ರಷ್ಯನ್ ಒಕ್ಕೂಟದ ಅಧ್ಯಕ್ಷರೇ! ನನ್ನ ಪ್ರೀತಿಯ ಸ್ನೇಹಿತರಾದ ಅಧ್ಯಕ್ಷ ಪುಟಿನ್!, ಗೌರವಾನ್ವಿತರೇ, ಪೂರ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿರುವ ಪ್ರತಿನಿಧಿಗಳೇ!. ನಮಸ್ಕಾರ!.
ಪೂರ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲು ನಾನು ಹರ್ಷಿಸುತ್ತೇನೆ. ಮತ್ತು ಈ ಗೌರವಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಸ್ನೇಹಿತರೇ!
ಭಾರತದ ಚರಿತ್ರೆ ಮತ್ತು ನಾಗರಿಕತೆಯಲ್ಲಿ “ಸಂಗಮ” ಎಂಬ ಶಬ್ದಕ್ಕೆ ವಿಶೇಷ ಅರ್ಥವಿದೆ. ಇದರರರ್ಥ ನದಿಗಳು ಒಗ್ಗೂಡುವುದು, ಜನರು ಅಥವಾ ಚಿಂತನೆಗಳು ಒಟ್ಟುಗೂಡುವುದು ಎಂಬುದಾಗಿದೆ. ನನ್ನ ದೃಷ್ಟಿಯಲ್ಲಿ ವ್ಲಾಡಿವೋಸ್ಟೋಕ್ ಎಂದರೆ ನಿಜವಾಗಿಯೂ ಯುರೇಶಿಯಾ ಮತ್ತು ರಷ್ಯನ್ ದೂರ ಪ್ರಾಚ್ಯದ “ಸಂಗಮ”. ಅಧ್ಯಕ್ಷ ಪುಟಿನ್ ಅವರ ರಷ್ಯನ್ ದೂರ ಪ್ರಾಚ್ಯ ಅಭಿವೃದ್ಧಿ ಕುರಿತಾದ ದೂರದೃಷ್ಟಿಯನ್ನು ನಾನು ಮೆಚ್ಚುತ್ತೇನೆ. ಈ ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ಭಾರತವು ರಶ್ಯಾದ ನಂಬಲರ್ಹ ಪಾಲುದಾರನಾಗಿರುತ್ತದೆ. 2019ರಲ್ಲಿ ನಾನು ವೇದಿಕೆಯಲ್ಲಿ ಭಾಗವಹಿಸಲು ವ್ಲಾಡಿವೋಸ್ಟೋಕ್ ಗೆ ಭೇಟಿ ನೀಡಿದ್ದೆ ಮತ್ತು “ದೂರ ಪ್ರಾಚ್ಯದಲ್ಲಿ ಕಾರ್ಯಾಚರಿಸುವ” ನೀತಿಗೆ ಭಾರತದ ಬದ್ಧತೆಯನ್ನು ಘೋಷಿಸಿದ್ದೆ. ಈ ನೀತಿಯು ರಶ್ಯಾದೊಂದಿಗೆ ನಮ್ಮ ವಿಶೇಷ ಮತ್ತು ಸವಲತ್ತು ಪೂರ್ಣ ಕಾರ್ಯತಂತ್ರಾತ್ಮಕ ಸಹಭಾಗಿತ್ವದ ಪ್ರಮುಖ ಭಾಗ.
ಗೌರವಾನ್ವಿತರೇ!
ಅಧ್ಯಕ್ಷ ಪುಟಿನ್, ನನಗೆ ನೆನಪಿದೆ 2019 ರಲ್ಲಿ ನನ್ನ ಭೇಟಿ ಸಂದರ್ಭದಲ್ಲಿ ವ್ಲಾಡಿವೊಸ್ಟೋಕ್ನಿಂದ ಝ್ವೆಝ್ಡಾವರೆಗಿನ ದೋಣಿ ವಿಹಾರದ ಸಂದರ್ಭದ ನಮ್ಮ ವಿವರವಾದ ಸಂಭಾಷಣೆ, ಮಾತುಕತೆ. ನೀವು ನನಗೆ ಝ್ವೆಝ್ಡಾದಲ್ಲಿಯ ಆಧುನಿಕ ಹಡಗು ನಿರ್ಮಾಣ ಸೌಲಭ್ಯವನ್ನು ತೋರಿಸಿದಿರಿ ಮತ್ತು ಭಾರತವು ಈ ದೊಡ್ಡ ಉದ್ಯಮದಲ್ಲಿ ಸಹಭಾಗಿಯಾಗುವ ಆಶಯವನ್ನು ವ್ಯಕ್ತಪಡಿಸಿದಿರಿ. ಭಾರತದ ಅತ್ಯಂತ ದೊಡ್ಡ ಹಡಗು ಯಾರ್ಡ್ ಆಗಿರುವ ಮಜ್ ಗಾಂವ್ ಡಾಕ್ಸ್ ಲಿಮಿಟೆಡ್ ಸಂಸ್ಥೆ ಝ್ವೆಝ್ಡಾ ದೊಂದಿಗೆ ಕೈಜೋಡಿಸಿ ಜಗತ್ತಿನಲ್ಲಿಯೇ ಇಂದು ಅತಿ ಪ್ರಮುಖ ವ್ಯಾಪಾರಿ ಹಡಗುಗಳ ನಿರ್ಮಾಣದಲ್ಲಿ ಸಹಭಾಗಿತ್ವವನ್ನು ಪಡೆದುಕೊಂಡಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಭಾರತ ಮತ್ತು ರಶ್ಯಾಗಳು ಗಗನಯಾನ್ ಕಾರ್ಯಕ್ರಮದ ಬಾಹ್ಯಾಕಾಶ ಅನ್ವೇಷಣೆಯಲ್ಲಿಯೂ ಸಹಭಾಗಿಗಳಾಗಿವೆ. ಭಾರತ ಮತ್ತು ರಷ್ಯಾ ಗಳು ಉತ್ತರ ಸಮುದ್ರ ಮಾರ್ಗವನ್ನು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯಕ್ಕಾಗಿ ತೆರೆಯಲ್ಪಡುವಲ್ಲಿಯೂ ಪಾಲುದಾರವಾಗುತ್ತಿವೆ.
ಸ್ನೇಹಿತರೇ!.
ಭಾರತ ಮತ್ತು ರಷ್ಯಾ ನಡುವಣ ಬಾಂಧವ್ಯ ಕಾಲದ ಪರೀಕ್ಷೆಯಲ್ಲೂ ದೃಢವಾಗಿ ನಿಂತಿದೆ. ಇತ್ತೀಚೆಗೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿಯೂ ನಮ್ಮ ದೃಢವಾದ ಸಹಕಾರ ಲಸಿಕಾ ಕ್ಷೇತ್ರವೂ ಸೇರಿದಂತೆ ಇತರ ಕ್ಷೇತ್ರಗಳಲ್ಲಿಯೂ ಕಾಣಬಹುದಾಗಿದೆ. ಈ ಜಾಗತಿಕ ಸಾಂಕ್ರಾಮಿಕವು ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಆರೋಗ್ಯ ಮತ್ತು ಔಷಧ ತಯಾರಿಕಾ ವಲಯದ ಮಹತ್ವವನ್ನು ಮನಗಾಣಿಸಿದೆ. ಇಂಧನವು ನಮ್ಮ ಕಾರ್ಯತಂತ್ರಾತ್ಮಕ ಸಹಭಾಗಿತ್ವದ ಇನ್ನೊಂದು ಪ್ರಮುಖ ಸ್ತಂಭ. ಭಾರತ-ರಶ್ಯಾ ಇಂಧನ ಸಹಭಾಗಿತ್ವವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡಬಲ್ಲದು. ನನ್ನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವಾಲಯದ ಶ್ರೀ ಹರ್ದೀಪ್ ಪುರಿ ಅವರು ಈ ವೇದಿಕೆಯಲ್ಲಿ ಭಾರತದ ಪ್ರತಿನಿಧಿಯಾಗಿ ವ್ಲಾಡಿವೋಸ್ಟೋಕ್ ನಲ್ಲಿದ್ದಾರೆ. ಭಾರತದ ಕಾರ್ಮಿಕರು ಅಮುರ್ ವಲಯದಲ್ಲಿ ಯಮಾಲ್ ನಿಂದ ವ್ಲಾಡಿವೊಸ್ಟೋಕ್ ವರೆಗೆ ಮತ್ತು ಮುಂದೆ ಚೆನ್ನೈಗೆ ಸಾಗುವ ಪ್ರಮುಖ ಅನಿಲ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ. ನಾವು ಇಂಧನ ಮತ್ತು ವ್ಯಾಪಾರದ ಸೇತುವೆಯನ್ನು ಕಾಣುತ್ತಿದ್ದೇವೆ. ಚೆನ್ನೈ-ವ್ಲಾಡಿಸ್ಟೋಕ್ ಸಾಗರ ಕಾರಿಡಾರ್ ಮುನ್ನಡೆಯಲ್ಲಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಈ ಸಂಪರ್ಕ ಯೋಜನೆಯು ಅಂತಾರಾಷ್ಟ್ರೀಯ ಉತ್ತರ –ದಕ್ಷಿಣ ಕಾರಿಡಾರಿನ ಜೊತೆಗೂಡಿ ಭಾರತ ಮತ್ತು ರಶ್ಯಾವನ್ನು ಭೌತಿಕವಾಗಿ ಪರಸ್ಪರ ಹತ್ತಿರಕ್ಕೆ ತರಲಿದೆ. ಜಾಗತಿಕ ಸಾಂಕ್ರಾಮಿಕ ಸಂಬಂಧಿ ನಿರ್ಬಂಧಗಳು ಜಾರಿಯಲ್ಲಿದ್ದರೂ ಹಲವು ಕ್ಷೇತ್ರಗಳಲ್ಲಿ ನಮ್ಮ ವ್ಯಾಪಾರ ಕೊಂಡಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಪ್ರಗತಿಯಾಗಿದೆ. ಇದರಲ್ಲಿ ಭಾರತದ ಉಕ್ಕು ಕೈಗಾರಿಕೆಗೆ ಕಲ್ಲಿದ್ದಲು ಪೂರೈಸುವ ಧೀರ್ಘಾವಧಿಯ ಒಪ್ಪಂದವೂ ಸೇರಿದೆ. ನಾವು ಕ್ಕೃಷಿ ಕೈಗಾರಿಕೆ. ಸಿರಾಮಿಕ್ಸ್, ಕಾರ್ಯತಂತ್ರಾತ್ಮಕ ಮತ್ತು ಅಪೂರ್ವ ಖನಿಜಗಳು ಹಾಗು ವಜ್ರಗಳ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಣೆ ಮಾಡುತ್ತಿದ್ದೇವೆ. ಸಾಖಾ-ಯಾಕುಟಿಯಾ ಮತ್ತು ಗುಜರಾತಿನ ವಜ್ರ ಉದ್ಯಮದ ಪ್ರತಿನಿಧಿಗಳು ಈ ವೇದಿಕೆಯ ಅಂಗವಾಗಿ ಪ್ರತ್ಯೇಕ ಸಮಾಲೋಚನೆ ನಡೆಸಲಿರುವುದು ನನಗೆ ಸಂತೋಷದ ಸಂಗತಿಯಾಗಿದೆ. 2019 ರಲ್ಲಿ ಘೋಷಿಸಲಾದ 1 ಬಿಲಿಯನ್ ಡಾಲರಿನ ಮೃದು ಸಾಲ ಉಭಯ ದೇಶಗಳ ನಡುವೆ ಹಲವಾರು ಉದ್ಯಮ ಅವಕಾಶಗಳನ್ನು ನಿರ್ಮಾಣ ಮಾಡಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ರಷ್ಯನ್ ದೂರ ಪ್ರಾಚ್ಯ ಮತ್ತು ಭಾರತದ ಸೂಕ್ತ ರಾಜ್ಯಗಳನ್ನು ಒಂದೇ ವೇದಿಕೆಗೆ ತರುವ ಮತ್ತು ಅದರ ಭಾಗೀದಾರರನ್ನು ಒಗ್ಗೂಡಿಸುವುದರಿಂದ ಬಹಳ ಪ್ರಯೋಜನಗಳಾಗಲಿವೆ. 2019ರಲ್ಲಿ ಪ್ರಮುಖ ಭಾರತೀಯ ರಾಜ್ಯಗಳ ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ನಡೆದ ಉಪಯುಕ್ತ ಮಾತುಕತೆಯನ್ನು ಮುಂದಕ್ಕೆ ಕೊಂಡೊಯ್ಯಬೇಕು. ರಷ್ಯಾದ ದೂರ ಪ್ರಾಚ್ಯದ 11 ವಲಯಗಳ ಗವರ್ನರ್ ಗಳಿಗೆ ಆದಷ್ಟು ಬೇಗ ಭಾರತಕ್ಕೆ ಬರುವಂತೆ ನಾನು ಆಹ್ವಾನ ನೀಡುತ್ತಿದ್ದೇನೆ.
ಸ್ನೇಹಿತರೇ!
ನಾನು 2019 ರಲ್ಲಿ ಈ ವೇದಿಕೆಯಲ್ಲಿ ಹೇಳಿದಂತೆ ಭಾರತದ ಪ್ರತಿಭೆ ಜಗತ್ತಿನ ಹಲವು ಸಂಪದ್ಭರಿತ ವಲಯಗಳ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಭಾರತವು ಪ್ರತಿಭಾಪೂರ್ಣ ಮತ್ತು ಅರ್ಪಣಾಭಾವದ ಕಾರ್ಮಿಕ ಪಡೆಯನ್ನು ಹೊಂದಿದೆ, ದೂರ ಪ್ರಾಚ್ಯವು ಶ್ರೀಮಂತ ಸಂಪನ್ಮೂಲಗಳನ್ನು ಹೊಂದಿದೆ. ಇದರಿಂದ ಭಾರತದ ಕಾರ್ಮಿಕ ಪಡೆಗೆ ರಶ್ಯಾದ ದೂರ ಪ್ರಾಚ್ಯದ ಅಭಿವೃದ್ಧಿಗೆ ಕೊಡುಗೆ ನೀಡಲು ವಿಪುಲ ಅವಕಾಶಗಳಿವೆ. ಈ ವೇದಿಕೆ ನಡೆಯುತ್ತಿರುವ ಫಾರ್ ಈಸ್ಟರ್ನ್ ಫೆಡರಲ್ ವಿಶ್ವವಿದ್ಯಾಲಯ ಹೆಚ್ಚುತ್ತಿರುವ ಭಾರತದ ವಿದ್ಯಾರ್ಥಿಗಳ ಮನೆಯಂತಾಗಿದೆ.
ಗೌರವಾನ್ವಿತರೇ!
ಅಧ್ಯಕ್ಷ ಪುಟಿನ್ , ಈ ವೇದಿಕೆಯಲ್ಲಿ ಮಾತನಾಡುವ ಅವಕಾಶ ನನಗೆ ನೀಡಿದುದಕ್ಕಾಗಿ ನಾನು ನಿಮಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ. ನೀವು ಸದಾ ಭಾರತದ ಅತಿ ದೊಡ್ಡ ಗೆಳೆಯರಾಗಿದ್ದೀರಿ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ನಮ್ಮ ಕಾರ್ಯತಮತ್ರಾತ್ಮಕ ಸಹಭಾಗಿತ್ವ ದಿನದಿಂದ ದಿನಕ್ಕೆ ಬಲಿಷ್ಟವಾಗಿ ಬೆಳೆಯಲಿದೆ. ಪೂರ್ವ ಆರ್ಥಿಕ ವೇದಿಕೆಯ ಎಲ್ಲಾ ಭಾಗೀದಾರರಿಗೆ ಎಲ್ಲ ರೀತಿಯ ಯಶಸ್ಸು ದೊರೆಯಲಿ ಎಂದು ನಾನು ಹಾರೈಸುತ್ತೇನೆ.
ಸ್ಪಾಸಿಬಾ!
ಧನ್ಯವಾದ
ನಿಮಗೆ ಬಹಳ ಬಹಳ ಧನ್ಯವಾದಗಳು!.