ದೊಡ್ಡದಾದನ್ನು ಯೋಚಿಸಿ, ದೊಡ್ಡದರ ಕನಸು ಕಾಣಿ ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಿ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
December 26th, 11:30 am
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಈಗ ನೀವು 2021 ರ ಬೀಳ್ಕೊಡುಗೆ ಮತ್ತು 2022 ರ ಸ್ವಾಗತಕ್ಕೆ ಸಿದ್ಧರಾಗಿರಬಹುದು. ಹೊಸ ವರ್ಷದಲ್ಲಿ ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ ಮುಂಬರುವ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಮತ್ತು ಸುಧಾರಣೆಯ ಸಂಕಲ್ಪಗೈಯ್ಯುತ್ತಾರೆ. ಕಳೆದ 7 ವರ್ಷಗಳಲ್ಲಿ ನಮ್ಮ ಈ ಮನದ ಮಾತು ಕೂಡಾ ವ್ಯಕ್ತಿಗಳ, ಸಮಾಜದ ದೇಶದ ಒಳ್ಳೆತನವನ್ನು ಬೆಳಕಿಗೆ ತಂದು ಮತ್ತಷ್ಟು ಸಾಧಿಸುವ ಮತ್ತಷ್ಟು ಸುಧಾರಿಸುವ ಪ್ರೇರಣೆ ನೀಡುತ್ತಾ ಬಂದಿದೆ. ಈ 7 ವರ್ಷಗಳಲ್ಲಿ ಮನದ ಮಾತಿನಲ್ಲಿ ನಾನು ಸರ್ಕಾರದ ಸಾಧನೆಗಳ ಬಗ್ಗೆಯೂ ಚರ್ಚೆ ಮಾಡಬಹುದಿತ್ತು. ನಿಮಗೂ ಹಿತವೆನಿಸುತ್ತಿತ್ತು ನೀವೂ ಶ್ಲಾಘಿಸಬಹುದಿತ್ತು. ಮಾಧ್ಯಮದ ಥಳಕು ಬೆಳಕಿನ ಹೊರತಾಗಿ, ವೃತ್ತ ಪತ್ರಿಕೆಗಳ ಮುಖ್ಯಾಂಶಗಳ ಹೊರತಾಗಿಯೂ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿರುವ ಕೋಟಿ ಕೋಟಿ ಜನರಿದ್ದಾರೆ ಎಂಬುದು ದಶಕಗಳ ನನ್ನ ಅನುಭವವಾಗಿದೆ. ಅವರು ದೇಶದ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ವ್ಯಯಿಸುತ್ತಿದ್ದಾರೆ. ಮುಂಬರುವ ದೇಶದ ಪೀಳಿಗೆಗಾಗಿ ತಮ್ಮ ಪ್ರಯತ್ನಗಳಲ್ಲಿ ಇಂದು ತನುಮನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರ ವಿಷಯಗಳು ಆಹ್ಲಾದವನ್ನು ನೀಡುತ್ತವೆ ಮತ್ತು ಪ್ರೇರಣೆ ಒದಗಿಸುತ್ತವೆ. ನನಗೆ ಮನದ ಮಾತು ಎಂದರೆ ಎಂದೆಂದಿಗೂ ಇಂತಹ ಜನರ ಪ್ರಯತ್ನಗಳಿಂದ ತುಂಬಿದ, ಅಲಂಕೃತವಾದ, ಅರಳಿದಂತಹ ಉದ್ಯಾನದಂತಿದೆ. ಮನದ ಮಾತಿನಲ್ಲಿ ಪ್ರತಿ ತಿಂಗಳು ನಾನು ಉದ್ಯಾನದ ಯಾವ ಹೂವಿನ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಲಿ ಎಂಬುದೇ ನನ್ನ ಪ್ರಯತ್ನವಾಗಿರುತ್ತದೆ.