ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಗಾಂಡ ಭೇಟಿ ವೇಳೆ ಉಗಾಂಡ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ
July 25th, 01:00 pm
ಈ ಘನತೆವೆತ್ತ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಆಹ್ವಾನ ನನಗೆ ಲಭಿಸಿರುವುದು ತುಂಬಾ ಗೌರವ ತಂದಿದೆ. ನನಗೆ ಇತರೆ ಸಂಸತ್ ಗಳಲ್ಲೂ ಭಾಷಣ ಮಾಡುವ ಇಂತಹುದೇ ಅವಕಾಶ ದೊರೆತಿದೆ. ಆದರೆ ಇದು ಅತ್ಯಂತ ವಿಶೇಷದ್ದು. ಭಾರತದ ಪ್ರಧಾನಮಂತ್ರಿ ಒಬ್ಬರಿಗೆ ಮೊದಲ ಬಾರಿಗೆ ಇಂತಹ ಗೌರವ ದೊರೆತಿದೆ. ಇದು ಭಾರತದ 125 ಕೋಟಿ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ನಾನು ಭಾರತದ ಎಲ್ಲ ಜನರ ಹಾರ್ದಿಕ ಶುಭಾಶಯಗಳು ಮತ್ತು ಅವರ ಗೆಳೆತನದ ಶುಭಹಾರೈಕೆಗಳನ್ನು ನನ್ನೊಂದಿಗೆ ತಂದು ಇಲ್ಲಿನ ಸದನದ ಮೂಲಕ ಉಗಾಂಡದ ಎಲ್ಲ ಜನರಿಗೆ ತಿಳಿಸುತ್ತಿದ್ದೇನೆ. ಮೇಡಂ ಸ್ಪೀಕರ್, ನಿಮ್ಮ ಉಪಸ್ಥಿತಿ ನನಗೆ ನಮ್ಮ ಲೋಕಸಭೆಯನ್ನು ನೆನಪು ಮಾಡುತ್ತದೆ, ಕಾರಣ ನಮ್ಮ ದೇಶದಲ್ಲೂ ಲೋಕಸಭೆಯ ಸ್ಪೀಕರ್ ಆಗಿರುವುದು ಓರ್ವ ಮಹಿಳೆ. ನಾನು ಈ ಸಂಸತ್ತಿನಲ್ಲಿ ಬಹು ಸಂಖ್ಯೆಯ ಯುವ ಸದಸ್ಯರನ್ನು ನೋಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಶುಭ ಸಮಾಚಾರವಾಗಿದೆ. ನಾನು ಉಗಾಂಡಾಗೆ ಬಂದಾಗಲೆಲ್ಲ ಇದು 'ಆಫ್ರಿಕಾದ ಮುತ್ತು' ಎಂದು ಪಠಿಸುತ್ತೇನೆ. ಈ ರಾಷ್ಟ್ರ ಸೌಂದರ್ಯದ ಘನಿ. ಇಲ್ಲಿ ಶ್ರೇಷ್ಠ ಸಂಪನ್ಮೂಲವಿದೆ ಮತ್ತು ಶ್ರೀಮಂತ ಪರಂಪರೆಯಿದೆ. ಇಲ್ಲಿನ ನದಿಗಳು ಮತ್ತು ಕೊಳ್ಳಗಳು ಪ್ರಾಂತ್ಯದಾದ್ಯಂತ ನಾಗರಿಕತೆಗಳನ್ನು ಪೋಷಿಸಿವೆ. ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಪ್ರಧಾನಿಯೊಬ್ಬರು ಮತ್ತೊಂದು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರದ ಸಂಸತ್ತಿನ ಚುನಾಯಿತ ಸದಸ್ಯರನ್ನುದ್ದೇಶಿಸಿ ಮಾತನಾಡುವ ಈ ಅವಕಾಶದ ಹಿಂದಿನ ಇತಿಹಾಸದ ಅರಿವಿದೆ. ನಮ್ಮ ಹಿಂದಿನ ಕಡಲ ಸಂಬಂಧಗಳು, ವಸಾಹತುಷಾಹಿ ಆಡಳಿತದ ಕತ್ತಲೆಯುಗ, ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿ ಹೋರಾಟ ನಡೆಸಿದ್ದು, ವಿಭಜಿತ ವಿಶ್ವದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ಅನಿಶ್ಚಿತತೆಯ ಮಾರ್ಗದಲ್ಲಿ ನಡೆಯುತ್ತಿರುವುದು, ಹೊಸ ಅವಕಾಶಗಳ ಅನ್ವೇಷಣೆ ಮತ್ತು ನಮ್ಮ ಯುವ ಜನಾಂಗದ ಏಕತೆಯ ಆಶೋತ್ತರಗಳು ಇವೆಲ್ಲ ನಮ್ಮನ್ನು ಬೆಸೆದಿವೆ.