Crossing the milestone of 140 crore vaccine doses is every Indian’s achievement: PM
With self-awareness & self-discipline, we can guard ourselves from new corona variant: PM Modi
Mann Ki Baat: PM Modi pays tribute to Gen Bipin Rawat, his wife, Gp. Capt. Varun Singh & others who lost their lives in helicopter crash
Books not only impart knowledge but also enhance personality: PM Modi
World’s interest to know about Indian culture is growing: PM Modi
Everyone has an important role towards ‘Swachhata’, says PM Modi
Think big, dream big & work hard to make them come true: PM Modi

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಈಗ ನೀವು 2021 ರ ಬೀಳ್ಕೊಡುಗೆ ಮತ್ತು 2022 ರ ಸ್ವಾಗತಕ್ಕೆ ಸಿದ್ಧರಾಗಿರಬಹುದು. ಹೊಸ ವರ್ಷದಲ್ಲಿ ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ ಮುಂಬರುವ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಮತ್ತು ಸುಧಾರಣೆಯ ಸಂಕಲ್ಪಗೈಯ್ಯುತ್ತಾರೆ. ಕಳೆದ 7 ವರ್ಷಗಳಲ್ಲಿ ನಮ್ಮ ಈ ಮನದ ಮಾತು ಕೂಡಾ ವ್ಯಕ್ತಿಗಳ, ಸಮಾಜದ ದೇಶದ ಒಳ್ಳೆತನವನ್ನು ಬೆಳಕಿಗೆ ತಂದು ಮತ್ತಷ್ಟು ಸಾಧಿಸುವ ಮತ್ತಷ್ಟು ಸುಧಾರಿಸುವ ಪ್ರೇರಣೆ ನೀಡುತ್ತಾ ಬಂದಿದೆ. ಈ 7 ವರ್ಷಗಳಲ್ಲಿ ಮನದ ಮಾತಿನಲ್ಲಿ ನಾನು ಸರ್ಕಾರದ ಸಾಧನೆಗಳ ಬಗ್ಗೆಯೂ ಚರ್ಚೆ ಮಾಡಬಹುದಿತ್ತು. ನಿಮಗೂ ಹಿತವೆನಿಸುತ್ತಿತ್ತು ನೀವೂ ಶ್ಲಾಘಿಸಬಹುದಿತ್ತು. ಮಾಧ್ಯಮದ ಥಳಕು ಬೆಳಕಿನ ಹೊರತಾಗಿ, ವೃತ್ತ ಪತ್ರಿಕೆಗಳ ಮುಖ್ಯಾಂಶಗಳ ಹೊರತಾಗಿಯೂ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿರುವ ಕೋಟಿ ಕೋಟಿ ಜನರಿದ್ದಾರೆ ಎಂಬುದು ದಶಕಗಳ ನನ್ನ ಅನುಭವವಾಗಿದೆ. ಅವರು ದೇಶದ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ವ್ಯಯಿಸುತ್ತಿದ್ದಾರೆ. ಮುಂಬರುವ ದೇಶದ ಪೀಳಿಗೆಗಾಗಿ ತಮ್ಮ ಪ್ರಯತ್ನಗಳಲ್ಲಿ ಇಂದು ತನುಮನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರ ವಿಷಯಗಳು ಆಹ್ಲಾದವನ್ನು ನೀಡುತ್ತವೆ ಮತ್ತು ಪ್ರೇರಣೆ ಒದಗಿಸುತ್ತವೆ. ನನಗೆ ಮನದ ಮಾತು ಎಂದರೆ ಎಂದೆಂದಿಗೂ ಇಂತಹ ಜನರ ಪ್ರಯತ್ನಗಳಿಂದ ತುಂಬಿದ, ಅಲಂಕೃತವಾದ, ಅರಳಿದಂತಹ ಉದ್ಯಾನದಂತಿದೆ. ಮನದ ಮಾತಿನಲ್ಲಿ ಪ್ರತಿ ತಿಂಗಳು ನಾನು ಉದ್ಯಾನದ ಯಾವ ಹೂವಿನ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಲಿ ಎಂಬುದೇ ನನ್ನ ಪ್ರಯತ್ನವಾಗಿರುತ್ತದೆ.

ಬಹುರತ್ನ ವಸುಂಧರೆಯ ಪುಣ್ಯ ಕಾರ್ಯಗಳ ಅವಿರತ ಪ್ರವಾಹ ನಿರಂತರ ಹರಿಯುತ್ತಿರುತ್ತದೆ. ಮತ್ತು ಇಂದು ದೇಶವು 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವಾಗ, ನಮ್ಮ ಜನಶಕ್ತಿ, ಜನ – ಜನಶಕ್ತಿಯಾಗಿದೆ ಮತ್ತು ಅದರ ಉಲ್ಲೇಖ ಮತ್ತು ಪ್ರಯತ್ನಗಳು ಹಾಗೂ ಅದರ ಪರಿಶ್ರಮ ಭಾರತದ ಹಾಗೂ  ಮಾನವತೆಯ ಉಜ್ವಲ ಭವಿಷ್ಯಕ್ಕಾಗಿ ಒಂದು ಬಗೆಯಲ್ಲಿ ಭರವಸೆಯನ್ನು ನೀಡುತ್ತದೆ.

ಸ್ನೇಹಿತರೇ, ಇದು ಜನಶಕ್ತಿ ಮತ್ತು ಎಲ್ಲರ ಪ್ರಯತ್ನದಿಂದಲೇ ಭಾರತವು 100 ವರ್ಷಗಳಲ್ಲಿ ಎದುರಾದ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಾಯಿತು. ಪ್ರತಿ ಸಂಕಷ್ಟ ಸಮಯದಲ್ಲಿ ನಾವು ಕುಟುಂಬದಂತೆ ಒಬ್ಬರಿಗೊಬ್ಬರು ನೆರವಾಗಿದ್ದೇವೆ. ತಂತಮ್ಮ ಪ್ರದೇಶದಲ್ಲಿ ಅಥವಾ ನಗರದಲ್ಲಿ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಲ್ಲಿ ಸಾಧ್ಯವಾದುದಕ್ಕಿಂತ ಹೆಚ್ಚಿನದನ್ನು ಮಾಡಲು ಪ್ರಯತ್ನಿಸಿದ್ದೇವೆ. ಇಂದು ವಿಶ್ವದಲ್ಲಿರುವ ಲಸಿಕೆಯ ಅಂಕಿಅಂಶಗಳನ್ನು ನಾವು ಭಾರತದ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ದೇಶವು ಅಭೂತಪೂರ್ವ ಕೆಲಸವನ್ನು ಮಾಡಿದೆ, ದೊಡ್ಡ ಗುರಿಯನ್ನು ಸಾಧಿಸಿದೆ. ಲಸಿಕೆಯ 140 ಕೋಟಿ ಡೋಸ್ ಗಳ ಮೈಲಿಗಲ್ಲಿನ ಸಾಧನೆ ಪ್ರತಿಯೊಬ್ಬ ಭಾರತೀಯರ ಪಾಲುದಾರಿಕೆಯಿಂದಾಗಿದೆ.  ಇದರಿಂದ ಪ್ರತಿಯೊಬ್ಬ ಭಾರತೀಯನೂ ವ್ಯವಸ್ಥೆಯ ಮೇಲಿಟ್ಟಿರುವ ಭರವಸೆಯನ್ನು, ವಿಜ್ಞಾನಿಗಳ ಮತ್ತು ವಿಜ್ಞಾನದ ಮೇಲಿಟ್ಟಿರುವ ಭರವಸೆಯನ್ನು ಸಾಬೀತುಪಡಿಸುತ್ತದೆ ಮತ್ತು ಸಮಾಜದೆಡೆ ತನ್ನ ಕರ್ತವ್ಯವನ್ನು ನಿಭಾಯಿಸುವ ಭಾರತೀಯರ ಇಚ್ಛಾಶಕ್ತಿಗೆ ಸಾಕ್ಷಿಯೂ ಆಗಿದೆ. ಆದರೆ ಸ್ನೇಹಿತರೆ, ಕೊರೊನಾದ ಹೊಸ ರೂಪಾಂತರಿ ಬಂದೆರಗಿದೆ ಎಂಬುದರ ಬಗ್ಗೆಯೂ ಗಮನಹರಿಸಬೇಕಿದೆ. ಈ ಜಾಗತಿಕ ಮಹಾಮಾರಿಯನ್ನು ಸದೆಬಡೆಯಲು ಒಬ್ಬ ನಾಗರಿಕನಂತೆ ನಮ್ಮ ಪ್ರಯತ್ನ ಬಹಳ ಮಹತ್ವಪೂರ್ಣವಾಗಿದೆ ಎಂಬುದು ಕಳೆದ 2 ವರ್ಷಗಳ ಅನುಭವವಾಗಿದೆ. ನಮ್ಮ ವಿಜ್ಞಾನಿಗಳು ಈ ಹೊಸ ರೂಪಾಂತರಿ ಒಮಿಕ್ರಾನ್ ನ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರತಿ ದಿನ ಅವರಿಗೆ ಹೊಸ ಮಾಹಿತಿ ಲಭಿಸುತ್ತಿದೆ. ಅವರ ಸಲಹೆ ಮೇರೆಗೆ ಕೆಲಸ ಕಾರ್ಯ ನಡೆಯುತ್ತಿದೆ. ಹೀಗಿರುವಾಗ ಸ್ವಯಂ ಜಾಗರೂಕತೆ, ಸ್ವಂತ ನೀತಿ ನಿಯಮಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡಲು ದೇಶದ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿಯೇ ಕೊರೊನಾವನ್ನು ಸೋಲಿಸಲಿದೆ. ಇದೇ ಜವಾಬ್ದಾರಿಯೊಂದಿಗೆ ನಾವು 2022 ನ್ನು ಪ್ರವೇಶಿಸಬೇಕಿದೆ.

