ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

February 15th, 03:49 pm

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸಲು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು, ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಪಂಚಾಯತ್‌ನಲ್ಲಿ ಕಾರ್ಯಸಾಧ್ಯವಾದ ಪಿಎಸಿಎಸ್, ಪ್ರತಿ ಪಂಚಾಯತ್/ಗ್ರಾಮಗಳಲ್ಲಿ ಕಾರ್ಯಸಾಧ್ಯವಾದ ಡೈರಿ ಸಹಕಾರ ಸಂಘಗಳು ಮತ್ತು ಕರಾವಳಿಯ ಪ್ರತಿ ಪಂಚಾಯತ್/ಗ್ರಾಮಗಳಲ್ಲಿ ಹಾಗೂ ದೊಡ್ಡ ಜಲಮೂಲಗಳನ್ನು ಹೊಂದಿರುವ ಪಂಚಾಯತ್/ಗ್ರಾಮಗಳಲ್ಲಿ ಕಾರ್ಯಸಾಧ್ಯವಾದ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಪಿಎಸಿಎಸ್/ಡೈರಿಯನ್ನು ಬಲಪಡಿಸಲು ಯೋಜನೆಯನ್ನು ರೂಪಿಸಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವಿವಿಧ ಯೋಜನೆಗಳ ಸಮನ್ವಯದಲ್ಲಿ 'ಇಡೀ-ಸರ್ಕಾರದ' ವಿಧಾನವನ್ನು ಬಳಸಿಕೊಳ್ಳಲಿದೆ. ಆರಂಭದಲ್ಲಿ, ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್/ ಡೈರಿ/ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು. ಯೋಜನೆಯ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ನಬಾರ್ಡ್, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ ಎಫ್‌ ಡಿ ಬಿ) ಸಿದ್ಧಪಡಿಸುತ್ತವೆ.