ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆನ್ಮಾರ್ಕ್ ನ ಪ್ರಧಾನಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್, ಐಸ್ ಲ್ಯಾಂಡ್ ನ ಪ್ರಧಾನಮಂತ್ರಿ ಕತ್ರಿನ್ ಜಾಕೋಬ್ಸ್ ಡೊಟ್ಟಿರ್, ನಾರ್ವೆಯ ಪ್ರಧಾನಮಂತ್ರಿ ಜೋನಸ್ ಗಹರ್ ಸ್ಟೋರ್, ಸ್ವೀಡನ್ ನ ಪ್ರಧಾನಮಂತ್ರಿ ಮ್ಯಾಗ್ಡಲೀನಾ ಆಂಡರ್ಸನ್ ಮತ್ತು ಫಿನ್ ಲ್ಯಾಂಡ್ ನ ಪ್ರಧಾನಮಂತ್ರಿ ಸನ್ನಾ ಮರಿನ್ ಅವರೊಂದಿಗೆ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಈ ಶೃಂಗಸಭೆಯು 2018 ರಲ್ಲಿ ಸ್ಟಾಕ್ ಹೋಮ್ ನಲ್ಲಿ ನಡೆದ 1 ನೇ ಭಾರತ-ನಾರ್ಡಿಕ್ ಶೃಂಗಸಭೆಯ ನಂತರ ಭಾರತ-ನಾರ್ಡಿಕ್ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸುವ ಅವಕಾಶವನ್ನು ಒದಗಿಸಿತು. ಕೋವಿಡ್ ಸಾಂಕ್ರಾಮಿಕದ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ನಾವೀನ್ಯತೆ, ಡಿಜಿಟಲೀಕರಣ ಮತ್ತು ಹಸಿರು ಮತ್ತು ಸ್ವಚ್ಛ ಬೆಳವಣಿಗೆಯಲ್ಲಿ ಬಹುಪಕ್ಷೀಯ ಸಹಕಾರದ ಬಗ್ಗೆ ಚರ್ಚೆಗಳು ನಡೆದವು.
ಸುಸ್ಥಿರ ಸಾಗರ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಕಡಲ ವಲಯದಲ್ಲಿನ ಸಹಕಾರದ ಬಗ್ಗೆಯೂ ಚರ್ಚೆಗಳು ನಡೆದವು. ನೀಲಿ ಆರ್ಥಿಕತೆ ವಲಯದಲ್ಲಿ, ವಿಶೇಷವಾಗಿ ಭಾರತದ ಸಾಗರಮಾಲಾ ಯೋಜನೆಯಲ್ಲಿ ಹೂಡಿಕೆ ಮಾಡಲು ನಾರ್ಡಿಕ್ ಕಂಪನಿಗಳನ್ನು ಪ್ರಧಾನಮಂತ್ರಿ ಅವರು ಆಹ್ವಾನಿಸಿದರು.
ಆರ್ಕ್ಟಿಕ್ ವಲಯದಲ್ಲಿನ ನಾರ್ಡಿಕ್ ಪ್ರದೇಶದೊಂದಿಗಿನ ಭಾರತದ ಪಾಲುದಾರಿಕೆಯ ಬಗ್ಗೆ ಚರ್ಚಿಸಲಾಯಿತು. ಆರ್ಕ್ಟಿಕ್ ವಲಯದಲ್ಲಿ ಭಾರತ-ನಾರ್ಡಿಕ್ ಸಹಕಾರದ ವಿಸ್ತರಣೆಗೆ ಭಾರತದ ಆರ್ಕ್ಟಿಕ್ ನೀತಿಯು ಉತ್ತಮ ಚೌಕಟ್ಟನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು, ನಾರ್ಡಿಕ್ ರಾಷ್ಟ್ರಗಳ ಸಾರ್ವಭೌಮ ಸಂಪತ್ತಿನ ನಿಧಿಗಳನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.
ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆಗಳು ನಡೆದವು.
ಶೃಂಗಸಭೆಯ ನಂತರ ಒಂದು ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು, ಅದನ್ನು ಇಲ್ಲಿ ನೋಡಬಹುದು.