ನನ್ನ ಪ್ರೀತಿಯ ದೇಶಬಾಂಧವರೆ ಮಹಾಭಾರತ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣ ಅರ್ಜುನನಿಗೆ ಹೀಗೆ ಉಪದೇಶಿಸಿದ್ದ

‘ನಭಃ ಸ್ಪರ್ಷಂ ದೀಪ್ತಂ’ ಅಂದರೆ ಹೆಮ್ಮೆಯಿಂದ ಆಗಸದ ಸ್ಪರ್ಶ ಎಂದರ್ಥ. ಇದು ಭಾರತೀಯ ವಾಯುಪಡೆಯ ಧ್ಯೇಯವಾಕ್ಯವೂ ಆಗಿದೆ. ತಾಯಿ ಭಾರತಿಯ ಸೇವೆಯಲ್ಲಿ ತೊಡಗಿರುವ ಅನೇಕ ಜೀವಗಳು ಆಕಾಶದ ಈ ಉತ್ತುಂಗವನ್ನು ಪ್ರತಿದಿನ ಹೆಮ್ಮೆಯಿಂದ ತಲುಪುತ್ತಾರೆ. ನಮಗೆ ಬಹಳಷ್ಟು ಕಲಿಸುತ್ತಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರದ್ದು ಇಂಥದೇ ಜೀವನವಾಗಿದೆ.  ಈ ತಿಂಗಳು ತಮಿಳು ನಾಡಿನಲ್ಲಿ ಅವಘಡಕ್ಕೆ ಒಳಗಾಗಿದ್ದ ಹೆಲಿಕಾಪ್ಟರ್ ಅನ್ನು ವರುಣ್ ಸಿಂಗ್ ಉಡಾಯಿಸುತ್ತಿದ್ದರು. ಈ ಅವಘಡದಲ್ಲಿ ನಾವು ದೇಶದ ಪ್ರಥಮ

ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯೂ ಸೇರಿದಂತೆ ಅನೇಕ ವೀರರನ್ನು ಕಳೆದುಕೊಂಡಿದ್ದೇವೆ. ವರುಣ್ ಸಿಂಗ್ ಹಲವಾರು ದಿನ ಮೃತ್ಯುವಿನೊಂದಿಗೆ ಧೈರ್ಯದಿಂದ ಹೋರಾಡಿದರು ಆದರೆ ಅವರೂ ನಮ್ಮನ್ನಗಲಿದರು. ವರುಣ್ ಆಸ್ಪತ್ರೆಯಲ್ಲಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಂಗತಿಯೊಂದು ನನ್ನ ಹೃದಯವನ್ನು ಕಲಕಿತು. ಈ ವರ್ಷದ ಅಗಸ್ಟ್ ತಿಂಗಳಲ್ಲಿ ಅವರನ್ನು ಶೌರ್ಯ ಚಕ್ರದಿಂದ ಗೌರವಿಸಲಾಗಿತ್ತು. ಈ ಸನ್ಮಾನದ ನಂತರ ಅವರು ತಮ್ಮ ಶಾಲಾ ಪ್ರಾಂಶುಪಾಲರಿಗೆ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಓದಿ – ಯಶಸ್ಸಿನ ಶಿಖರಕ್ಕೇರಿದರೂ ಅವರು ತಮ್ಮ ಬೇರುಗಳನ್ನು ಮರೆತಿಲ್ಲ ಎಂದು ನನಗೆ ಅನ್ನಿಸಿತು. ಎರಡನೇಯದಾಗಿ ಅವರ ಬಳಿ ಸಂಭ್ರಮಾಚರಣೆಗೆ ಸಮಯವಿದ್ದರೂ ಅವರು ಮುಂಬರುವ ಪೀಳಿಗೆ ಬಗ್ಗೆ ಆಲೋಚಿಸಿದರು. ತಾವು ಓದಿದ ಶಾಲೆಯ ಮಕ್ಕಳ ಜೀವನವೂ ಸಂಭ್ರಮಾಚರಣೆಯಿಂದ ತುಂಬಲಿ ಎಂಬುದು ಅವರ ಆಲೋಚನೆಯಾಗಿತ್ತು. ತಮ್ಮ ಪತ್ರದಲ್ಲಿ ವರುಣ್ ಸಿಂಗ್ ತಮ್ಮ ಪರಾಕ್ರಮದ ಬಗ್ಗೆ ಹೆಮ್ಮೆಯಿಂದ ವರ್ಣಿಸಿರಲಿಲ್ಲ ಬದಲಾಗಿ ತಮ್ಮ ಅಸಫಲತೆಯ ಬಗ್ಗೆ ಮಾತನಾಡಿದರು. ತಮ್ಮ ದೌರ್ಬಲ್ಯಗಳನ್ನು ಹೇಗೆ ಶಕ್ತಿಯಾಗಿ ಪರಿವರ್ತಿಸಿಕೊಂಡರು ಎಂಬುದನ್ನು ವರ್ಣಿಸಿದ್ದರು. ಈ ಪತ್ರದಲ್ಲಿ ಅವರು ಹೀಗೆ ಬರೆದಿದ್ದರು.

“ಸಾಧಾರಣವಾಗಿದ್ದರೆ ತಪ್ಪೇನೂ ಇಲ್ಲ. ಶಾಲೆಯಲ್ಲಿ ಎಲ್ಲರೂ ಎಲ್ಲರೂ ಶಾಲೆಯಲ್ಲಿ ಉತ್ಕೃಷ್ಟ ಸಾಧನೆ ಮಾಡ ಬಲ್ಲವರಾಗಿರುವುದಿಲ್ಲ ಮತ್ತು ಎಲ್ಲರೂ 90 ರಷ್ಟು ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ಅಷ್ಟು ಅಂಕ ಗಳಿಸಿದರೆ ಅದು ಅದ್ಭುತ ಸಾಧನೆ ಮತ್ತು ಶ್ಲಾಘಿಸಲೇಬೇಕು. ಆದಾಗ್ಯೂ, ನೀವು ಸಾಧಿಸಲಾಗದಿದ್ದರೆ, ನೀವು ಸಾಧಾರಣ ಎಂದು ಭಾವಿಸಬೇಡಿ. ನೀವು ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿರ ಬಹುದು ಆದರೆ ಜೀವನದಲ್ಲಿ ಬರಲಿರುವ ಸಾಧನೆಗಳಿಗೆ ಇದು ಅಳತೆಗೋಲಲ್ಲ. ನಿಮ್ಮ ಇಷ್ಟವಾದ ಕ್ಷೇತ್ರವನ್ನು ಅರಿತುಕೊಳ್ಳಿ; ಅದು ಕಲೆ, ಸಂಗೀತ, ಗ್ರಾಫಿಕ್ ವಿನ್ಯಾಸ, ಸಾಹಿತ್ಯ ಇತ್ಯಾದಿ ಆಗಿರಬಹುದು. ನೀವು ಏನೇ ಕೆಲಸ ಮಾಡಿದರೂ, ಸಮರ್ಪಿತರಾಗಿ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಎಂದಿಗೂ ನಿದ್ರೆಗೆ ಜಾರುವಾಗ ನಾನು ಹೆಚ್ಚಿನ ಪ್ರಯತ್ನಗಳನ್ನು ಮಾಡಬಹುದಿತ್ತು ಎಂಬ ನಕಾರಾತ್ಮಕ ಭಾವನೆಗಳು ಬೇಡ”

