ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ

October 21st, 10:25 am

ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್ ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಎನ್‌ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು

October 21st, 10:16 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್‌ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.