ಪ್ರವಾಸಿ ಭಾರತೀಯ ದಿವಸ (ಪಿಬಿಡಿ) ಸಮ್ಮೇಳನವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಈ ಸಮ್ಮೇಳನವು ಸಾಗರೋತ್ತರ ಭಾರತೀಯರ ಸಂಪರ್ಕ, ಪಾಲ್ಗೊಳ್ಳುವಿಕೆ ಹಾಗೂ ಜಗತ್ತಿನ ನಾನಾ ಕಡೆ ತೆರಳಿರುವವರು ಪರಸ್ಪರ ಸಂವಾದ ನಡೆಸಲು ನೆರವಾಗುವ ಮಹತ್ವದ ವೇದಿಕೆಯಾಗಿದೆ. 17ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವು ಮಧ್ಯಪ್ರದೇಶ ಸರಕಾರದ ಸಹಯೋಗದಲ್ಲಿ 2023ರ ಜನವರಿ 8ರಿಂದ 10ರವರೆಗೆ ಇಂದೋರ್‌ನಲ್ಲಿ ನಡೆಯಲಿದೆ. ಈ ಬಾರಿಯ ಪ್ರವಾಸಿ ಭಾರತೀಯ ದಿವಸವು "ಡಯಾಸ್ಪೊರಾ (ಜಗತ್ತಿನ ನಾನಾ ಕಡೆ ಜೀವನ ರೂಪಿಸಿಕೊಂಡಿರುವ ಸಾಗರೋತ್ತರ ಭಾರತೀಯರು): ಅಮೃತ ಕಾಲದಲ್ಲಿ ಭಾರತದ ಪ್ರಗತಿಯ ವಿಶ್ವಾಸಾರ್ಹ ಪಾಲುದಾರರು" ಎಂಬ ಪರಿಕಲ್ಪನೆಯಡಿ ರೂಪುಗೊಂಡಿದೆ. ಸುಮಾರು 7೦ ರಾಷ್ಟ್ರಗಳ 3500ಕ್ಕೂ ಹೆಚ್ಚು ʼಡಯಾಸ್ಪೊರಾʼ ಸದಸ್ಯರು ಈಗಾಗಲೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ.
ಪಿಬಿಡಿ ಸಮ್ಮೇಳನವು ಮೂರು ವಿಭಾಗಗಳನ್ನು ಒಳಗೊಂಡಿದೆ. ಜನವರಿ 8ರಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಯುವ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಆಸ್ಪ್ರೇಲಿಯಾದ ಸಂಸದೆ ಗೌರವಾನ್ವಿತ ಝನೇಟಾ ಮಸ್ಕರೆನ್ಹಾಸ್ ಅವರು ಯುವ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇನ್ನು ಜನವರಿ 9ರಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಬಿಡಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಗಯಾನಾ ಸಹಕಾರಿ ಗಣ್ಯರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಇರ್ಫಾನ್ ಅಲಿ ಹಾಗೂ ವಿಶೇಷ ಅತಿಥಿಗಳಾದ ಸುರಿನಾಮ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಿಕಾಪೆರ್ಸಾದ್ ಸಂತೋಕಿ ಅವರು ಭಾಷಣ ಮಾಡಲಿದ್ದಾರೆ.
ಸುರಕ್ಷತೆ, ಕಾನೂನುಬದ್ಧ, ಕ್ರಮಬದ್ಧ ಹಾಗೂ ಕೌಶಲ್ಯದ ವಲಸೆಯ ಪ್ರಾಮುಖ್ಯತೆಯನ್ನು ಸಾರುವುದರ ಸ್ಮರಣಾರ್ಥ "ಸುರಕ್ಷಿತ್ ಜಾಯೇನ್, ಪ್ರಶಿಕ್ಷಿತ್ ಜಾಯೇನ್ʼ (ಸುರಕ್ಷಿತವಾಗಿ ಹೋಗಿ, ಸುಶಿಕ್ಷಿತರಾಗಿ ಹೋಗಿ) ಅಂಚೆ ಚೀಟಿ ಬಿಡುಗಡೆಯಾಗಲಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಡಯಾಸ್ಪೊರಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸಾರುವ ನಿಟ್ಟಿನಲ್ಲಿ "ಆಜಾದಿ ಕಾ ಅಮೃತ ಮಹೋತ್ಸವ್ (ಸ್ವಾತಂತ್ರ್ಯದ ಅಮೃತ ಮಹೋತ್ಸವ)- ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಾಗರೋತ್ತರ ಭಾರತೀಯರ ಕೊಡುಗೆ" ಪರಿಕಲ್ಪನೆಯಡಿ ಪ್ರಥಮ ಬಾರಿಗೆ ರೂಪಿಸಲಾದ ಡಿಜಿಟಲ್ ಪಿಬಿಡಿ ಪ್ರದರ್ಶನವನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ. ಜಿ-20 ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತವು ಒಂದು ವರ್ಷದ ಅವಧಿಗೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನವರಿ 9ರಂದು ಒಂದು ವಿಶೇಷ ಸಮಾಗಮ (ಟೌನ್‌ಹಾಲ್) ವ್ಯವಸ್ಥೆಯೂ ಆಯೋಜನೆಯಾಗಲಿದೆ.
