ನನ್ನ ಸ್ನೇಹಿತ, ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಅಧಿಕೃತ ಭೇಟಿಗಾಗಿ ಜುಲೈ 13-14ರ ವರೆಗೆ ಫ್ರಾನ್ಸ್‌ಗೆ ಪ್ರಯಾಣಿಸುತ್ತಿದ್ದೇನೆ.
ಈ ಭೇಟಿಯು ನಿರ್ದಿಷ್ಟವಾಗಿ ವಿಶೇಷವಾಗಿದೆ. ಏಕೆಂದರೆ ನಾನು ಫ್ರೆಂಚ್ ರಾಷ್ಟ್ರೀಯ ದಿನ ಅಥವಾ ಪ್ಯಾರಿಸ್‌ನ ‘ಬಾಸ್ಟಿಲ್ ದಿನ’ ಆಚರಣೆಗಳಿಗೆ ಗೌರವ ಅತಿಥಿಯಾಗಿ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ಭಾರತೀಯ ತ್ರಿ-ಸೇವಾ ತುಕಡಿಯು ‘ಬಾಸ್ಟಿಲ್ ಡೇ ಪರೇಡ್’ನ ಭಾಗವಾಗಲಿದ್ದು, ಭಾರತೀಯ ವಾಯುಪಡೆಯ ವಿಮಾನವು ಈ ಸಂದರ್ಭದಲ್ಲಿ ವೈಮಾನಿಕ ಹಾರಾಟ(ಫ್ಲೈ-ಪಾಸ್ಟ್) ಪ್ರದರ್ಶನ ನೀಡಲಿದೆ.
ಈ ವರ್ಷ ಉಭಯ ರಾಷ್ಟ್ರಗಳ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತಿದೆ. ಆಳವಾದ ನಂಬಿಕೆ ಮತ್ತು ಬದ್ಧತೆಯಿಂದ ಬೇರೂರಿರುವ ನಮ್ಮ ಎರಡು ದೇಶಗಳು ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ನೀಲಿ ಆರ್ಥಿಕತೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಸಂಸ್ಕೃತಿ ಮತ್ತು ಜನರೊಂದಿಗೆ ಜನರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತಿವೆ. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆಯೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.
ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಲು ಮತ್ತು ಮುಂದಿನ 25 ವರ್ಷಗಳಲ್ಲಿ ಈ ದೀರ್ಘಾವಧಿಯ ಮತ್ತು ಸಮಯ-ಪರೀಕ್ಷಿತ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಲು ನಾನು ಎದುರು ನೋಡುತ್ತಿದ್ದೇನೆ. 2022ರಲ್ಲಿ ಫ್ರಾನ್ಸ್‌ಗೆ ನನ್ನ ಕೊನೆಯ ಅಧಿಕೃತ ಭೇಟಿಯ ನಂತರ, ಇತ್ತೀಚೆಗೆ ಮೇ 2023ರಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ G-7 ಶೃಂಗಸಭೆಯಲ್ಲಿ ಅಧ್ಯಕ್ಷ ಮ್ಯಾಕ್ರಾನ್ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಹಲವಾರು ಬಾರಿ ಸಿಕ್ಕಿತ್ತು. ಗೌರವಾನ್ವಿತ ಫ್ರೆಂಚ್ ನಾಯಕರೊಂದಿಗೆ ನಾನು ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ. ಶ್ರೀಮತಿ ಎಲಿಸಬೆತ್ ಬೋರ್ನ್, ಫ್ರಾನ್ಸ್ ಪ್ರಧಾನ ಮಂತ್ರಿ ಗೌರವಾನ್ವಿತ ಸೆನೆಟ್ ಅಧ್ಯಕ್ಷ ಶ್ರೀ ಗೆರಾರ್ಡ್ ಲಾರ್ಚರ್, ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾದ ಶ್ರೀಮತಿ ಯೆಲ್ ಬ್ರೌನ್-ಪಿವೆಟ್ ಅವರನ್ನು ಭೇಟಿಯಾಗಲಿದ್ದೇನೆ.
ನನ್ನ ಫ್ರಾನ್ಸ್ ಭೇಟಿ ಸಮಯದಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಲು ನನಗೆ ಅವಕಾಶವಿದೆ. ಎರಡೂ ದೇಶಗಳ ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಪ್ರಮುಖ ಫ್ರೆಂಚ್ ಗಣ್ಯರನ್ನು ಭೇಟಿಯಾಗಲಿದ್ದೇನೆ. ನನ್ನ ಭೇಟಿಯು ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ಪ್ಯಾರಿಸ್‌ನಿಂದ ನಾನು ಜುಲೈ 15ರಂದು ಅಧಿಕೃತ ಭೇಟಿಗಾಗಿ ಸಂಯುಕ್ತ ಅರಬ್ ಎಮಿರೇಟ್ಸ್‌ನ ಅಬುಧಾಬಿಗೆ ಪ್ರಯಾಣಿಸಲಿದ್ದೇನೆ. ನನ್ನ ಸ್ನೇಹಿತ, ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಎಚ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.
ನಮ್ಮ ಎರಡು ದೇಶಗಳು ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು ತಂತ್ರಜ್ಞಾನ, ರಕ್ಷಣೆ, ಭದ್ರತೆ ಮತ್ತು ದೃಢವಾದ ಜನರಿಂದ ಜನರ ಸಂಬಂಧಗಳಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. ಕಳೆದ ವರ್ಷ, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಮತ್ತು ನಾನು ನಮ್ಮ ಪಾಲುದಾರಿಕೆಯ ಭವಿಷ್ಯದ ಕುರಿತು ಮಾರ್ಗಸೂಚಿಯನ್ನು ಒಪ್ಪಿಕೊಂಡಿದ್ದೆವು. ನಮ್ಮ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸುವುದು ಹೇಗೆ ಎಂದು ಅವರೊಂದಿಗೆ ಚರ್ಚಿಸಲು ನಾನು ಎದುರು ನೋಡುತ್ತಿದ್ದೇನೆ.
ಯುಎಇ ಈ ವರ್ಷದ ಕೊನೆಯಲ್ಲಿ ಹವಾಮಾನ ಬದಲಾವಣೆಯ ವಿಶ್ವಸಂಸ್ಥೆ ಮಾರ್ಗಸೂಚಿ ಒಪ್ಪಂದ ಸಮಾವೇಶ(UNFCCC - COP-28)ದ ಪಕ್ಷಗಳ 28ನೇ ಸಮ್ಮೇಳನ ಆಯೋಜಿಸಲಿದೆ. ಇಂಧನ ಪರಿವರ್ತನೆ ಮತ್ತು ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಹವಾಮಾನ ಕ್ರಿಯೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಸಹಕಾರ ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ.
ಯುಎಇಗೆ ನನ್ನ ಭೇಟಿಯು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.