ಕೋವಿಡ್ -19 ಸಾಂಕ್ರಾಮಿಕವು ನೀತಿ ನಿರೂಪಣೆಯ ವಿಷಯದಲ್ಲಿ ವಿಶ್ವದಾದ್ಯಂತದ ಸರ್ಕಾರಗಳಿಗೆ ಸಂಪೂರ್ಣ ಹೊಸ ಸವಾಲುಗಳನ್ನು ತಂದೊಡ್ಡಿದೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ಸುಸ್ಥಿರತೆಯನ್ನು ಖಾತ್ರಿಪಡಿಸುವಾಗ ಸಾರ್ವಜನಿಕ ಕಲ್ಯಾಣಕ್ಕಾಗಿ ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸುವುದು ದೊಡ್ಡ ಸವಾಲುಗಳ ಪೈಕಿ ಒಂದಾಗಿದೆ.
ವಿಶ್ವಾದ್ಯಂತ ಕಕಾಣುತ್ತಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲೂ, 2020-21ರಲ್ಲಿ ಭಾರತದ ರಾಜ್ಯಗಳು ಗಮನಾರ್ಹವಾಗಿ ಹೆಚ್ಚು ಸಾಲ ಪಡೆಯಲು ಸಾಧ್ಯವಾಯಿತು ಎಂಬುದು ನಿಮಗೆ ತಿಳಿದಿದೆಯೇ? 2020-21ರಲ್ಲಿ ರಾಜ್ಯಗಳು ಹೆಚ್ಚುವರಿ 1.06 ಲಕ್ಷ ಕೋಟಿ ರೂ.ಗಳನ್ನು ಪಡೆಯಲು ಸಾಧ್ಯವಾಯಿತು ಎಂಬುದು ಬಹುಶಃ ನಿಮಗೆ ಆಚ್ಚರಿ ತರಬಹುದು. ಸಂಪನ್ಮೂಲಗಳ ಲಭ್ಯತೆಯಲ್ಲಿ ಈ ಗಮನಾರ್ಹ ಹೆಚ್ಚಳವು ಕೇಂದ್ರ-ರಾಜ್ಯಗಳ ಪಾಲ್ಗೊಳ್ಳುವಿಕೆ ವಿಧಾನದಿಂದ ಸಾಧ್ಯವಾಗಿದೆ.
ಕೋವಿಡ್ -19 ಸಾಂಕ್ರಾಮಿಕಕ್ಕೆ ನಮ್ಮ ಆರ್ಥಿಕ ಸ್ಪಂದನೆಯನ್ನು ನಾವು ಸಮೀಕರಿಸಿದಾಗ, ನಮ್ಮ ಪರಿಹಾರಗಳು 'ಒಂದೇ ಅಳತೆ ಎಲ್ಲಕ್ಕೂ ಸರಿಹೊಂದುತ್ತದೆ' ಮಾದರಿಯನ್ನು ಅನುಸರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಭೌಗೋಳಿಕ ಆಯಾಮಗಳ ಒಕ್ಕೂಟ ರಾಷ್ಟ್ರಕ್ಕೆ, ರಾಜ್ಯ ಸರ್ಕಾರಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಮಟ್ಟದಲ್ಲಿ ನೀತಿ ನಿರೂಪಣೆಗಳನ್ನು ಹುಡುಕುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಆದರೆ, ನಮ್ಮ ಒಕ್ಕೂಟ ರಾಜಕೀಯದ ದೃಢತೆಯಲ್ಲಿ ನಮಗೆ ನಂಬಿಕೆ ಇದೆ ಮತ್ತು ನಾವು ಕೇಂದ್ರ-ರಾಜ್ಯ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ.
