ಪ್ರಧಾನಮಂತ್ರಿ ಉಜ್ವಲ ಯೋಜನೆಯ 100ಕ್ಕೂ ಹೆಚ್ಚು ಫಲಾನುಭವಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಅವರ ನಿವಾಸದಲ್ಲಿ ಸಂವಾದ ನಡೆಸಿದರು.
ದೇಶಾದ್ಯಂತದ ವಿವಿಧ ರಾಜ್ಯಗಳ ಮಹಿಳಾ ಫಲಾನುಭವಿಗಳು, ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಯೋಜಿಸಿದ್ದ ಎಲ್.ಪಿ.ಜಿ. ಪಂಚಾಯತ್ ಗಾಗಿ ದೆಹಲಿಯಲ್ಲಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ ಫಲಾನುಭವಿಗಳು, ಎಲ್.ಪಿ.ಜಿ. ಸಿಲಿಂಡರ್ ಬಳಕೆಯ ಮೂಲಕ ತಮ್ಮ ಜೀವನ ಹೇಗೆ ಸುಧಾರಣೆ ಆಗಿದೆ ಎಂಬುದನ್ನು ವಿವರಿಸಿದರು. ಅವರ ದೈನಂದಿನ ಬದುಕಿನ ವಿವಿಧ ವಿಚಾರಗಳ ಬಗ್ಗೆ ಮಾತನಾಡುವಂತೆ ಪ್ರಧಾನಮಂತ್ರಿಯವರು ಉತ್ತೇಜಿಸಿದರು. ಅವರ ಅನಿಸಿಕೆಗಳಿಗೆ ಸ್ಪಂದಿಸಿದ ಪ್ರಧಾನಿಯವರು, ಕೇಂದ್ರ ಸರ್ಕಾರ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಆರಂಭಿಸಿರುವ ಸೌಭಾಗ್ಯ ಯೋಜನೆಯ ಪ್ರಸ್ತಾಪ ಮಾಡಿದರು. ಹೆಣ್ಣು ಮಗುವಿನ ವಿರುದ್ಧದ ಎಲ್ಲ ಬಗೆಯ ತಾರತಮ್ಯವನ್ನೂ ಕೊನೆಗಾಣಿಸುವ ಬಗ್ಗೆ ಅವರು ಒತ್ತಿ ಹೇಳಿದರು. ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ತಮ್ಮ ತಮ್ಮ ಹಳ್ಳಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಶ್ರಮಿಸುವಂತೆ ಆಗ್ರಹಿಸಿದರು. ಉಜ್ವಲ ಯೋಜನೆ ಕುಟುಂಬದ ಸದಸ್ಯರ ಆರೋಗ್ಯ ಸುಧಾರಿಸುವ ರೀತಿಯಲ್ಲೇ ಇದು ಸಹ ಇಡಿ ಗ್ರಾಮದ ಆರೋಗ್ಯವನ್ನು ಉತ್ತಮಪಡಿಸುತ್ತದೆ ಎಂದರು.
ಉಜ್ವಲ ಯೋಜನೆಯ ಬಗ್ಗೆ ಪ್ರಧಾನಿಯವರನ್ನು ಪ್ರಶಂಸಿಸಿದ ಮತ್ತು ಧನ್ಯವಾದ ಅರ್ಪಿಸಿದ ಫಲಾನುಭವಿಗಳು, ತಮ್ಮ ತಮ್ಮ ಕ್ಷೇತ್ರದಲ್ಲಿನ ನಿರ್ದಿಷ್ಟ ಅಭಿವೃದ್ಧಿ ಸವಾಲುಗಳ ಬಗ್ಗೆ ಚರ್ಚಿಸಲೂ ಈ ಅವಕಾಶ ಬಳಸಿಕೊಂಡರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.