ನಮಸ್ಕಾರ!
ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ನಿತಿನ್ ಗಡ್ಕರಿ ಜೀ ಅವರೇ, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಜೀ ಅವರೇ, ಆಟೋ ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರೇ, ಎಲ್ಲಾ ಒ.ಇ.ಎಂ. ಸಂಘಟಣೆಗಳ ಪ್ರತಿನಿಧಿಗಳೇ, ಎಲ್ಲಾ ತರದ ಲೋಹಗಳ ಮತ್ತು ಗುಜುರಿ (ಸ್ಕ್ರ್ಯಾಪಿಂಗ್) ಉದ್ಯಮದ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
75 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಈ ಕಾರ್ಯಕ್ರಮವು ಸ್ವಾವಲಂಬಿ ಭಾರತದ ಮಹತ್ವದ ಗುರಿಗಳನ್ನು ಈಡೇರಿಸುವ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ. ಇಂದು ದೇಶವು ನೂತನ ರಾಷ್ಟ್ರೀಯ ವಾಹನಗಳ ಗುಜುರಿ (ಆಟೋಮೊಬೈಲ್ ಸ್ಕ್ರ್ಯಾಪೇಜ್) ನೀತಿಯನ್ನು ಪ್ರಾರಂಭಿಸುತ್ತಿದೆ. ಈ ನೂತನ ನೀತಿಯು ಹೊಸ ಭಾರತದ ಚಲನಶೀಲತೆಗೆ ಮತ್ತು ಆಟೋ ವಲಯಕ್ಕೆ ಹೊಸ ಗುರುತನ್ನು ಒದಗಿಸಲಿದೆ. ಈ ನೂತನ ನೀತಿಯು ದೇಶದಲ್ಲಿ ವಾಹನಗಳ ಜನಸಂಖ್ಯೆಯ ಆಧುನೀಕರಣ ಮತ್ತು ರಸ್ತೆಗಳಿಂದ ಅನರ್ಹ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆಗೆಯುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇದು ದೇಶದ ಪ್ರತಿಯೊಬ್ಬ ಪ್ರಜೆ, ಪ್ರತಿ ಉದ್ಯಮ ಮತ್ತು ಪ್ರತಿ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.
ದೇಶದ ಆರ್ಥಿಕತೆಗೆ ಸಾಗಾಟ-ಸಾರಿಗೆ-ಚಲನಶೀಲತೆಯು ಒಂದು ದೊಡ್ಡ ಅಂಶ ಎಂದು ನಿಮಗೆಲ್ಲರಿಗೂ ತಿಳಿದಿದೆ. ಚಲನಶೀಲತೆಯಲ್ಲಿನ ಆಧುನಿಕತೆಯು ಪ್ರಯಾಣ ಮತ್ತು ಸಾರಿಗೆಯ ಹೊರೆಯನ್ನು ಕಡಿಮೆಮಾಡುವುದಲ್ಲದೆ, ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿಯಾಗಿದೆ. 21 ನೇ ಶತಮಾನದ ಭಾರತ ಸ್ವಚ್ಛ, ದಟ್ಟಣೆ ರಹಿತ ಮತ್ತು ಅನುಕೂಲಕರ ಚಲನಶೀಲತೆಯ ಗುರಿಯೊಂದಿಗೆ ಸಾಗಬೇಕು ಮತ್ತು ಇದು ಇಂದಿನ ಅಗತ್ಯವಾಗಿದೆ. ಆದ್ದರಿಂದ, ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ ಮತ್ತು ಉದ್ಯಮದ ಎಲ್ಲಾ ದಿಗ್ಗಜರು ಮತ್ತು ಎಲ್ಲಾ ಮಧ್ಯಸ್ಥಗಾರರಿಗೆ ಇದರಲ್ಲಿ ಪ್ರಮುಖ ಪಾತ್ರವಿದೆ.