2020ರ ಮೇ ತಿಂಗಳಲ್ಲಿ, ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ, 2020-21ರಲ್ಲಿ ರಾಜ್ಯ ಸರ್ಕಾರಗಳಿಗೆ ಸಾಲ ಪಡೆಯುವ ಮಿತಿಯ ಹೆಚ್ಚಳವನ್ನು ಭಾರತ ಸರ್ಕಾರ ಪ್ರಕಟಿಸಿತು. ಜಿಎಸ್.ಡಿ.ಪಿ.ಯ ಹೆಚ್ಚುವರಿ ಶೇ.2ರಷ್ಟು ಅನುಮತಿಸಲಾಗಿದ್ದು, ಈ ಪೈಕಿ ಶೇ.1ನ್ನು ನಿರ್ದಿಷ್ಟ ಆರ್ಥಿಕ ಸುಧಾರಣೆಗಳನ್ನು ಜಾರಿ ಮಾಡುವ ಷರತ್ತಿಗೆ ಒಳಪಡಿಸಲಾಗಿದೆ. ಸುಧಾರಣೆಯ ಈ ಪ್ರೇರಣೆ ಭಾರತೀಯ ಸಾರ್ವಜನಿಕ ಹಣಕಾಸು ವಿಷಯದಲ್ಲಿ ಅಪರೂಪವಾಗಿದೆ. ಹೆಚ್ಚುವರಿ ಹಣವನ್ನು ಪಡೆಯಲು ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಕ ಉತ್ತೇಜಿಸುತ್ತದೆ. ಈ ಕಸರತ್ತಿನ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ ಆದರೆ ಸದೃಢ ಆರ್ಥಿಕ ನೀತಿಗಳಿಗಾಗಿ, ಸೀಮಿತವಾಗಿ ತೆಗೆದುಕೊಳ್ಳುವವರು ಇದ್ದಾರೆ ಎಂಬ ಕಲ್ಪನೆಗೆ ವ್ಯತಿರಿಕ್ತವಾಗಿ ಸಾಗುತ್ತದೆ.
ನಾಲ್ಕು ಸುಧಾರಣೆಗಳಿಗೆ ಹೆಚ್ಚುವರಿಯಾಗಿ ಸಾಲಗಳನ್ನು ಜೋಡಿಸಲಾಗಿದ್ದು, (ಜಿಡಿಪಿಯ ಶೇ.0.25 ಪ್ರತಿಯೊಂದಕ್ಕೂ ಸಂಬಂಧಿಸಿದೆ) ಎರಡು ಗುಣಲಕ್ಷಣಗಳನ್ನು ಹೊಂದಿವೆ. ಮೊದಲನೆಯದಾಗಿ, ಪ್ರತಿಯೊಂದು ಸುಧಾರಣೆಗಳೂ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಬಡವರು, ದುರ್ಬಲರು ಮತ್ತು ಮಧ್ಯಮ ವರ್ಗದವರಿಗೆ ಸುಲಭವಾದ ಜೀವನವನ್ನು ಸುಧಾರಿಸಲು ಸಂಬಂಧಿಸಿದ್ದಾಗಿವೆ. ಎರಡನೆಯದಾಗಿ, ಅದು ಹಣಕಾಸಿನ ಸುಸ್ಥಿರತೆಯನ್ನೂ ಉತ್ತೇಜಿಸುತ್ತದೆ.
'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ನೀತಿಯಡಿಯಲ್ಲಿ ಮೊದಲ ಸುಧಾರಣೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್.ಎಫ್.ಎಸ್.ಎ.)ಯ ಅಡಿಯಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿಗಳನ್ನೂ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಯೊಂದಿಗೆ ಸಂಪರ್ಕಿಸಲಾಗಿದೆಯೆ ಮತ್ತು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಡಿವೈಸ್ ಹೊಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇದರಿಂದಾಗುವ ಪ್ರಮುಖ ಪ್ರಯೋಜನ ವಲಸೆ ಕಾರ್ಮಿಕರು ದೇಶದ ಯಾವುದೇ ಸ್ಥಳದಲ್ಲಿ ತಮ್ಮ ಪಡಿತರ ಆಹಾರವನ್ನು ಪಡೆದುಕೊಳ್ಳಬಹುದು. ನಾಗರಿಕರಿಗೆ ಆಗುವ ಈ ಪ್ರಯೋಜನದ ಜೊತೆಗೆ, ನಕಲಿ ಕಾರ್ಡ್ ಗಳ ಮತ್ತು ನಕಲಿ ಸದಸ್ಯರ ನಿರ್ಮೂಲನೆಯೊಂದಿಗೆ ಆರ್ಥಿಕ ಪ್ರಯೋಜನವೂ ಇದೆ. 17 ರಾಜ್ಯಗಳು ಈ ಸುಧಾರಣೆಯನ್ನು ಪೂರ್ಣಗೊಳಿಸಿದ್ದು, ಅವುಗಳಿಗೆ 37,600 ಕೋಟಿ ರೂ. ಮೊತ್ತದ ಹೆಚ್ಚುವರಿ ಸಾಲ ಮಂಜೂರು ಮಾಡಲಾಗಿದೆ.
