಿಒಪಿ26 ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಕೆ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ಅವರನ್ನು ಅಭಿನಂದಿಸಿದರು. ಹವಾಮಾನ ಬದಲಾವಣೆಯ ಪರಿಣಾಮಗಳ ತಗ್ಗಿಸುವಿಕೆ ಮತ್ತು ಪ್ಯಾರಿಸ್ ಒಪ್ಪಂದದ ನೀತಿ ನಿಯಮಗಳ ಅಳವಡಿಕೆಯ ಜಾಗತಿಕ ಕ್ರಮಗಳ ಮೇಲ್ವಿಚಾರಣೆಗೆ ಕೈಗೊಂಡ ವೈಯಕ್ತಿಕ ನಾಯಕತ್ವ ಕ್ರಮಗಳನ್ನು ಮೋದಿ ಅಭಿನಂದಿಸಿದರು. ಹವಾಮಾನ ಬದಲಾವಣೆಯ ಕ್ರಮಗಳಿಗಾಗಿ ಹಣಕಾಸು, ತಂತ್ರಜ್ಞಾನ, ಅನುಶೋಧನೆ, ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟ (ಐಎಸ್ಎ) ಮತ್ತು ವಿಪತ್ತು ಪ್ರತಿಬಂಧಕ ಮೂಲಸೌಕರ್ಯ ಮೈತ್ರಿಕೂಟ(ಸಿಡಿಆರ್|ಐ)ದ ಅಡಿ ನವೀಕರಿಸಬಹುದಾದ ಮತ್ತು ಸ್ವಚ್ಛ ತಂತ್ರಜ್ಞಾನಗಳಂತಹ ಜಂಟಿ ಉಪಕ್ರಮಗಳು ಮತ್ತು ಹಸಿರು ಜಲಜನಕ( ಹೈಡ್ರೋಜನ್) ಅಳವಡಿಕೆಗೆ ಭಾರತವು ಯುಕೆ ಜತೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು.
- ಭಾರತ ಮತ್ತು ಯುಕೆ ನಡುವೆ ವ್ಯಾಪಾರ, ಆರ್ಥಿಕತೆ, ಜನರ ನಡುವೆ ಸಂಪರ್ಕ, ಆರೋಗ್ಯ, ರಕ್ಷಣೆ ಮತ್ತು ಭದ್ರತಾ ವಲಯಗಳಿಗೆ ಸಂಬಂಧಿಸಿದ ಮಾರ್ಗಸೂಚಿ-2030 ಆದ್ಯತೆಗಳ ಕುರಿತು ಉಭಯ ನಾಯಕರು ಪರಾಮರ್ಶೆ ನಡೆಸಿದರು. ಮುಕ್ತ ವ್ಯಾಪಾರ ಸಂಧಾನ ಅನಾವರಣಕ್ಕೆ ಕೈಗೊಂಡ ಕ್ರಮಗಳು ಸೇರಿದಂತೆ ವರ್ಧಿತ ವ್ಯಾಪಾರ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಗಳ ಕುರಿತು ಉಭಯ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು.
- ಅಫ್ಘಾನಿಸ್ತಾನ, ಭಯೋತ್ಪಾದನೆ ನಿಗ್ರಹ, ಇಂಡೋ-ಪೆಸಿಫಿಕ್ ವಲಯ, ಸರಕುಗಳ ಪೂರೈಕೆ ಸರಪಳಿ ಪರಿಸ್ಥಿತಿ, ಕೋವಿಡ್ ನಂತರದ ಜಾಗತಿಕ ಆರ್ಥಿಕ ಚೇತರಿಕೆ ಸೇರಿದಂತೆ ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಕುರಿತು ಚರ್ಚಿಸಿದರು.
- ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಅವರನ್ನು ಭಾರತಕ್ಕೆ ಅತಿಶೀಘ್ರವೇ ಭೇಟಿ ನೀಡುವಂತೆ ಆಹ್ವಾನ ನೀಡುವ ಬಯಕೆಯನ್ನು ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.