'ಮನ್ ಕಿ ಬಾತ್' ಕೇಳುಗರು ಈ ಕಾರ್ಯಕ್ರಮದ ನಿಜವಾದ ನಿರೂಪಕರು: ಪ್ರಧಾನಿ ಮೋದಿ

September 29th, 11:30 am

ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ 'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು 'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ' ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು. ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು, ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ. ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. 'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.