ಎರಡನೇ ಸುಧಾರಣೆ, ಸುಗಮ ವಾಣಿಜ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ರಾಜ್ಯಗಳು 7 ಕಾಯಿದೆಗಳ ಅಡಿಯಲ್ಲಿ ವ್ಯವಹಾರ-ಸಂಬಂಧಿತ ಪರವಾನಗಿಗಳ ನವೀಕರಣವನ್ನು ಅಲ್ಪ ಶುಲ್ಕ ಪಾವತಿಯ ಮೇಲೆ ಸ್ವಯಂಚಾಲಿತ, ಆನ್ ಲೈನ್ ಮತ್ತು ತಾರತಮ್ಯವಿಲ್ಲದೆ ಮಾಡಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಮತ್ತೊಂದು ಅವಶ್ಯಕತೆಯೆಂದರೆ ಗಣಕೀಕೃತ ಯಾದೃಚ್ಛಿಕ ತಪಾಸಣೆ ವ್ಯವಸ್ಥೆಯ ಅನುಷ್ಠಾನ ಮತ್ತು ಇನ್ನೂ 12 ಕಾಯಿದೆಗಳ ಅಡಿಯಲ್ಲಿ ಕಿರುಕುಳ ಮತ್ತು ಭ್ರಷ್ಟಾಚಾರವನ್ನು ತಗ್ಗಿಸಲು ತಪಾಸಣೆಯ ಪೂರ್ವ ಸೂಚನೆ ನೀಡುವುದಾಗಿದೆ. ಈ ಸುಧಾರಣೆ (19 ಕಾನೂನುಗಳನ್ನು ಒಳಗೊಂಡಿರುತ್ತದೆ) ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನಿರ್ದಿಷ್ಟವಾಗಿ ನೆರವಾಗುತ್ತದೆ, ಅವರು 'ಇನ್ಸ್ ಪೆಕ್ಟರ್ ರಾಜ್' ನ ಹೊರೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಇದು ಸುಧಾರಿತ ಹೂಡಿಕೆಯ ವಾತಾವರಣ, ಹೆಚ್ಚಿನ ಹೂಡಿಕೆ ಮತ್ತು ತ್ವರಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 20 ರಾಜ್ಯಗಳು ಈ ಸುಧಾರಣೆಯನ್ನು ಪೂರ್ಣಗೊಳಿಸಿದ್ದು ಹೆಚ್ಚುವರಿ ರೂ. 39,521 ಕೋಟಿ ರೂ. ಸಾಲ ಪಡೆಯಲು ಅನುಮತಿ ಪಡೆದಿವೆ.