2023ರ ಜನವರಿ 10ರಂದು ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು 2023ನೇ ಸಾಲಿನ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಜತೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದೇಶ ಹಾಗೂ ವಿದೇಶದಲ್ಲಿ ನಾನಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಹಾಗೂ ಸಾಧನೆಯನ್ನು ಪರಿಗಣಿಸಿ ಆಯ್ದ ಸಾಗರೋತ್ತರ ಭಾರತೀಯ ಸದಸ್ಯರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪಿಬಿಡಿ ಸಮ್ಮೇಳನದಲ್ಲಿ ಐದು ವಿಷಯಗಳ ಕುರಿತು ಸಮಗ್ರ ವಿಚಾರಗೋಷ್ಠಿಗಳು ನಡೆಯಲಿವೆ-
ಮೊದಲ ವಿಚಾರಗೋಷ್ಠಿಯು "ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಗರೋತ್ತರ ಭಾರತೀಯ ಯುವಜನರ ಪಾತ್ರ" ಕುರಿತು ನಡೆಯಲಿದ್ದು, ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅಧ್ಯಕ್ಷತೆ ವಹಿಸಲಿದ್ದಾರೆ.
"ಅಮೃತ ಕಾಲದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಕ್ಕೆ ಉತ್ತೇಜಿಸುವಲ್ಲಿ ಸಾಗರೋತ್ತರ ಭಾರತೀಯರ ಪಾತ್ರ: ದೂರದೃಷ್ಟಿ @2047ʼ ವಿಷಯ ಕುರಿತ ಎರಡನೇ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್‌ಸುಖ್ ಮಾಂಡವೀಯ ಅವರು ವಹಿಸಲಿದ್ದು, ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಡಾ.ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಸಹ ಅಧ್ಯಕ್ಷತೆ ವಹಿಸಲಿದ್ದಾರೆ.
ಮೂರನೇ ವಿಚಾರಗೋಷ್ಠಿಯು "ಭಾರತ ಮೃಧು ಶಕ್ತಿಯ ವೃದ್ಧಿ- ಕರಕುಶಲ, ಆಹಾರ ಪದ್ಧತಿ ಹಾಗೂ ಸೃಜನಶೀಲತೆ ಮೂಲಕ ಸದಾಶಯ ರೂಪಿಸುವುದು" ಕುರಿತಂತೆ ನಡೆಯಲಿದ್ದು, ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
"ಭಾರತೀಯ ದುಡಿಯುವ ವರ್ಗದ ಜಾಗತಿಕ ಚಲನಶೀಲತೆಗೆ ಉತ್ತೇಜನ- ಸಾಗರೋತ್ತರ ಭಾರತೀಯರ ಪಾತ್ರʼ ವಿಷಯ ಕುರಿತಾಗಿ ನಾಲ್ಕನೇ ವಿಚಾರಗೋಷ್ಠಿ ನಡೆಯಲಿದ್ದು, ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅಧ್ಯಕ್ಷತೆ ವಹಿಸುವುದು.
ಐದನೇ ವಿಚಾರಗೋಷ್ಠಿಯು "ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸರ್ವರನ್ನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗರೋತ್ತರ ಉದ್ಯಮಿಗಳು ಭಾಗಿಯಾಗುವಂತೆ ಸಜ್ಜುಗೊಳಿಸುವುದು" ವಿಷಯ ಕುರಿತಾಗಿ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಎಲ್ಲ ವಿಚಾರಗೋಷ್ಠಿಗಳಲ್ಲಿ ನಡೆಯುವ ಸಂವಾದಗಳಲ್ಲಿ ಸಾಗರೋತ್ತರ ಭಾರತೀಯ ತಜ್ಞರು ಪಾಲ್ಗೊಳ್ಳಲಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಹಾಗೂ ಕೋವಿಡ್- 19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ನಡೆಯುತ್ತಿರುವ ಪ್ರಥಮ ಭೌತಿಕ ಸಮ್ಮೇಳನವಾಗಿರುವ ಕಾರಣಕ್ಕೆ 17ನೇ ಪಿಬಿಡಿ ಸಮ್ಮೇಳನವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಹಿಂದಿನ ಪಿಬಿಡಿ ಸಮ್ಮೇಳನವು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದ 2021ರಲ್ಲಿ ವರ್ಚ್ಯುವಲ್ ರೂಪದಲ್ಲಿ ನಡೆದಿತ್ತು.