ಸ್ನೇಹಿತರೇ, ಸಾಧಾರಣದಿಂದ ಅಸಾಧಾರಣವಾಗಲು ಅವರು ನೀಡಿರುವ ಮಂತ್ರ ಕೂಡಾ ಅಷ್ಟೇ ಮಹತ್ವಪೂರ್ಣವಾಗಿದೆ. ಇದೇ ಪತ್ರದಲ್ಲಿ ವರುಣ್ ಸಿಂಗ್ ಅವರು ಹೀಗೆ ಬರೆದಿದ್ದಾರೆ. –

“ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ನೀವು ಏನಾಗಬೇಕೆಂದು ಕೊಳ್ಳುತ್ತಿದ್ದೀರೋ ಅದರಲ್ಲಿ ನೀವು ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಎಂದಿಗೂ ಭಾವಿಸಬೇಡಿ. ಅದು ಸುಲಭವಾಗಿ ಬರುವುದಿಲ್ಲ, ಅದಕ್ಕೆ ಸಮಯದ ಮತ್ತು ಆರಾಮಗಳ ತ್ಯಾಗದ ಅಗತ್ಯವೂ ಇದೆ. ನಾನೊಬ್ಬ ಸಾಧಾರಣ ವ್ಯಕ್ತಿಯಾಗಿದ್ದೆ, ಈಗ ನಾನು ನನ್ನ ವೃತ್ತಿಯಲ್ಲಿ ಕಠಿಣ ಮೈಲಿಗಲ್ಲುಗಳನ್ನು ತಲುಪಿದ್ದೇನೆ. 12 ನೇ ತರಗತಿಯ ಅಂಕಗಳು ಜೀವನದಲ್ಲಿ ಸಾಧನೆ ಮಾಡಲು ನೀವು ಸಮರ್ಥರೋ ಅಲ್ಲವೋ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಭಾವಿಸಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡಿ ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಿ”

ತಾವು ಕೇವಲ ಒಬ್ಬ ವಿದ್ಯಾರ್ಥಿಗೆ ಪ್ರೇರಣೆ ನೀಡಿದರೂ ಸಾಕು ಅದು ಬಹಳವೇ ದೊಡ್ಡದೆಂದು ವರುಣ್ ಬರೆದಿದ್ದಾರೆ. ಆದರೆ, ನಾನು ಇಂದು ಹೇಳಲು ಬಯಸುತ್ತೇನೆ- ಇವರು ಇಡೀ ದೇಶಕ್ಕೇ ಪ್ರೇರಣೆ ನೀಡಿದ್ದಾರೆ ಎಂದು. ಅವರ ಪತ್ರ ಕೇವಲ ವಿದ್ಯಾರ್ಥಿಗಳೊಂದಿಗೆ ಮಾತನಾಡಬಹುದು, ಆದರೆ, ಅದು ನಮ್ಮ ಇಡೀ ಸಮಾಜಕ್ಕೆ ಸಂದೇಶ ನೀಡಿದೆ.

ಸ್ನೇಹಿತರೇ, ಪ್ರತಿ ವರ್ಷ ನಾನು ಇಂತಹದ್ದೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪರ್ ಚರ್ಚಾ ಕಾರ್ಯಕ್ರಮ ಮಾಡುತ್ತೇನೆ. ಈ ವರ್ಷ ಕೂಡಾ ಪರೀಕ್ಷೆಗಳಿಗೆ ಮುನ್ನವೇ ನಾನು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಬೇಕೆಂದು ಯೋಜಿಸುತ್ತಿದ್ದೇನೆ. ಈ ಕಾರ್ಯಕ್ರಮಕ್ಕಾಗಿ ಎರಡು ದಿನಗಳ ನಂತರ ಅಂದರೆ ಡಿಸೆಂಬರ್ 28 ರಂದು MyGov.in ನಲ್ಲಿ ನೋಂದಣಿ ಆರಂಭವಾಗಲಿದೆ. ಈ ನೋಂದಣಿ ಡಿಸೆಂಬರ್ 28 ರಿಂದ ಜನವರಿ 20 ರವರೆಗೆ ನಡೆಯಲಿದೆ.  ಇದಕ್ಕಾಗಿ, 9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು, ಮತ್ತು ತಂದೆತಾಯಿಯರಿಗಾಗಿ ಆನ್ಲೈನ್ ಸ್ಪರ್ಧೆ ಕೂಡಾ ಆಯೋಜನೆಯಾಗಲಿದೆ.  ನೀವೆಲ್ಲರೂ ಇದರಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮನ್ನು ಭೇಟಿಯಾಗುವ ಅವಕಾಶ ದೊರೆಯುತ್ತದೆ. ನಾವೆಲ್ಲರೂ ಒಂದಾಗಿ ಸೇರಿ, ಪರೀಕ್ಷೆ, ವೃತ್ತಿ, ಸಫಲತೆ ಮತ್ತು ವಿದ್ಯಾರ್ಥಿ ಜೀವನದೊಂದಿಗೆ ಸೇರಿರುವ ಅನೇಕ ವಿಷಯಗಳ ಬಗ್ಗೆ ಮಾತನಾಡೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಮನ್ ಕಿ ಬಾತ್ ನಲ್ಲಿ ನಾನು ಈಗ ನಿಮಗೆ ಗಡಿಯಾಚೆಯಿಂದ, ಬಹಳ ದೂರದಿಂದ ಬಂದಿರುವಂತಹ ಒಂದು ವಿಷಯ ಕೇಳಿಸಲುಬಯಸುತ್ತೇನೆ. ಇದು ನಿಮ್ಮನ್ನು ಸಂತೋಷಗೊಳಿಸುತ್ತದೆ ಹಾಗೆಯೇ ಆಶ್ಚರ್ಯಚಕಿತರನ್ನಾಗಿಸುತ್ತದೆ ಕೂಡಾ.:

ಧ್ವನಿ#(VandeMatram)

ವಂದೇಮಾತರಂ . ವಂದೇಮಾತರಂ

ಸುಜಲಾಂ ಸುಫಲಾಂ ಮಲಯಜ ಶೀತಲಾಂ

ಸಸ್ಯ ಶ್ಯಾಮಲಾಂ ಮಾತರಂ. ವಂದೇ ಮಾತರಂ

ಶುಭ್ರ ಜ್ಯೋತ್ಸ್ನಾ ಫುಲಕಿತಯಾಮಿನೀಂ

ಫುಲ್ಲಕುಸುಮಿತ ದ್ರುಮದಲ ಶೋಭಿನೀಂ

ಸುಹಾಸಿನೀಂ ಸುಮಧುರ ಭಾಷಿಣೀಂ

ಸುಖದಾಂ ವರದಾಂ ಮಾತರಂ. ವಂದೇಮಾತರಂ

ವಂದೇಮಾತರಂ ವಂದೇಮಾತರಂ

ಇದನ್ನು ಕೇಳಿ ನಿಮಗೆ ಬಹಳ ಸಂತೋಷವಾಯಿತೆಂದು, ಹೆಮ್ಮೆಯೆನಿಸಿತೆಂದು ನನಗೆ ಪೂರ್ಣ ವಿಶ್ವಾಸವಿದೆ.  ವಂದೇಮಾತರಂ ನಲ್ಲಿ ಅಡಗಿರುವ ಭಾವಾರ್ಥ, ನಮಲ್ಲಿ ಹೆಮ್ಮೆ ಮತ್ತು ಉತ್ಸಾಹ ತುಂಬುತ್ತದೆ.

ಸ್ನೇಹಿತರೇ, ಈ ಅತಿ ಸುಂದರ ಧ್ವನಿ ಎಲ್ಲಿಯದು ಮತ್ತು ಯಾವ ದೇಶದಿಂದ ಬಂದಿದೆಯೆಂದು ನೀವು ಖಂಡಿತಾ ಯೋಚಿಸುತ್ತಿರ ಬಹುದುಲ್ಲವೇ? ಈ ಪ್ರಶ್ನೆಗೆ ಉತ್ತರ ನಿಮ್ಮಲ್ಲಿ ಮತ್ತಷ್ಟು ಆಶ್ಚರ್ಯವನ್ನು ಹೆಚ್ಚಿಸುತ್ತದೆ. ವಂದೇಮಾತರಂ ಪ್ರಸ್ತುತ ಪಡಿಸುತ್ತಿರುವ ಇವರು ಗ್ರೀಸ್ ದೇಶದ ವಿದ್ಯಾರ್ಥಿಗಳಾಗಿದ್ದಾರೆ. ಅವರು ಅಲ್ಲಿಯ ಇಲಿಯಾದ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಇವರು ಸುಂದರವಾಗಿ ಮತ್ತು ಭಾವಪೂರ್ಣವಾಗಿ ಹಾಡಿರುವ ವಂದೇಮಾತರಂ ನಿಜಕ್ಕೂ ಅದ್ಭುತವಾಗಿದೆ ಮತ್ತು ಪ್ರಶಂಸಾರ್ಹವಾಗಿದೆ.  ಇಂತಹ ಪ್ರಯತ್ನಗಳು, ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ನಾನು ಗ್ರೀಸ್ ನ ಈ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮತ್ತು ಅವರ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಾಡಲಾಗಿರುವ ಅವರ ಪ್ರಯತ್ನವನ್ನು ಶ್ಲಾಘಿಸುತ್ತೇನೆ.

ಸ್ನೇಹಿತರೇ, ಲಕ್ನೋದ ನಿವಾಸಿಯಾಗಿರುವ ನಿಲೇಶ್ ಅವರ ಒಂದು ಪೋಸ್ಟ್ ಕುರಿತು ಕೂಡಾ ಚರ್ಚಿಸಲು ಬಯಸುತ್ತೇನೆ. ನಿಲೇಶ್ ಅವರು ಲಕ್ನೋದಲ್ಲಿ ನಡೆದ ಒಂದು ವಿಶಿಷ್ಟ ಡ್ರೋನ್ ಪ್ರದರ್ಶನವನ್ನು ಬಹಳ ಪ್ರಶಂಸಿಸಿದ್ದಾರೆ. ಈ ಡ್ರೋನ್ ಪ್ರದರ್ಶನವನ್ನು ಲಕ್ನೋದ ರೆಸಿಡೆನ್ಸಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. 1857 ಕ್ಕೂ ಮೊದಲಿನ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿಗಳು,  ರೆಸಿಡೆನ್ಸಿಯ ಗೋಡೆಗಳ ಮೇಲೆ ಇಂದಿಗೂ ಕಾಣಬರುತ್ತದೆ. ರೆಸಿಡೆನ್ಸಿಯಲ್ಲಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಆಯಾಮಗಳಿಗೆ ಜೀವ ತುಂಬಲಾಯಿತು.  ಚೌರಿ-ಚೌರಾ ಚಳವಳಿಯಿರಲಿ, ಕಾಕೋರಿಟ್ರೆನ್ ನ ಘಟನೆಯೇ ಇರಲಿ, ಅಥವಾ ನೇತಾಜಿ ಸುಭಾಷ್ ಅವರ ಅದಮ್ಯ ಸಾಹಸ ಮತ್ತು ಪರಾಕ್ರಮವೇ ಇರಲಿ, ಈ ಡ್ರೋನ್ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ನೀವು ಕೂಡಾ ಇದೇ ರೀತಿ ನಿಮ್ಮ ನಗರಗಳಲ್ಲಿ, ಗ್ರಾಮಗಳಲ್ಲಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವಿಶಿಷ್ಟ ಅಂಶಗಳನ್ನು ಜನರ ಮುಂದೆ ತರಬಹುದು.  ಇದರಲ್ಲಿ ತಂತ್ರಜ್ಞಾನದ ಸಹಾಯವನ್ನು ಹೆಚ್ಚಾಗಿ ಬಳಸಬಹುದು.  ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮಗೆ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಜೀವಂತವಾಗಿಸುವ ಅವಕಾಶ ನೀಡುತ್ತದೆ. ಅದನ್ನು ಅನುಭವಿಸುವ ಅವಕಾಶ ನೀಡುತ್ತದೆ. ಈ ದೇಶಕ್ಕಾಗಿ ಹೊಸ ಸಂಕಲ್ಪ ತೊಡುವ, ಏನನ್ನಾದರೂ ಸಾಧಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಒಂದು ಪ್ರೇರಕ ಹಬ್ಬ ಇದಾಗಿದೆ, ಪ್ರೇರಕ ಅವಕಾಶ ಇದಾಗಿದೆ. ಬನ್ನಿ, ಸ್ವಾತಂತ್ರ್ಯ ಹೋರಾಟದ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ದೇಶಕ್ಕಾಗಿ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಗೊಳಿಸೋಣ.

ನನ್ನ ಪ್ರೀತಿಯ ದೇಶಾಸಿಗಳೇ, ನಮ್ಮ ದೇಶ ಅನೇಕ ಅಸಾಧಾರಣ ಪ್ರತಿಭೆಗಳಿಂದ ಸಮೃದ್ಧವಾಗಿದೆ ಅವರುಗಳ ಸೃಜನಶೀಲತೆಯು ಇತರರಿಗೂ ಕೂಡಾ ಏನನ್ನಾದರೂ ಮಾಡುವಂತೆ ಪ್ರೇರೇಪಿಸುತ್ತದೆ.  ಅಂತಹ ಓರ್ವ ವ್ಯಕ್ತಿ ತೆಲಂಗಾಣದ ಡಾಕ್ಟರ್ ಕುರೇಲಾ ವಿಠಲಾಚಾರ್ಯ ಅವರು. ಅವರಿಗೆ 84 ವರ್ಷ ವಯಸ್ಸು. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ವಯಸ್ಸು ಮುಖ್ಯವಲ್ಲ ಎಂಬ ಮಾತಿಗೆ ವಿಠಾಲಾಚಾರ್ಯ ಒಂದು ಉದಾಹರಣೆಯಾಗಿದ್ದಾರೆ.

ಸ್ನೇಹಿತರೇ, ವಿಠಲಾಚಾರ್ಯ ಅವರಿಗೆ ಬಾಲ್ಯದಿಂದಲೂ ಒಂದು ದೊಡ್ಡ ಗ್ರಂಥಾಲಯ ತೆರೆಯಬೇಕೆಂಬ ಇಚ್ಛೆಯಿತ್ತು. ಆಗ ದೇಶ ಗುಲಾಮಗಿರಿಯಲ್ಲಿತ್ತು. ಬಾಲ್ಯದ ಕನಸು ಕನಸಾಗಿಯೇ ಉಳಿದುಬಿಟ್ಟಂತಹ ಪರಿಸ್ಥಿತಿಗಳು ಆ ಸಮಯದಲ್ಲಿದ್ದವು. ಕಾಲಾಂತರದಲ್ಲಿ ವಿಠಲಾಚಾರ್ಯ ಅವರು ಲೆಕ್ಚರರ್ ಆದರು, ತೆಲುಗು ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದರು, ಮತ್ತು ಅದರಲ್ಲಿ ಅನೇಕ ಕೃತಿಗಳನ್ನು ರಚಿಸಿದರು  6-7 ವರ್ಷಗಳ ಹಿಂದೆ ಅವರು ಪುನಃ  ತಮ್ಮ ಕನಸನ್ನು ಸಾಕಾರಗೊಳಿಸಲು ಆರಂಭಿಸಿದರು. ಅವರು ತಮ್ಮ ಸ್ವಂತ ಪುಸ್ತಕಗಳಿಂದ ಗ್ರಂಥಾಲಯ ಆರಂಭಿಸಿದರು. ತಮ್ಮ ಜೀವಮಾನದ ಗಳಿಕೆಯನ್ನು ಇದರಲ್ಲಿ ತೊಡಗಿಸಿದರು. ಕ್ರಮೇಣ ಜನರು ಇದರೊಂದಿಗೆ ಸೇರಲಾರಂಭಿಸಿದರು ಮತ್ತು ಕೊಡುಗೆ ನೀಡಲಾರಂಬಿಸಿದರು. ಯದಾದ್ರಿ-ಭುವನಗಿರಿ ಜಿಲ್ಲೆಯಲ್ಲಿ ರಮಣ್ಣಾ ಪೇಟ್ಮಂಡಲ್ ದಲ್ಲಿರುವ ಈ ಗ್ರಂಥಾಲಯದಲ್ಲಿ ಸುಮಾರು 2 ಲಕ್ಷ ಪುಸ್ತಕಗಳಿವೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತಾವು ಎದುರಿಸಿದ ಕಷ್ಟಗಳನ್ನು ಬೇರಾರೂ ಎದುರಿಸಬಾರದೆಂದು ವಿಠಲಾಚಾರ್ಯ ಹೇಳುತ್ತಾರೆ.  ಇಂದು ಬಹಳಷ್ಟು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯುತ್ತಿರುವುದನ್ನು ನೋಡಿ ಅವರಿಗೆ ಬಹಳ ಸತೋಷವಾಗುತ್ತದೆ.  ಅವರ ಈ ಪ್ರಯತ್ನಗಳಿಂದ ಪ್ರೇರಿತರಾಗಿ, ಹಲವಾರು ಇತರೆ ಗ್ರಾಮಗಳ ಜನರು ಕೂಡಾ ಗ್ರಂಥಾಲಯ ಪ್ರಾರಂಭಿಸುವುದರಲ್ಲಿ ತೊಡಗಿಕೊಂಡಿದ್ದಾರೆ.