15ನೇ ಹಣಕಾಸು ಆಯೋಗ ಮತ್ತು ಹಲವಾರು ಅಕಾಡಮಿಗಳು ಸದೃಢ ಆಸ್ತಿ ತೆರಿಗೆಯ ಮಹತ್ವವನ್ನು ಪ್ರತಿಪಾದಿಸಿವೆ. ಮೂರನೇ ಸುಧಾರಣೆಗೆ ರಾಜ್ಯಗಳು, ನಗರ ಪ್ರದೇಶಗಳಲ್ಲಿ ಕ್ರಮವಾಗಿ ಆಸ್ತಿ ವಹಿವಾಟಿನ ಮುದ್ರಾಂಕ ಶುಲ್ಕ ಮಾರ್ಗಸೂಚಿ ಮೌಲ್ಯಗಳೊಂದಿಗೆ ಆಸ್ತಿ ತೆರಿಗೆ ಮತ್ತು ನೀರು ಹಾಗೂ ಒಳ ಚರಂಡಿಯ ಫ್ಲೋರ್ ದರಗಳನ್ನು ಅಧಿಸೂಚಿಸುವುದು ಅಗತ್ಯವಾಗಿರುತ್ತದೆ. ಇದು ನಗರ ಬಡ ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತದೆ, ಉತ್ತಮ ಮೂಲಸೌಕರ್ಯಗಳನ್ನು ಬೆಂಬಲಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಸ್ತಿ ತೆರಿಗೆ ಅದರ ಘಟನೆಯಲ್ಲಿ ಪ್ರಗತಿಪರವಾಗಿದೆ ಮತ್ತು ಆದ್ದರಿಂದ ನಗರ ಪ್ರದೇಶಗಳಲ್ಲಿನ ಬಡವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಈ ಸುಧಾರಣೆಯು ಪದೇ ಪದೇ ವೇತನ ಪಾವತಿಯಲ್ಲಿ ವಿಳಂಬವನ್ನು ಎದುರಿಸುತ್ತಿರುವ ಪುರಸಭೆಯ ಸಿಬ್ಬಂದಿಗೆ ಪ್ರಯೋಜನವನ್ನು ನೀಡುತ್ತದೆ. 11 ರಾಜ್ಯಗಳು ಈ ಸುಧಾರಣೆಗಳನ್ನು ಪೂರ್ಣಗೊಳಿಸಿದ್ದು, ಹೆಚ್ಚುವರಿ ರೂ. 15,957 ಕೋಟಿ ರೂ. ಸಾಲ ಮಂಜೂರಾತಿ ಪಡೆದಿವೆ.
ನಾಲ್ಕನೇ ಸುಧಾರಣೆ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಬದಲು ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಪರಿಚಯಿಸುವುದಾಗಿದೆ. ವರ್ಷಾಂತ್ಯಕ್ಕೆ ಪ್ರಾಯೋಗಿಕ ಆಧಾರದ ಮೇಲೆ ಒಂದು ಜಿಲ್ಲೆಯಲ್ಲಿ ವಾಸ್ತವ ಅನುಷ್ಠಾನದೊಂದಿಗೆ ರಾಜ್ಯವ್ಯಾಪಿ ಯೋಜನೆಯನ್ನು ರೂಪಿಸುವ ಅವಶ್ಯಕತೆಯಾಗಿದೆ. ಜಿ.ಎಸ್.ಡಿ.ಪಿ.ಯ ಶೇ.0.15 ಹೆಚ್ಚುವರಿ ಸಾಲವನ್ನು ಇದಕ್ಕೆ ಸಂಪರ್ಕಿಸಲಾಗಿದೆ. ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳನ್ನು ತಗ್ಗಿಸಲು ಮತ್ತು ಆದಾಯ ಮತ್ತು ವೆಚ್ಚಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅಂಶವನ್ನು ಸಹ ಒದಗಿಸಲಾಗಿದೆ (ಪ್ರತಿಯೊಂದಕ್ಕೂ ಜಿ.ಎಸ್.ಡಿ.ಪಿ.ಯ ಶೇ.0.05). ಇದು ವಿತರಣಾ ಕಂಪನಿಗಳ ಹಣಕಾಸನ್ನು ಸುಧಾರಿಸುತ್ತದೆ, ನೀರು ಮತ್ತು ಇಂಧನ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಕ್ಷಮತೆಯ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ. 13 ರಾಜ್ಯಗಳು ಕನಿಷ್ಠ ಒಂದು ಅಂಶವನ್ನಾದರೂ ಅನುಷ್ಠಾನ ಮಾಡಿದ್ದರೆ, 6 ರಾಜ್ಯಗಳು ಡಿಬಿಟಿಯನ್ನು ಅನುಷ್ಠಾನ ಮಾಡಿವೆ. ಇದರ ಫಲವಾಗಿ 13,201 ಕೋಟಿ ಹೆಚ್ಚುವರಿ ಸಾಲ ಪಡೆಯಲು ಅನುಮತಿಸಲಾಗಿದೆ.