ಸ್ನೇಹಿತರೇ,
ತ್ಯಾಜ್ಯದಿಂದ ಸಂಪತ್ತು ಮಿಷನ್ ಮತ್ತು ಆರ್ಥಿಕತೆಯ ವೃತ್ತ ಇವುಗಳ ಒಂದು ಹೊಸ ಭಾಗವಾಗಿದೆ ಈ ನೂತನ ನೂತನ ರಾಷ್ಟ್ರೀಯ ವಾಹನಗಳ ಗುಜುರಿ (ಆಟೋಮೊಬೈಲ್ ಸ್ಕ್ರ್ಯಾಪೇಜ್) ನೀತಿಯಾಗಿದೆ. ಈ ನೀತಿಯು ದೇಶದ ನಗರಗಳಿಂದ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರವನ್ನು ರಕ್ಷಿಸಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ತ್ವರಿತ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ. ಮರುಬಳಕೆ, ಮಾರ್ಪಡಿಸಿ ಪುನರ್ಬಳಕೆ ಮತ್ತು ಮರು ಸೃಷ್ಟಿಸಿ ಬಳಕೆ ತತ್ವಗಳನ್ನು ಅನುಸರಿಸಿ, ಈ ನೀತಿಯು ವಾಹನ ಮತ್ತು ಲೋಹದ ವಲಯಗಳಲ್ಲಿ ದೇಶದ ಸ್ವಾವಲಂಬನೆಗೆ ಹೊಸ ಶಕ್ತಿಯನ್ನು ನೀಡುತ್ತದೆ. ಮೇಲಾಗಿ, ಈ ನೀತಿಯು ದೇಶದಲ್ಲಿ ರೂಪಾಯಿ 10,000 ಕೋಟಿಗಳಿಗಿಂತ ಹೆಚ್ಚಿನ ಹೊಸ ಹೂಡಿಕೆಯನ್ನು ತರುತ್ತದೆ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೇ,
ನಾವು ಇಂದು ಆರಂಭಿಸಿದ ಈ ಕಾರ್ಯಕ್ರಮದ ಸಮಯವು ಕೂಡಾ ತುಂಬಾ ವಿಶೇಷವಾಗಿದೆ. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಪ್ರವೇಶಿಸಲಿದ್ದೇವೆ. ಇಲ್ಲಿಂದ ಮುಂದೆ, ಮುಂದಿನ 25 ವರ್ಷಗಳು ದೇಶಕ್ಕೆ ಬಹಳ ಮುಖ್ಯ. ಮುಂದಿನ 25 ವರ್ಷಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಮತ್ತು ವ್ಯವಹಾರಗಳಲ್ಲಿ ನಾವು ಕೆಲಸ ಮಾಡುವ ರೀತಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ನಮ್ಮ ಜೀವನ ಶೈಲಿಯಲ್ಲಿ ಮತ್ತು ನಮ್ಮ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ, ಏಕೆಂದರೆ ತಂತ್ರಜ್ಞಾನವು ಬದಲಾಗುತ್ತಿರುವ ರೀತಿ ಹಾಗಿದೆ. ಈ ಬದಲಾವಣೆಯ ಮಧ್ಯೆ, ನಮ್ಮ ಪರಿಸರ, ಭೂಮಿ, ಸಂಪನ್ಮೂಲಗಳು ಮತ್ತು ಕಚ್ಚಾ ವಸ್ತುಗಳನ್ನು ರಕ್ಷಿಸುವುದು ಅಷ್ಟೇ ಮುಖ್ಯ. ಯಾವಾಗ ತಂತ್ರಜ್ಞಾನದ ಚಲನಶೀಲತೆಗೆ ಆಧಾರವಾಗಿರುವ ಭೂಮಿಯೊಳಗಿನ ಅಪರೂಪದ ಅಮೂಲ್ಯ ಲೋಹಗಳು ಮುಂಬರುವ ದಿನಗಳಲ್ಲಿ ವಿರಳವಾಗಬಹುದು. ಲಭ್ಯವಾಗುವ ಭೂಮಿಯೊಳಗಿನ ವಿಶಿಷ್ಟ ಲೋಹಗಳು ಅಪರೂಪವಾಗಬಹುದು ಎಂದು ಹೇಳಲು ಮನಸ್ಸು ಭಾರವೆನಿಸುತ್ತದೆ. ನಾವು ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೇಲೆ ಕೆಲಸ ಮಾಡಬಹುದು, ಆದರೆ ನಾವು ಭೂಮಿಯಿಂದ ಪಡೆದ ಹಾಗೂ ಪಡೆಯುವ ಸಂಪತ್ತು ನಮ್ಮ ಕೈಯಲ್ಲಿಲ್ಲ. ಆದ್ದರಿಂದ, ಒಂದು ಕಡೆ, ಭಾರತವು ಡೀಪ್ ಓಷನ್ ಮಿಷನ್ ಮೂಲಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ, ಮತ್ತೊಂದೆಡೆ, ಇದು ಆರ್ಥಿಕತೆಯ ವೃತ್ತವನ್ನು ಪ್ರೋತ್ಸಾಹಿಸುತ್ತಿದೆ. ಅಭಿವೃದ್ಧಿಯು ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿಸುವ ಪ್ರಯತ್ನವಾಗಿದೆ. ಹವಾಮಾನ ಬದಲಾವಣೆಯ ಸವಾಲುಗಳನ್ನು ನಾವು ಪ್ರತಿದಿನ ಅನುಭವಿಸುತ್ತಿದ್ದೇವೆ. ಆದ್ದರಿಂದ, ಭಾರತವು ತನ್ನ ಹಿತಾಸಕ್ತಿ ಮತ್ತು ತನ್ನ ಪ್ರಜೆಗಳ ಹಿತದೃಷ್ಟಿಯಿಂದ ದೊಡ್ಡ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಚಿಂತನೆಯೊಂದಿಗೆ, ಕಳೆದ ಕೆಲವು ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸವನ್ನು ಮಾಡಲಾಗಿದೆ. ಸೌರ ಮತ್ತು ಪವನಶಕ್ತಿ ಅಥವಾ ಜೈವಿಕ ಇಂಧನವಿರಲಿ, ಇಂದು ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಸೇರುತ್ತಿದೆ. ತ್ಯಾಜ್ಯದಿಂದ ಸಂಪತ್ತಿಗೆ ಬೃಹತ್ ಅಭಿಯಾನವನ್ನು ಕೈಗೊಳ್ಳಲಾಗಿದೆ. ಇದು ಸ್ವಚ್ಛತೆ ಮತ್ತು ಸ್ವಾವಲಂಬನೆಯೊಂದಿಗೆ ಕೂಡ ಸಂಬಂಧ ಹೊಂದಿದೆ. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ, ನಾವು ರಸ್ತೆಗಳ ನಿರ್ಮಾಣದಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಬಳಸುತ್ತಿದ್ದೇವೆ. ಬಡವರಿಗೆ ಸರ್ಕಾರಿ ಕಟ್ಟಡಗಳು ಮತ್ತು ಮನೆಗಳ ನಿರ್ಮಾಣದಲ್ಲಿ ಮರುಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.
ಸ್ನೇಹಿತರೇ,
ಇಂತಹ ಹಲವು ಪ್ರಯತ್ನಗಳಿಗೆ ಆಟೋಮೊಬೈಲ್ ಕ್ಷೇತ್ರವನ್ನು ಕೂಡ ಸೇರಿಸಲಾಗಿದೆ. ಈ ನೀತಿಯು ಎಲ್ಲ ರೀತಿಯಲ್ಲೂ ಸಾಮಾನ್ಯ ಕುಟುಂಬಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಮೊದಲ ಪ್ರಯೋಜನವೆಂದರೆ ಹಳೆಯ ವಾಹನವನ್ನು ಗುಜುರಿ (ಸ್ಕ್ರ್ಯಾಪ್ ) ಮಾಡಿದ ಮೇಲೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ಹೊಂದಿರುವ ವ್ಯಕ್ತಿಯು ಹೊಸ ವಾಹನವನ್ನು ಖರೀದಿಸುವಾಗ ಆ ನೂತನ ವಾಹನ ನೋಂದಣಿಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಇದರೊಂದಿಗೆ, ಅವನಿಗೆ ರಸ್ತೆ ತೆರಿಗೆಯ ಮೇಲೆ ರಿಯಾಯಿತಿ ನೀಡಲಾಗುವುದು. ಎರಡನೆಯ ಅನುಕೂಲವೆಂದರೆ ಹಳೆಯ ವಾಹನದ ನಿರ್ವಹಣೆ ಮತ್ತು ದುರಸ್ತಿ ವೆಚ್ಚದಲ್ಲಿ ಉಳಿತಾಯವಿರುತ್ತದೆ ಮತ್ತು ಇದು ಇಂಧನ ದಕ್ಷತೆಯನ್ನು ಸಹ ಖಚಿತಪಡಿಸುತ್ತದೆ. ಮೂರನೆಯ ಪ್ರಯೋಜನವು ನೇರವಾಗಿ ಜೀವನಕ್ಕೆ ಸಂಬಂಧಿಸಿದೆ. ಹಳೆಯ ತಂತ್ರಜ್ಞಾನದಿಂದಾಗಿ ಹಳೆಯ ವಾಹನಗಳಲ್ಲಿ ರಸ್ತೆ ಅಪಘಾತಗಳ ಅಪಾಯವು ತುಂಬಾ ಹೆಚ್ಚಾಗಿದೆ. ಅದರಿಂದ ಮುಕ್ತಿ ಸಿಗುತ್ತದೆ. ನಾಲ್ಕನೆಯದಾಗಿ, ಇದು ನಮ್ಮ ಆರೋಗ್ಯದ ಮೇಲೆ ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ, ವಾಹನವು ಹಳೆಯದು ಎಂಬ ಕಾರಣಕ್ಕೆ ಅದನ್ನು ಗುಜುರಿ (ಸ್ಕ್ರ್ಯಾಪ್ ) ಮಾಡುವುದಿಲ್ಲ. ಅಧಿಕೃತ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲಿ ವಾಹನಗಳನ್ನು ಅವುಗಳ ಉಪಯುಕ್ತತೆ ಗುಣಮಟ್ಟ( ಫಿಟ್ ನೆಸ್ ) ಮಾನ್ಯತೆಗಾಗಿ ವೈಜ್ಞಾನಿಕವಾಗಿ ಪರೀಕ್ಷಿಸಲಾಗುವುದು. ವಾಹನ ಅನರ್ಹವಾಗಿದ್ದರೆ, ಅದನ್ನು ವೈಜ್ಞಾನಿಕವಾಗಿ ರದ್ದುಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ, ನೋಂದಾಯಿತ ವಾಹನ ಗುಜುರಿ( ಸ್ಕ್ರಾಪಿಂಗ್) ಸೌಲಭ್ಯಗಳನ್ನು ದೇಶದಾದ್ಯಂತ ಸ್ಥಾಪಿಸಲಾಗುವುದು ಮತ್ತು ಇವುಗಳು ತಂತ್ರಜ್ಞಾನ ಚಾಲಿತ ಮತ್ತು ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸಲಾಗುತ್ತದೆ.
ಸ್ನೇಹಿತರೇ,
ಔಪಚಾರಿಕ ವಾಹನ ಗುಜುರಿ ( ವಾಹನ ಪರವಾನಗಿ ರದ್ದತಿ)ಯ ಪ್ರಯೋಜನಗಳನ್ನು ಗುಜರಾತ್ ಅನುಭವಿಸಿದೆ, ಮತ್ತು ಈಗ ಮಾನ್ಯ ಮುಖ್ಯಮಂತ್ರಿ ಶ್ರೀ ನಿತಿನ್ ಜೀ ಕೂಡ ಅದನ್ನು ವಿವರಿಸಿದ್ದಾರೆ. ಗುಜರಾತಿನ ಅಲಂಗ್ ಪ್ರದೇಶವನ್ನು ಹಡಗು ಮರುಬಳಕೆ ಕೇಂದ್ರ ಎಂದು ಕರೆಯಲಾಗುತ್ತದೆ. ಅಲಂಗ್ ವೇಗವಾಗಿ ವಿಶ್ವದ ಹಡಗು ಮರುಬಳಕೆ ಉದ್ಯಮದಲ್ಲಿ ತನ್ನ ಪಾಲನ್ನು ಹೆಚ್ಚಿಸಲಿದೆ. ಹಡಗು ಮರುಬಳಕೆಯ ಈ ಮೂಲಸೌಕರ್ಯ ಈ ಪ್ರದೇಶದಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಈ ಇಡೀ ಪ್ರದೇಶವು ಮೂಲಸೌಕರ್ಯ ಮತ್ತು ನುರಿತ ಮಾನವಶಕ್ತಿಯನ್ನು ಹೊಂದಿದೆ. ಆದ್ದರಿಂದ, ಇದು ಹಡಗುಗಳ ನಂತರ ವಾಹನಗಳನ್ನು ಗುಜುರಿ (ಸ್ಕ್ರ್ಯಾಪ್) ಮಾಡುವ ದೊಡ್ಡ ಕೇಂದ್ರವಾಗಿ ಹೊರಹೊಮ್ಮಬಹುದು.
ಸ್ನೇಹಿತರೇ,
ಇಡೀ ದೇಶದಲ್ಲಿ ವಾಹನಗಳ ಗುಜುರಿ (ಸ್ಕ್ರ್ಯಾಪ್)ಗೆ ಸಂಬಂಧಿಸಿದ ವಲಯವು ಹೊಸ ಉತ್ತೇಜನವನ್ನು ಪಡೆಯುತ್ತದೆ. ಜನರ ಜೀವನದಲ್ಲಿ, ವಿಶೇಷವಾಗಿ ನಮ್ಮ ಕೆಲಸಗಾರರಲ್ಲಿ ಕೆಲಸ ಮಾಡುವ ಮತ್ತು ಸಣ್ಣ ಉದ್ಯಮಿಗಳ ಜೀವನದಲ್ಲಿ ಮಹತ್ತರವಾದ ಬದಲಾವಣೆಯಾಗಲಿದೆ. ಇದು ಕಾರ್ಮಿಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ ಮತ್ತು ಸಂಘಟಿತ ವಲಯಗಳ ಇತರ ಉದ್ಯೋಗಿಗಳಂತೆ ಅವರು ಪ್ರಯೋಜನಗಳನ್ನು ಪಡೆಯುತ್ತಾರೆ. ಗುಜುರಿ(ಸ್ಕ್ರ್ಯಾಪ್)ಯಲ್ಲಿ ವ್ಯವಹರಿಸುವ ಸಣ್ಣ ವ್ಯಾಪಾರಿಗಳು ಅಧಿಕೃತ ಗುಜುರಿ (ಸ್ಕ್ರ್ಯಾಪಿಂಗ್) ಕೇಂದ್ರಗಳಿಗೆ ಸಂಗ್ರಹಣಾ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸಬಹುದು.
ಸ್ನೇಹಿತರೇ,
ಈ ನೀತಿಯಿಂದ ವಾಹನ ಮತ್ತು ಲೋಹದ ಉದ್ಯಮವು ದೊಡ್ಡ ಉತ್ತೇಜನವನ್ನು ಪಡೆಯುತ್ತದೆ. ಕಳೆದ ವರ್ಷವೊಂದರಲ್ಲೇ ನಾವು ಸುಮಾರು ರೂಪಾಯಿ 23,000 ಕೋಟಿ ಮೌಲ್ಯದ ಗುಜುರಿ ಉಕ್ಕು (ಸ್ಕ್ರ್ಯಾಪ್ ಸ್ಟೀಲ್) ಅನ್ನು ಆಮದು ಮಾಡಿಕೊಳ್ಳಬೇಕಾಯಿತು, ಏಕೆಂದರೆ ಇದುವರೆಗೆ ಭಾರತದಲ್ಲಿ ಗುಜುರಿ (ಸ್ಕ್ರ್ಯಾಪ್) ಮಾಡುವುದು ಉತ್ಪಾದಕವಾಗಿಲ್ಲ, ಶಕ್ತಿಯ ಮರುಪಡೆಯುವಿಕೆ ಬಹುತೇಕ ಅತ್ಯಲ್ಪವಾಗಿದೆ, ಹೆಚ್ಚಿನ ಸಾಮರ್ಥ್ಯದ ಉಕ್ಕಿನ ಮಿಶ್ರಲೋಹಗಳನ್ನು ಸಂಪೂರ್ಣವಾಗಿ ಮೌಲ್ಯೀಕರಿಸಲಾಗುವುದಿಲ್ಲ ಮತ್ತು ಅಮೂಲ್ಯವಾದ ಲೋಹಗಳನ್ನು ಮರುಪಡೆಯಲಾಗುವುದಿಲ್ಲ. ಈಗ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧಾರಿತ ಗುಜುರಿ (ಸ್ಕ್ರ್ಯಾಪಿಂಗ್) ವ್ಯವಸ್ಥೆ ಇದ್ದಾಗ, ನಾವು ಅಪರೂಪದ ಭೂಮಿಯ ಲೋಹಗಳ ವಿಷಯದಲ್ಲಿ ಕೂಡಾ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸ್ನೇಹಿತರೇ,
ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಉತ್ತೇಜನ ನೀಡಲು ಮತ್ತು ಭಾರತದಲ್ಲಿ ಉದ್ಯಮವನ್ನು ಸುಸ್ಥಿರ ಮತ್ತು ಉತ್ಪಾದಕವಾಗಿಸಲು ನಿರಂತರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆಟೋ ತಯಾರಿಕೆಗೆ ಸಂಬಂಧಿಸಿದ ಮೌಲ್ಯವರ್ಧಿತ ಸರಪಳಿಗೆ ನಾವು ಸಾಧ್ಯವಾದಷ್ಟು ಕಡಿಮೆ ಆಮದುಗಳನ್ನು ಅವಲಂಬಿಸಬೇಕಾಗಿರುವುದು ನಮ್ಮ ಪ್ರಯತ್ನವಾಗಿದೆ. ಆದರೆ ಉದ್ಯಮವು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ಮುಂದಿನ 25 ವರ್ಷಗಳವರೆಗೆ ನೀವು ಸ್ವಾವಲಂಬಿ ಭಾರತದ ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿರಬೇಕು. ದೇಶವು ಈಗ ಸ್ವಚ್ಛ, ದಟ್ಟಣೆ ರಹಿತ ಮತ್ತು ಅನುಕೂಲಕರ ಚಲನಶೀಲತೆಯತ್ತ ಸಾಗುತ್ತಿದೆ. ಆದ್ದರಿಂದ, ಹಳೆಯ ವಿಧಾನಗಳು ಮತ್ತು ಹಳೆಯ ಅಭ್ಯಾಸಗಳನ್ನು ಬದಲಾಯಿಸಬೇಕಾಗಿದೆ. ಇಂದು, ಭಾರತವು ತನ್ನ ನಾಗರಿಕರಿಗೆ ಸುರಕ್ಷತೆ ಮತ್ತು ಗುಣಮಟ್ಟದ ವಿಷಯದಲ್ಲಿ ಜಾಗತಿಕ ಮಾನದಂಡಗಳನ್ನು ಒದಗಿಸಲು ಬದ್ಧವಾಗಿದೆ. ಬಿಎಸ್ -4 ರಿಂದ ಬಿಎಸ್ -6 ಗೆ ನೇರ ಪರಿವರ್ತನೆಯ ಹಿಂದಿನ ಚಿಂತನೆ ಇದಾಗಿದೆ.
ಸ್ನೇಹಿತರೇ,
ದೇಶದಲ್ಲಿ ಹಸಿರು ಮತ್ತು ಸ್ವಚ್ಛ ಚಲನಶೀಲತೆಗಾಗಿ ಸಂಶೋಧನೆಯಿಂದ ಹಿಡಿದು ಮೂಲಸೌಕರ್ಯದವರೆಗೆ ಪ್ರತಿಯೊಂದು ಹಂತದಲ್ಲೂ ಸರ್ಕಾರವು ವ್ಯಾಪಕವಾದ ಕೆಲಸವನ್ನು ಮಾಡುತ್ತಿದೆ. ಎಥೆನಾಲ್, ಹೈಡ್ರೋಜನ್ ಇಂಧನ ಅಥವಾ ವಿದ್ಯುತ್ ಚಲನಶೀಲತೆ ಇದರಲ್ಲಿ ಸೇರಿವೆ. ಸರ್ಕಾರದ ಈ ಆದ್ಯತೆಗಳಲ್ಲಿ ಉದ್ಯಮದ ಸಕ್ರಿಯ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ. ಉದ್ಯಮವು ಸಂಶೋಧನೆ & ಅಭಿವೃದ್ಧಿ (ಆರ್ & ಡಿ) ಮತ್ತು ಮೂಲಸೌಕರ್ಯ ಎರಡರಲ್ಲೂ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಿಮಗೆ ಬೇಕಾದ ಸಹಾಯವನ್ನು ನೀಡಲು ಸರ್ಕಾರ ಸಿದ್ಧವಿದೆ. ನಾವು ನಮ್ಮ ಪಾಲುದಾರಿಕೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಹೊಸ ನೀತಿಯು ದೇಶವಾಸಿಗಳಲ್ಲಿ ಹಾಗೂ ಆಟೋ ವಲಯದಲ್ಲಿ ಹೊಸ ಶಕ್ತಿ, ಹೊಸ ಆವೇಗ ಮತ್ತು ಹೊಸ ವಿಶ್ವಾಸವನ್ನು ತುಂಬುತ್ತದೆ ಎಂದು ನನಗೆ ಖಾತ್ರಿಯಿದೆ. ಉದ್ಯಮದ ಮಂದಿ ಈ ಮಹತ್ವದ ಸಂದರ್ಭವನ್ನು ಬಿಟ್ಟುಬಿಡುತ್ತಾರೆ ಎಂದು ನಾನು ನಂಬುವುದಿಲ್ಲ. ಹಳೆಯ ವಾಹನಗಳನ್ನು ಓಡಿಸುವ ಜನರು ಕೂಡಾ ಈ ಅವಕಾಶವನ್ನು ಬಿಟ್ಟುಬಿಡುತ್ತಾರೆ ಎಂದು ನಾನು ನಂಬುವುದಿಲ್ಲ. ಇದು ಒಂದು ಅಗಾಧ ಬದಲಾವಣೆಯ ನಂಬಿಕೆಯೊಂದಿಗೆ ಬಂದಿರುವ ಒಂದು ವ್ಯವಸ್ಥೆಯಾಗಿದೆ. ಇಂದು ಈ ನೀತಿಯನ್ನು ಗುಜರಾತ್ ನಲ್ಲಿ ಆರಂಭಿಸಲಾಗಿದೆ. ವೃತ್ತಾಕಾರದ ಅರ್ಥವ್ಯವಸ್ಥೆ ಎಂಬ ಪದವು ಗುಜರಾತ್ಗೆ ಅಥವಾ ದೇಶಕ್ಕೆ ಹೊಸದಾಗಿ ತೋರುತ್ತದೆಯಾದರೂ, ನಮ್ಮ ಅಜ್ಜಿ ನಮ್ಮ ಹಳೆಯ ಬಟ್ಟೆಯಿಂದ ಹೇಗೆ ಹಾಸಿಗೆ-ದಿಂಬು (ಗಾದಿ) ತಯಾರಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮತ್ತು ದಿಂಬು (ಗಾದಿ) ಹಳೆಯದಾದಾಗ, ಅದರ ಬಟ್ಟೆಯನ್ನು ಹರಿದು ಹಾಕಿದ ನಂತರ ಅದನ್ನು ಒರೆಸಲು ಬಳಸಲಾಗುತ್ತದೆ. ಮರುಬಳಕೆ ಎಂದರೇನು? ಆರ್ಥಿಕತೆಯ ವೃತ್ತ ಎಂದರೇನು? ಇದು ಭಾರತಕ್ಕೆ ಹೊಸದೇನಲ್ಲ, ನಾವು ಅದನ್ನು ವೈಜ್ಞಾನಿಕ ರೀತಿಯಲ್ಲಿ ಮುಂದುವರಿಸಬೇಕು. ಮತ್ತು ಅದನ್ನು ವೈಜ್ಞಾನಿಕ ರೀತಿಯಲ್ಲಿ ಮುಂದುವರಿಸಿದರೆ, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸಲು ತೊಡಗಿಕೊಳ್ಳುತ್ತಾರೆ ಮತ್ತು ನಾವು ಹೆಚ್ಚು ಹೊಸ ವಿಷಯಗಳನ್ನು ಆವಿಷ್ಕರಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ನನಗೆ ಖಾತ್ರಿಯಿದೆ.
ನಾನು ನಿಮಗೆ ಮತ್ತೊಮ್ಮೆ ಶುಭ ಹಾರೈಸುತ್ತೇನೆ. ತುಂಬಾ ಧನ್ಯವಾದಗಳು.