ಸ್ನೇಹಿತರೆ ಪುಸ್ತಕಗಳು ಕೇವಲ ಜ್ಞಾನವನ್ನು ಹೆಚ್ಚಿಸುವುದಲ್ಲದೇ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ, ಜೀವನವನ್ನು ರೂಪಿಸುತ್ತದೆ. ಪುಸ್ತಕಗಳನ್ನು ಓದುವ ಹವ್ಯಾಸ ಅದ್ಭುತ ಸಂತಸವನ್ನು ಒದಗಿಸುತ್ತದೆ. ಈ ವರ್ಷದಲ್ಲಿ ಇಷ್ಟೊಂದು ಪುಸ್ತಕಗಳನ್ನು ಓದಿದೆ ಎಂದು  ಜನರು ಬಹಳ ಹೆಮ್ಮೆಯಿಂದ ಹೇಳುವುದನ್ನು ನಾನು ಕಂಡಿದ್ದೇನೆ. ಮತ್ತು ನನಗೆ ಈ ವರ್ಷ ಮತ್ತಷ್ಟು ಪುಸ್ತಕಗಳನ್ನು ಓದಬೇಕಿದೆ. ಇದು ಒಂದು ಒಳ್ಳೇ ಅಭ್ಯಾಸ. ಈ ಅಭ್ಯಾಸವನ್ನು ವೃದ್ಧಿಸಬೇಕು. ಈ ವರ್ಷ ನಿಮಗೆ ಇಷ್ಟವಾದ ಅಂಥ 5 ಪುಸ್ತಕಗಳ ಬಗ್ಗೆ ತಿಳಿಸಿ ಎಂದು ಮನದ ಮಾತಿನ ಮೂಲಕ ಶ್ರೋತೃಗಳನ್ನು ಆಗ್ರಹಿಸುತ್ತೇನೆ. ಹೀಗೆ ನೀವು 2022 ರಲ್ಲಿ ಇತರ ಓದುಗರಿಗೆ ಉತ್ತಮ ಪುಸ್ತಕಗಳನ್ನು ಆಯ್ದುಕೊಳ್ಳಲು ನೆರವಾಗಬಹುದು. ನಮ್ಮ ಸ್ಕ್ರೀನ್ ಟೈಂ ಹೆಚ್ಚುತ್ತಿರುವಂಥ ಈ ಸಮಯದಲ್ಲಿ ಪುಸ್ತಕ ವಾಚನ ಹೆಚ್ಚು ಪ್ರಚಲಿತಗೊಳ್ಳಲಿ ಎಂಬುದಕ್ಕೆ ಜೊತೆಗೂಡಿ ಪ್ರಯತ್ನ ಮಾಡಬೇಕು.

ನನ್ನ ಪ್ರಿಯ ದೇಶವಾಸಿಗಳೆ, ಇತ್ತೀಚೆಗೆ ಒಂದು ಆಸಕ್ತಿಕರ ಪ್ರಯತ್ನದತ್ತ ಹರಿಯಿತು. ಅದು ನಮ್ಮ ಪ್ರಾಚೀನ ಗ್ರಂಥಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಭಾರತದಲ್ಲಷ್ಟೇ ಅಲ್ಲ ವಿಶ್ವಾದ್ಯಂತ ಜನಪ್ರಿಯಗೊಳಿಸುವ ಪ್ರಯತ್ನವಾಗಿದೆ. ಪುಣೆಯಲ್ಲಿ ಭಂಡಾರ್ಕರ್ ಒರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಕೇಂದ್ರವಿದೆ. ಈ ಸಂಸ್ಥೆ ವಿದೇಶಿಗರಿಗೆ ಮಹಾಭಾರತದ ಮಹತ್ವವನ್ನು ಪರಿಚಯಿಸಲು ಆನ್ ಲೈನ್ ಕೋರ್ಸ್ ಆರಂಭಿಸಿದೆ. ಕೋರ್ಸ್ ಈಗ ಮಾತ್ರ ಆರಂಭಿಸಿರಬಹುದು ಆದರೆ ಇದರ ವಿಷಯವಸ್ತುವನ್ನು ಸಿದ್ಧಪಡಿಸುವ ಕಾರ್ಯ ನೂರು ವರ್ಷಗಳ ಹಿಂದೆಯೇ ಆರಂಭಿಸಲಾಗಿತ್ತು ಎಂಬುದನ್ನು ಕೇಳಿ ನಿಮಗೆ ಬಹಳ ಆಶ್ಚರ್ಯವಾಗಬಹುದು. ಈ ಸಂಸ್ಥೆ ಇಂತಹ ಕೋರ್ಸ್ ಆರಂಭಿಸಿದಾಗ ಅದಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಮ್ಮ ಪರಂಪರೆಯ ವಿಭಿನ್ನ ಮಗ್ಗಲುಗಳನ್ನು ಹೇಗೆ ಆಧುನಿಕ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಇಂಥ ಅದ್ಭುತ ಉಪಕ್ರಮದ ಚರ್ಚೆಯನ್ನು ಮಾಡುತ್ತಿದ್ದೇನೆ. ಸಪ್ತ ಸಮುದ್ರಗಳಾಚೆ ಇರುವ ಜನರಿಗೂ ಇದರ ಲಾಭ ದೊರೆಯುವಂತೆ ಮಾಡಲು ಆವಿಷ್ಕಾರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಸ್ನೇಹಿತರೆ ಇಂದು ವಿಶ್ವಾದ್ಯಂತ ಭಾರತೀಯ ಸಂಸ್ಕೃತಿ ಬಗ್ಗೆ ಅರಿಯುವ ಆಸಕ್ತಿ ಹೆಚ್ಚುತ್ತಿದೆ. ಬೇರೆ ಬೇರೆ ದೇಶದ ಜನತೆ ಕೇವಲ ನಮ್ಮ ಸಂಸ್ಕೃತಿಯ ಬಗ್ಗೆ ಅರಿಯಲು ಉತ್ಸುಕರಾಗಿರುವುದಷ್ಟೆ ಅಲ್ಲ ಅದನ್ನು ಪಸರಿಸುವಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ಸರ್ಬಿಯನ್ ಮೇಧಾವಿ ಡಾ. ಮೊಮಿರ್ ನಿಕಿಚ್ ಇಂಥ ಒಬ್ಬ ಸಾಧಕರಾಗಿದ್ದಾರೆ. ಇವರು ದ್ವಿಭಾಷೆಯ ಸಂಸ್ಕೃತ ಸರ್ಬಿಯನ್ ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ. ಈ ಶಬ್ದಕೋಶದಲ್ಲಿ ಬಳಸಲಾದ 70 ಸಾವಿರಕ್ಕೂ ಹೆಚ್ಚು ಸಂಸ್ಕೃತ ಪದಗಳನ್ನು ಸರ್ಬಿಯನ್ ಭಾಷೆಯಲ್ಲಿ ಅನುವಾದಿಸಲಾಗಿದೆ. ಡಾ ನಿಕಿಚ್ ಅವರು 70 ರ ವಯೋಮಾನದಲ್ಲಿ ಸಂಸ್ಕೃತವನ್ನು ಕಲಿತಿದ್ದಾರೆ ಎಂದು ಕೇಳಿ ನಿಮಗೆ ಮತ್ತಷ್ಟು ಸಂತೋಷವಾಗಬಹುದು. ಮಹಾತ್ಮಾ ಗಾಂಧಿಯವರ ಲೇಖನಗಳನ್ನು ಓದಿ ಅವರಿಗೆ ಇದಕ್ಕೆ ಪ್ರೇರಣೆ ದೊರೆಯಿತು ಎಂದು ಅವರು ಹೇಳುತ್ತಾರೆ. ಮಂಗೋಲಿಯಾದ 93 ರ ವಯೋಮಾನದ ಪ್ರೊ.ಜೆ ಗೆಂದೆಧರಮ್ ಅವರದ್ದೂ ಇಂಥದೇ ಒಂದು ಉದಾಹರಣೆಯಾಗಿದೆ. ಕಳೆದ 4 ದಶಕಗಳಲ್ಲಿ ಅವರು ಸುಮಾರು 40 ಭಾರತೀಯ ಪ್ರಾಚೀನ ಗ್ರಂಥಗಳು, ಮಹಾಕಾವ್ಯಗಳು ಮತ್ತು ರಚನೆಗಳನ್ನು ಮಂಗೋಲಿಯಾ ಭಾಷೆಗೆ ಅನುವಾದಿಸಿದ್ದಾರೆ. ನಮ್ಮ ದೇಶದಲ್ಲೂ ಇಂಥ ಉತ್ಸಾಹದಿಂದ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ನನಗೆ ಗೋವಾದ ಸಾಗರ್ ಮುಳೆ ಅವರ ಪ್ರಯತ್ನಗಳ ಬಗ್ಗೆ ತಿಳಿಯುವ ಅವಕಾಶ ದೊರೆಯಿತು. ಅವರು ನೂರಾರು ವರ್ಷಗಳಷ್ಟು ಹಳೆಯ ‘ಕಾವೀ’ ಚಿತ್ರಕಲೆಯನ್ನು ನಶಿಸಿಹೋಗದಂತೆ ಕಾಪಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕಾವೀ’ ಚಿತ್ರಕಲೆ ಭಾರತದ ಪುರಾತನ ಇತಿಹಾಸವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಕಾವ್ ಎಂದರೆ ಕೆಂಪು ಮಣ್ಣು ಎಂದರ್ಥ. ಪುರಾತನ ಕಾಲದಲ್ಲಿ ಈ ಕಲೆಗಾಗಿ ಕೆಂಪು ಮಣ್ಣನ್ನು ಬಳಸಲಾಗುತ್ತಿತ್ತು. ಗೋವಾದಲ್ಲಿ ಪೋರ್ಚುಗೀಸ್ ಆಡಳಿತದಲ್ಲಿದ್ದಾಗ ಅಲ್ಲಿಂದ ಪಲಾಯನಗೈದಂತಹ ಜನರು ಬೇರೆ ರಾಜ್ಯಗಳ ಜನರಿಗೆ ಈ ಅದ್ಭುತ ಚಿತ್ರ ಕಲೆಯನ್ನು ಪರಿಚಯಿಸಿದರು. ಕಾಲಾ ನಂತರ ಈ ಅದ್ಭುತ ಕಲೆಗೆ ಅಳಿವಿನ ಅಂಚಿಗೆ ಸರಿಯುತ್ತಿತ್ತು. ಆದರೆ ಸಾಗರ್ ಮುಳೆಯವರು ಈ ಕಲೆಗೆ ಜೀವ ತುಂಬಿದ್ದಾರೆ. ಅವರ ಈ ಪ್ರಯತ್ನಕ್ಕೆ ಬಹಳಷ್ಟು ಮೆಚ್ಚುಗೆ ದೊರೆಯುತ್ತಿದೆ. ಸ್ನೇಹಿತರೆ, ಒಂದು ಪುಟ್ಟ ಪ್ರಯತ್ನ, ಒಂದು ಪುಟ್ಟ ಹೆಜ್ಜೆ ನಮ್ಮ ಸಮೃದ್ಧ ಕಲೆಗಳ ಸಂರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸಬಹುದಾಗಿದೆ. ನಮ್ಮ ದೇಶದ ಜನ ನಿರ್ಧಾರ ಕೈಗೊಂಡರೆ ಸಾಕು ನಮ್ಮ ಪ್ರಾಚೀನ ಕಲೆಗಳನ್ನು ಉಳಿಸಿ ಬೆಳೆಸುವ ಮತ್ತು ಸಂರಕ್ಷಿಸುವ ಚೈತನ್ಯ ಜನಾಂದೋಲನದ ರೂಪ ಪಡೆಯಬಲ್ಲುದು. ನಾನು ಇಲ್ಲಿ ಕೆಲ ಪ್ರಯತ್ನಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ದೇಶಾದ್ಯಂತ ಇಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ.  ನೀವು ಅವುಗಳ ಮಾಹಿತಿಯನ್ನು ನಮೋ ಆಪ್ ಮೂಲಕ ನನಗೆ ಖಂಡಿತಾ ತಲುಪಿಸಿ.

ನನ್ನ ಪ್ರಿಯ ದೇಶಬಾಂಧವರೆ ಅರುಣಾಚಲ ಪ್ರದೇಶದ ಜನತೆ ಒಂದು ವರ್ಷದಿಂದ ವಿಶಿಷ್ಟ ಆಂದೋಲನವನ್ನು ಕೈಗೊಂಡಿದ್ದಾರೆ. ಅದಕ್ಕೆ ‘ಅರುಣಾಚಲ ಪ್ರದೇಶ ಏರ್ ಗನ್ ಸರೆಂಡರ್ ಅಭಿಯಾನ್’ ಎಂದು ಹೆಸರಿಸಿದ್ದಾರೆ. ಈ ಆಂದೋಲನದಲ್ಲಿ ಜನರು ಸ್ವ ಇಚ್ಛೆಯಿಂದ ಒಪ್ಪಿಸುತ್ತಿದ್ದಾರೆ. ಏಕೆಂದು ಗೊತ್ತೆ? ಏಕೆಂದರೆ ಅರುಣಾಚಲ ಪ್ರದೇಶದಲ್ಲಿ ಪಕ್ಷಿಗಳ ವಿವೇಚನಾರಹಿತ ಬೇಟೆ ನಿಲ್ಲಿಸಬೇಕಾಗಿದೆ. ಅರುಣಾಚಲ ಪ್ರದೇಶ 500 ಕ್ಕೂ ಹೆಚ್ಚು ಪಕ್ಷಿ ಪ್ರಭೇದದ ತವರಾಗಿದೆ. ಇವುಗಳಲ್ಲಿ ಕೆಲವು ಸ್ಥಳೀಯ ಪ್ರಭೇದಗಳು ಎಷ್ಟು ವಿಶಿಷ್ಟವಾಗಿವೆ ಎಂದರೆ ವಿಶ್ವದಲ್ಲಿ ಬೇರೆ ಎಲ್ಲೂ ಇವು ಕಾಣಸಿಗುವುದಿಲ್ಲ. ಆದರೆ ಕ್ರಮೇಣ ಕಾಡಿನಲ್ಲೂ ಈಗ ಪಕ್ಷಿಗಳ ಸಂಖ್ಯೆ ಕ್ಷೀಣಿಸಲಾರಂಭಿಸಿದೆ. ಇದನ್ನು ತಡೆಗಟ್ಟಲೆಂದೇ ಈಗ ಏರ್ ಗನ್ ಸರೆಂಡರ್ ಆಂದೋಲನ ಜಾರಿಯಲ್ಲಿದೆ. ಕಳೆದ ಕೆಲವು ತಿಂಗಳಲ್ಲಿ ಬೆಟ್ಟ ಪ್ರದೇಶದಿಂದ ಬಯಲು ಪ್ರದೇಶಗಳವರೆಗೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯದವರೆಗೆ, ರಾಜ್ಯದಲ್ಲಿ ಎಲ್ಲೆಡೆ ಜನರು ಮುಕ್ತ ಹೃದಯದಿಂದ ಇದನ್ನು ಸ್ವಾಗತಿಸಿದ್ದಾರೆ.  ಅರುಣಾಚಲ ಪ್ರದೇಶದ ಜನತೆ ಸ್ವ ಇಚ್ಛೆಯಿಂದ 1600 ಕ್ಕೂ ಹೆಚ್ಚು ಏರ್ ಗನ್ ಗಳನ್ನು ಒಪ್ಪಿಸಿದ್ದಾರೆ. ಇದಕ್ಕಾಗಿ ನಾನು ಅರುಣಾಚಲ ಪ್ರದೇಶದ ಜನತೆಯನ್ನು ಶ್ಲಾಘಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ          

ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಂದ 2022 ಕ್ಕೆ ಸಂಬಂಧಿಸಿದ ಹಲವಾರು ಸಂದೇಶಗಳು ಮತ್ತು ಸಲಹೆಗಳು ಬಂದಿವೆ. ಪ್ರತಿಬಾರಿಯಂತೆಯೇ ಒಂದು ವಿಷಯ ಹೆಚ್ಚಿನ ಜನರಿಂದ ಬಂದ ಸಂದೇಶಗಳಲ್ಲಿ ಇದೆ. ಅದೆಂದರೆ ಸ್ವಚ್ಛತೆ ಮತ್ತು ಸ್ವಚ್ಛಭಾರತ್ . ಸ್ವಚ್ಛತೆಯ ಈ ಸಂಕಲ್ಪ ಶಿಸ್ತು, ಜಾಗೃತಿ ಮತ್ತು ಸಮರ್ಪಣಾ ಭಾವದಿಂದ ಮಾತ್ರವೇ ಈಡೇರುತ್ತದೆ. ನಾವು ಎನ್ ಸಿ ಸಿ ಕೇಡೆಟ್ಸ್ (NCC Cadets)ಗಳಿಂದ ಆರಂಭಿಸಿದ ಪುನೀತ್ ಸಾಗರ್ ಅಭಿಯಾನದಲ್ಲಿ ಕೂಡಾ ಇದರ ಒಂದು ನೋಟವನ್ನು ಕಾಣಬಹುದು. 30 ಸಾವಿರಕ್ಕೂ ಅಧಿಕ ಎನ್ ಸಿಸಿ ಕೇಡೆಟ್ ಗಳು ಈ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.  ಎನ್ ಸಿಸಿಯ ಈ ಕೆಡೇಟ್ ಗಳು ಸಮುದ್ರ ತೀರಗಳನ್ನು ಸ್ವಚ್ಛಗೊಳಿಸಿದರು, ಅಲ್ಲಿಂದ ಪ್ಲಾಸ್ಟಿಕ್ ತ್ಯಾಜ್ಯ ಆರಿಸಿ ಅವುಗಳನ್ನು ರಿಸೈಕ್ಲಿಂಗ್ ಗಾಗಿ ಸಂಗ್ರಹ ಮಾಡಿದರು.  ನಮ್ಮ ಬೀಚ್ ಗಳು, ನಮ್ಮ ಬೆಟ್ಟಗುಡ್ಡಗಳು ಸ್ವಚ್ಛವಾಗಿದ್ದರೆ ತಾನೇ ನಮಗೆ ಸುತ್ತಾಡಲು ಯೋಗ್ಯವಾಗಿರುತ್ತವೆ. ಅನೇಕರು ಎಲ್ಲಿಯಾದರೂ ಹೋಗಬೇಕೆಂದು ಜೀವಮಾನ ಪೂರ್ತಿ ಕನಸು ಕಾಣುತ್ತಿರುತ್ತಾರೆ, ಆದರೆ ಅಲ್ಲಿಗೆ ಹೋದಾಗ, ತಿಳಿದೋ ತಿಳಿಯದೆಯೋ ಅಲ್ಲಿ ತ್ಯಾಜ್ಯ ಹರಡಿ ಬರುತ್ತಾರೆ. ಯಾವ ಜಾಗ ನಮಗೆ ಇಷ್ಟೊಂದು ಸಂತೋಷ ನೀಡುತ್ತದೆಯೋ, ಅದನ್ನು ನಾವು ಕೊಳಕು ಮಾಡಬಾರದು ಎನ್ನುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು.

ಸ್ನೇಹಿತರೇ, ನನಗೆ ಸಾಫ್ ವಾಟರ್ (saafwater) ಹೆಸರಿನ ಒಂದು ಸ್ಟಾರ್ಟ್ ಅಪ್ ನ ಬಗ್ಗೆ ತಿಳಿದು ಬಂತು. ಕೆಲವು ಯುವಕರು ಸೇರಿ ಇದನ್ನು ಆರಂಭಿಸಿದ್ದಾರೆ. ಇದು ಕೃತಕ ಬುದ್ಧಿಮತ್ತೆ ಮತ್ತು internet of things ನ ಸಹಾಯದಿಂದ ಜನರಿಗೆ ಅವರಿರುವ ಪ್ರದೇಶದಲ್ಲಿ ನೀರಿನ ಶುದ್ಧತೆ ಮತ್ತು ಗುಣಮಟ್ಟ ಸಂಬಂಧಿತ ಮಾಹಿತಿ ತಿಳಿಸುತ್ತದೆ. ಇದೊಂದು ಸ್ವಚ್ಛತೆಯ ಮತ್ತೊಂದು ರೀತಿಯ ಕ್ರಮವಾಗಿದೆ. ಜನರ ಸ್ವಚ್ಛ ಮತ್ತು ಆರೋಗ್ಯಪೂರ್ಣ ಭವಿಷ್ಯಕ್ಕಾಗಿ ಈ ಸ್ಟಾರ್ಟ್ ಅಪ್ ನ ಪ್ರಾಮುಖ್ಯತೆಯ ದೃಷ್ಟಿಯಿಂದ ಇದಕ್ಕೆ ಒಂದು ಜಾಗತಿಕ ಪ್ರಶಸ್ತಿ ಕೂಡಾ ದೊರೆತಿದೆ.

ಸ್ನೇಹಿತರೇ, ‘ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ’ ಈ ಪ್ರಯತ್ನದಲ್ಲಿ ಸಂಸ್ಥೆಗಳಿರಲಿ ಅಥವಾ ಸರ್ಕಾರವೇ ಇರಲಿ ಎಲ್ಲರದ್ದೂ ಮಹತ್ವಪೂರ್ಣ ಪಾತ್ರವಿದೆ.  ಈ ಮೊದಲು ಸರ್ಕಾರಿ ಕಚೇರಿಗಳಲ್ಲಿ ಹಳೆಯ ಕಡತಗಳು ಮತ್ತು ಕಾಗದಗಳ ಎಷ್ಟೊಂದು ರಾಶಿ ಇರುತ್ತಿತ್ತೆಂದು ನಿಮಗೆಲ್ಲರಿಗೂ ತಿಳಿದಿದೆ. ಸರ್ಕಾರ ಹಳೆಯ ವಿಧಾನಗಳನ್ನು ಬದಲಾಯಿಸಲು ಆರಂಭಿಸಿದಾಗಿನಂದ, ಈ ಕಡತಗಳು ಮತ್ತು ಕಾಗದಪತ್ರಗಳ ರಾಶಿ ಡಿಜಿಟೈಸ್ ಆಗಿ, ಕಂಪ್ಯೂಟರ್ ನ ಫೋಲ್ಡರ್ ಗಳಲ್ಲಿ ಸಂಗ್ರಹಗೊಳ್ಳುತ್ತಿವೆ. ಹಳೆಯ ಮತ್ತು ಬಾಕಿ ಉಳಿದಿರುವ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ವಿಶೇಷ ಅಭಿಯಾನವನ್ನು ಕೂಡಾ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಕೂಡಾ ನಡೆದಿವೆ. ಅಂಚೆ ಇಲಾಖೆಯಲ್ಲಿ ಈ ಅಭಿಯಾನ ನಡೆದಾಗ, ಅಲ್ಲಿನ ಜಂಕ್ ಯಾರ್ಡ್  ಸಂಪೂರ್ಣವಾಗಿ ಖಾಲಿಯಾಯಿತು. ಈಗ ಈ ಜಂಕ್ ಯಾರ್ಡ್ ಅನ್ನು ಕೋರ್ಟ್ ಯಾರ್ಡ್ ಮತ್ತು ಕೆಫೇಟೇರಿಯಾ ಆಗಿ ಪರಿವರ್ತಿಸಲಾಗಿದೆ. ಮತ್ತೊಂದು ಜಂಕ್ ಯಾರ್ಡ್ ಅನ್ನು ದ್ವಿಚಕ್ರ ವಾಹನಗಳಿಗಾಗಿ ನಿಲುಗಡೆ ತಾಣವನ್ನಾಗಿ ಮಾಡಲಾಗಿದೆ.  ಇದೇ ರೀತಿ ಪರಿಸರ ಸಚಿವಾಲಯವು ತನ್ನ ಖಾಲಿಯಾದ ಜಂಕ್ ಯಾರ್ಡ್ ಅನ್ನು ಕ್ಷೇಮ ಕೇಂದ್ರವನ್ನಾಗಿ ಪರಿವರ್ತಿಸಿದೆ. ನಗರ ವ್ಯವಹಾರಗಳ ಸಚಿವಾಲಯವು ಒಂದು ಸ್ವಚ್ಛ ಎಟಿಎಂ ಅನ್ನು ಕೂಡಾ ಸ್ಥಾಪಿಸಿದೆ. ಜನರು  ತ್ಯಾಜ್ಯ ನೀಡಿ ಬದಲಿಗೆ ನಗದು ತೆಗೆದುಕೊಂಡು ಹೋಗಲಿ ಎನ್ನುವುದು ಇದರ ಉದ್ದೇಶವಾಗಿದೆ. ನಾಗರೀಕ ವಿಮಾನ ಸಚಿವಾಲಯದ ವಿಭಾಗಗಳು, ಗಿಡಗಳಿಂದ ಉದುರುವ ಒಣ ಎಲೆಗಳನ್ನು ಮತ್ತು ಸಾವಯವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಪ್ರಾರಂಭಿಸಿವೆ. ಈ ವಿಭಾಗವು ತ್ಯಾಜ್ಯ ಕಾಗದದಿಂದ ಸ್ಟೇಷನರಿ ತಯಾರಿಸುವ ಕೆಲಸ ಕೂಡಾ ಮಾಡುತ್ತಿದೆ.  ನಮ್ಮ ಸರ್ಕಾರದ ಇಲಾಖೆಗಳು ಕೂಡಾ ಸ್ವಚ್ಛತೆಯಂತಹ ವಿಷಯಗಳ ಮೇಲೆ ಇಷ್ಟೊಂದು ಇನ್ನೋವೇಟಿವ್ ಆಗಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಯಾರಿಗೂ ಇಂತಹ ಭರವಸೆ ಕೂಡಾ ಇರುತ್ತಿರಲಿಲ್ಲ. ಆದರೆ ಈಗ ಇದು ವ್ಯವಸ್ಥೆಯ ಭಾಗವಾಗುತ್ತಾ ಬರುತ್ತಿದೆ.  ಇದೇ ಅಲ್ಲವೇ ದೇಶದ ಹೊಸ ಚಿಂತನೆ, ಇದರ ನೇತೃತ್ವವನ್ನು ದೇಶವಾಸಿಗಳೆಲ್ಲಾ ಒಟ್ಟಾಗಿ ಸೇರಿ ನಿರ್ವಹಿಸುತ್ತಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ ’ ನಾವು ಈ ಬಾರಿಯೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಪ್ರತಿಬಾರಿಯಂತೆ, ಒಂದು ತಿಂಗಳ ನಂತರ ನಾವು ಪುನಃ ಭೇಟಿಯಾಗೋಣ. ಆದರೆ ಅದು 2022 ರಲ್ಲಿ.  ಪ್ರತಿಯೊಂದು ಹೊಸ ಆರಂಭವೂ ನಮ್ಮ ಸಾಮರ್ಥ್ಯವನ್ನು ಗುರುತಿಸುವ ಒಂದು ಅವಕಾಶವನ್ನು ಹೊತ್ತು ತರುತ್ತದೆ.  ಯಾವ ಗುರಿಗಳನ್ನು ನಾವು ಮೊದಲು ಕಲ್ಪನೆ ಕೂಡಾ ಮಾಡಿರಲಿಲ್ಲವೋ, ದೇಶ ಇಂದು ಅವುಗಳಿಗಾಗಿ ಪ್ರಯತ್ನ ಮಾಡುತ್ತಿದೆ. ನಮ್ಮಲ್ಲಿ ಹೀಗೆ ಹೇಳಲಾಗುತ್ತದೆ–

ಕ್ಷಣಶಃ ಕಣಶಶ್ಚೈವ, ವಿದ್ಯಾಮ್ ಅರ್ಥಂ ಚ ಸಾಧಯೇತ್,

ಕ್ಷಣೇ ನಷ್ಟೇ ಕುತೋ ವಿದ್ಯಾ, ಕಣೆ ನಷ್ಟೇ ಕುತೋ ಧನಮ್

(क्षणश: कणशश्चैव, विद्याम् अर्थं च साधयेत् |

क्षणे नष्टे कुतो विद्या, कणे नष्टे कुतो धनम् ||)

ಅಂದರೆ, ನಾವು ಜ್ಞಾನಾರ್ಜನೆ ಮಾಡಬೇಕಾದರೆ, ಏನಾದರೂ ಹೊಸದನ್ನು ಕಲಿಯಬೇಕಾದರೆ, ಮಾಡಬೇಕಾದರೆ, ನಾವು ಪ್ರತಿಯೊಂದು ಕ್ಷಣವನ್ನೂ ಉಪಯೋಗಿಸಿಕೊಳ್ಳಬೇಕು. ಮತ್ತು ನಮಗೆ ಧನಾರ್ಜನೆ ಮಾಡಬೇಕಾದರೆ, ಅಂದರೆ ಉನ್ನತಿ, ಪ್ರಗತಿ ಸಾಧಿಸಬೇಕಾದರೆ, ಪ್ರತಿಯೊಂದು ಕಣದ ಅಂದರೆ ಪ್ರತಿಯೊಂದು ಸಂಪನ್ಮೂಲದ, ಸೂಕ್ತ ಬಳಕೆ ಮಾಡಬೇಕು. ಏಕೆಂದರೆ ಕ್ಷಣ ನಷ್ಟವಾಗುವುದರಿಂದ  ವಿದ್ಯೆ ಹಾಗೂ ಜ್ಞಾನ ಹೊರಟುಹೋಗುತ್ತದೆ ಮತ್ತು ಕಣ ನಷ್ಟವಾಗುವುದರಿಂದ, ಧನ ಮತ್ತು ಪ್ರಗತಿಯ ರಸ್ತೆ ಮುಚ್ಚಿಹೋಗುತ್ತದೆ.  ಈ ಮಾತು ದೇಶವಾಸಿಗಳೆಲ್ಲರಿಗೂ ಪ್ರೇರಣೆಯಾಗಿದೆ.  ನಾವು ಬಹಳಷ್ಟನ್ನು ಕಲಿಯಬೇಕು, ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು, ಹೊಸ ಹೊಸ ಗುರಿಗಳನ್ನು ಸಾಧಿಸಬೇಕು, ಆದ್ದರಿಂದ ನಾವು ಒಂದು ಕ್ಷಣವನ್ನು ಕೂಡಾ ನಷ್ಟ ಮಾಡಿಕೊಳ್ಳಬಾರದು. ನಾವು ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು, ಆದ್ದರಿಂದ, ನಾವು ನಮ್ಮ ಸಂಪನ್ಮೂಲಗಳನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಬೇಕು. ಇದು ಒಂದು ರೀತಿಯಲ್ಲಿ ಸ್ವಾವಲಂಬಿ ಭಾರತದ ಮಂತ್ರ ಕೂಡಾ ಆಗಿದೆ, ಏಕೆಂದರೆ,  ನಾವೆಲ್ಲರೂ ನಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಿದಾಗ, ಅವುಗಳನ್ನು ವ್ಯರ್ಥವಾಗಲು ಬಿಡದೇ ಇದ್ದಾಗ, ನಾವು ನಮ್ಮ ಸ್ಥಳೀಯ ಸಾಮರ್ಥ್ಯವನ್ನು ಗುರುತಿಸುತ್ತೇವೆ, ಆಗ ದೇಶ ಸ್ವಾವಲಂಬಿಯಾಗುತ್ತದೆ.  ಆದ್ದರಿಂದ, ಉತ್ತಮವಾಗಿ ಯೋಚಿಸೋಣ, ದೊಡ್ಡ ಕನಸುಗಳನ್ನು ಕಾಣೋಣ, ಮತ್ತು ಅವುಗಳನ್ನು ಸಾಕಾರಗೊಳಿಸುವುದಕ್ಕಾಗಿ ಶ್ರಮಿಸೋಣ ಎನ್ನುವ ಸಂಕಲ್ಪವನ್ನು ಪುನರುಚ್ಚರಿಸೋಣ ಬನ್ನಿ.  ಮತ್ತು ನಮ್ಮ ಕನಸುಗಳನ್ನು ಕೇವಲ ನಮಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ಕನಸುಗಳು ಸಮಾಜ ಮತ್ತು ದೇಶದ ಅಬಿವೃದ್ಧಿಗೆ ಸಂಬಂಧಿಸಿದ್ದಾಗಿರಬೇಕು, ನಮ್ಮ ಪ್ರಗತಿಯಿಂದ ದೇಶದ ಪ್ರಗತಿಯ ಮಾರ್ಗ ತೆರೆಯಬೇಕು ಮತ್ತು ಇದಕ್ಕಾಗಿ, ನಾವು ಒಂದು ಕ್ಷಣವನ್ನೂ, ಒಂದು ಕಣವನ್ನೂ ವ್ಯರ್ಥವಾಗುವುದಕ್ಕೆ ಬಿಡದಂತೆ ಇಂದಿನಿಂದಲೇ ಶ್ರಮಿಸೋಣ. ಇದೇ ಸಂಕಲ್ಪದೊಂದಿಗೆ, ಮುಂಬರುವ ವರ್ಷದಲ್ಲಿ ದೇಶ ಮುಂದೆ ಸಾಗುತ್ತದೆ, ಮತ್ತು 2022, ಒಂದು ನವ ಭಾರತ ನಿರ್ಮಾಣದ ಸುವರ್ಣ ಪುಟವಾಗಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಇದೇ ವಿಶ್ವಾಸದೊಂದಿಗೆ  ನಿಮ್ಮೆಲ್ಲರಿಗೂ ಹೊಸ ವರ್ಷ 2022 ಕ್ಕಾಗಿ ಅನೇಕ ಶುಭಾಶಯಗಳು. ಅನೇಕಾನೇಕ ಧನ್ಯವಾದ.

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.