ಒಟ್ಟಾರೆಯಾಗಿ 23 ರಾಜ್ಯಗಳು ಸಂಭಾವ್ಯ 2.14 ಲಕ್ಷ ಕೋಟಿ ರೂ. ಪೈಕಿ ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ಸಾಲವನ್ನು ಪಡೆದಿವೆ, ಇದರ ಫಲವಾಗಿ, 2020-21ರಲ್ಲಿ ರಾಜ್ಯಗಳಿಗೆ ಮಂಜೂರು ಮಾಡಿರುವ ಸರಾಸರಿ ಸಾಲದ ಅನುಮತಿ (ಷರತ್ತುಬದ್ಧ ಮತ್ತು ಷರತ್ತು ರಹಿತ) ಜಿಎಸ್.ಡಿ.ಪಿ.ಯ ಪ್ರಾಥಮಿಕ ಅಂದಾಜಿನ ಶೇ.4.5ರಷ್ಟಾಗಿದೆ.
ನಮ್ಮಂತೆಯೇ ಸಂಕೀರ್ಣ ಸವಾಲುಗಳನ್ನು ಹೊಂದಿರುವ ದೊಡ್ಡ ರಾಷ್ಟ್ರಕ್ಕೆ, ಇದು ಒಂದು ವಿಶಿಷ್ಟ ಅನುಭವವಾಗಿತ್ತು. ವಿವಿಧ ಕಾರಣಗಳಿಗಾಗಿ, ಯೋಜನೆಗಳು ಮತ್ತು ಸುಧಾರಣೆಗಳು ವರ್ಷಗಳವರೆಗೆ ಕಾರ್ಯನಿರ್ವಹಿಸದೆ ಇರುವುದನ್ನು ನಾವು ಬಹಳ ನೋಡಿದ್ದೇವೆ. ಸಾಂಕ್ರಾಮಿಕದ ನಡುವೆಯೂ ಅಲ್ಪಾವಧಿಯಲ್ಲಿಯೇ ಸಾರ್ವಜನಿಕ ಸ್ನೇಹಿ ಸುಧಾರಣೆಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿದ ಹಿಂದಿನ ಕಾಲದಿಂದ ಇದು ಆಹ್ಲಾದಕರ ನಿರ್ಗಮನವಾಗಿತ್ತು. ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ನಮ್ಮ ದೃಷ್ಟಿಕೋನದಿಂದ ಇದು ಸಾಧ್ಯವಾಗಿದೆ. ಈ ಸುಧಾರಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹೆಚ್ಚುವರಿ ನಿಧಿಯ ಪ್ರೋತ್ಸಾಹಕವಿಲ್ಲದೆ, ಈ ನೀತಿಗಳನ್ನು ಜಾರಿಗೊಳಿಸಲು ವರ್ಷಗಳೇ ಬೇಕಾಗುತ್ತಿತ್ತು ಎನ್ನುತ್ತಾರೆ. ಭಾರತವು 'ರಹಸ್ಯ ಮತ್ತು ಕಡ್ಡಾಯವಾಗಿ ಸುಧಾರಣೆಗಳ' ಮಾದರಿಯನ್ನು ಕಂಡಿದೆ. ಇದು 'ದೃಢ ನಿಶ್ಚಯ ಮತ್ತು ಪ್ರೋತ್ಸಾಹಕದಿಂದ ಸುಧಾರಣೆಗಳ' ಹೊಸ ಮಾದರಿಯಾಗಿದೆ. ನಮ್ಮ ನಾಗರಿಕರ ಸುಧಾರಣೆಗಾಗಿ ಕಠಿಣ ಸಮಯದ ನಡುವೆಯೂ ಈ ನೀತಿಗಳನ್ನು ರೂಪಿಸುವಲ್ಲಿ ಮುಂದಾಳತ್ವ ವಹಿಸಿದ ಎಲ್ಲ ರಾಜ್ಯಗಳಿಗೆ ನಾನು ಆಭಾರಿಯಾಗಿದ್ದೇನೆ. 130 ಕೋಟಿ ಭಾರತೀಯರ ಶೀಘ್ರ ಪ್ರಗತಿಗಾಗಿ ನಾವು ಒಟ್ಟಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ.