ವಾರಣಾಸಿಯಲ್ಲಿ 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿಗಳು
ವಾರಣಾಸಿಯಲ್ಲಿ ಸತತ ಎರಡು ದಿನಗಳ ಕಾಲ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಲಿರುವ ಪ್ರಧಾನಿ
ʻಸ್ವರವೇದ ಮಹಾಮಂದಿರʼ ಉದ್ಘಾಟಿಸಲಿರುವ ಪ್ರಧಾನಿ
ʻಕಾಶಿ ತಮಿಳು ಸಂಗಮಂ-2023ʼಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿಗಳು
ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್ ಪ್ರೆಸ್ʼಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ
ತಡೆರಹಿತ ಪ್ರವಾಸಿ ಅನುಭವಕ್ಕೆ ಅನುಕೂಲವಾಗುವಂತೆ ʻಏಕೀಕೃತ ಪ್ರವಾಸಿ ಪಾಸ್ʼ ವ್ಯವಸ್ಥೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿಗಳು
ಸೂರತ್ ವಿಮಾನ ನಿಲ್ದಾಣದಲ್ಲಿ ನೂತನ ಸಮಗ್ರ ಟರ್ಮಿನಲ್ ಕಟ್ಟಡ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಸೂರತ್ ವಜ್ರ ಮಾರುಕಟ್ಟೆಯನ್ನು ಉದ್ಘಾಟಿಸಲಿರುವ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 17 ಮತ್ತು 18ರಂದು ಗುಜರಾತ್‌ನ ಸೂರತ್ ಮತ್ತು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 17ರಂದು ಬೆಳಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ಸೂರತ್ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11:15ಕ್ಕೆ ಪ್ರಧಾನಮಂತ್ರಿಯವರು ʻಸೂರತ್ ಡೈಮಂಡ್ ಬೋರ್ಸ್ʼ ಅನ್ನು ಉದ್ಘಾಟಿಸಲಿದ್ದಾರೆ. ನಂತರ ವಾರಣಾಸಿಗೆ ಪ್ರಯಾಣ ಬೆಳೆಸಲಿರುವ ಅವರು, ಮಧ್ಯಾಹ್ನ 3:30ರ ಸುಮಾರಿಗೆ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5:15ರ ಸುಮಾರಿಗೆ ಅವರು ʻನಮೋ ಘಾಟ್‌ʼನಲ್ಲಿ ʻಕಾಶಿ ತಮಿಳು ಸಂಗಮಂ-2023ʼ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಡಿಸೆಂಬರ್ 18ರಂದು ಬೆಳಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ʻಸ್ವರವೇದ ಮಹಾಮಂದಿರʼಕ್ಕೆ ಭೇಟಿ ನೀಡಲಿದ್ದು, ಆ ಬಳಿಕ ಬೆಳಗ್ಗೆ 11:30ರ ಸುಮಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಈ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪ್ರಧಾನಮಂತ್ರಿಯವರು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಲಿದ್ದಾರೆ. ನಂತರ, ಮಧ್ಯಾಹ್ನ 2:15ರ ಸುಮಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸೂರತ್ ನಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ಸೂರತ್ ವಿಮಾನ ನಿಲ್ದಾಣದ ಹೊಸ ಸಮಗ್ರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಹೊಸ ಟರ್ಮಿನಲ್ ಕಟ್ಟಡವು ʻಪೀಕ್‌ ಅವರ್‌ʼನಲ್ಲಿ 1200 ದೇಶೀಯ ಪ್ರಯಾಣಿಕರು ಮತ್ತು 600 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ʻಪೀಕ್ ಅವರ್ʼ ಸಾಮರ್ಥ್ಯವನ್ನು ಇನ್ನೂ 3000 ಪ್ರಯಾಣಿಕರಿಗೆ ಹೆಚ್ಚಿಸಲು ಹಾಗೂ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು 55 ಲಕ್ಷಕ್ಕೆ ಹೆಚ್ಚಿಸಲು ಅವಕಾಶವಿದೆ. ಟರ್ಮಿನಲ್ ಕಟ್ಟಡವು ಸೂರತ್ ನಗರದ ಹೆಬ್ಬಾಗಿಲಾಗಿರುವುದರಿಂದ, ನಗರದ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಆ ಮೂಲಕ ಇದರ ಒಳಾಂಗಣ ಮತ್ತು ಬಾಹ್ಯ ರಚನೆ  ಎರಡರಲ್ಲೂ ಸ್ಥಳೀಯ ಸಾರ ಪ್ರತಿಬಿಂಬಿಸುತ್ತಿದ್ದು, ಸಂದರ್ಶಕರಲ್ಲಿ ಆ ಸ್ಥಳದ ಜಾಗೃತಿಯನ್ನು ಮೂಡಿಸುತ್ತದೆ. ನವೀಕರಿಸಿದ ಟರ್ಮಿನಲ್ ಕಟ್ಟಡದ ಮುಂಭಾಗವು ಸೂರತ್ ನಗರದ 'ರಾಂಡರ್' ಪ್ರದೇಶದ ಹಳೆಯ ಮನೆಗಳ ಶ್ರೀಮಂತ ಮತ್ತು ಸಾಂಪ್ರದಾಯಿಕ ಮರಗೆಲಸದ ಕುಸುರಿಯನ್ನು ಹೊಂದಿದ್ದು, ಆ ಮೂಲಕ ಪ್ರಯಾಣಿಕರ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವು ʻಜಿಆರ್‌ಐಎಚ್‌ಎ-4ʼ(GRIHA-IV) ಅನುಸರಣೆ ಹೊಂದಿದೆ. ಡಬಲ್ ಇನ್ಸುಲೇಷನ್‌ ಹೊಂದಿರುವ ಚಾವಣಿ ವ್ಯವಸ್ಥೆ, ವಿದ್ಯುತ್‌ ಉಳಿತಾಯಕ್ಕಾಗಿ ಕ್ಯಾನೋಪಿಗಳು, ಕಡಿಮೆ ಶಾಖಕ್ಕಾಗಿ ಡಬಲ್ ಗ್ಲೇಸಿಂಗ್ ಘಟಕ, ಮಳೆನೀರು ಕೊಯ್ಲು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ; ಕೈತೋಟ ಮತ್ತು ಸೌರ ವಿದ್ಯುತ್ ಸ್ಥಾವರಕ್ಕೆ ಮರುಬಳಕೆ ಮಾಡಿದ ನೀರಿನ ಬಳಕೆಯಂತಹ ವಿವಿಧ ಸುಸ್ಥಿರ ಪರಿಸರದ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಪ್ರಧಾನಮಂತ್ರಿಯವರು ʻಸೂರತ್ ಡೈಮಂಡ್ ಬೋರ್ಸ್ʼಅನ್ನು ಉದ್ಘಾಟಿಸಲಿದ್ದಾರೆ. ಇದು ಅಂತರರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿದೆ. ಇದು ಕಚ್ಚಾ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ಆಭರಣಗಳ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದೆ. ಆಮದು ಮತ್ತು ರಫ್ತುಗಾಗಿ ಅತ್ಯಾಧುನಿಕ 'ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್' ಅನ್ನು ಇದು ಒಳಗೊಂಡಿರುತ್ತದೆ; ಚಿಲ್ಲರೆ ಆಭರಣ ವ್ಯವಹಾರಕ್ಕಾಗಿ ʻಆಭರಣ ಮಾಲ್ʼ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ಗಳ ಸೌಲಭ್ಯವೂ ಇದರಲ್ಲಿದೆ.

ವಾರಣಾಸಿಯಲ್ಲಿ ಪ್ರಧಾನಮಂತ್ರಿ

ಡಿಸೆಂಬರ್ 17ರಂದು ವಾರಣಾಸಿಯ ʻಕಟಿಂಗ್ ಮೆಮೋರಿಯಲ್ ಶಾಲೆʼಯ ಮೈದಾನದಲ್ಲಿ ನಡೆಯಲಿರುವ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಅಲ್ಲಿ ಪ್ರಧಾನಮಂತ್ರಿಯವರು ʻಪ್ರಧಾನಮಂತ್ರಿ ಆವಾಸ್ʼ, ʻಪಿಎಂ ಸ್ವನಿಧಿʼ, ʻಪಿಎಂ ಉಜ್ವಲʼ ಮುಂತಾದ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ

ʻಏಕ ಭಾರತ-ಶ್ರೇಷ್ಠ ಭಾರತʼದ ಆಶಯಕ್ಕೆ ಅನುಗುಣವಾಗಿ ಪ್ರಧಾನಮಂತ್ರಿಯವರು ʻನಮೋ ಘಾಟ್ʼನಲ್ಲಿ ʻಕಾಶಿ ತಮಿಳು ಸಂಗಮಂ-2023ʼ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಕನ್ಯಾಕುಮಾರಿ-ವಾರಣಾಸಿ ತಮಿಳು ಸಂಗಮಂʼ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಡಿಸೆಂಬರ್ 18ರಂದು ಪ್ರಧಾನಮಂತ್ರಿಯವರು ವಾರಣಾಸಿಯ ಉಮರಾಹದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ʻಸ್ವರವೇದ ಮಹಾಮಂದಿರʼವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹಾಮಂದಿರದ ಭಕ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನಂತರ, ಪ್ರಧಾನಮಂತ್ರಿಯವರು ತಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶವಾದ ಸೇವಾಪುರಿಯಲ್ಲಿ ನಡೆಯುವ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಲಿದ್ದಾರೆ. ʻಕಾಶಿ ಸಂಸದ್ ಖೇಲ್ ಪ್ರತಿಯೋಗಿತಾ-2023ʼ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಕೆಲವು ಲೈವ್ ಕ್ರೀಡಾ ಕಾರ್ಯಕ್ರಮಗಳಿಗೂ ಅವರು ಸಾಕ್ಷಿಯಾಗಲಿದ್ದಾರೆ. ನಂತರ ಅವರು ಕಾರ್ಯಕ್ರಮದ ವಿಜೇತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ, ವಾರಣಾಸಿಯ ಭೂದೃಶ್ಯವನ್ನು ಪರಿವರ್ತಿಸಲು ಮತ್ತು ವಾರಣಾಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನವನ್ನು ಸುಗಮಗೊಳಿಸಲು ಪ್ರಧಾನಿ ವಿಶೇಷ ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿಯವರು ಸುಮಾರು 19,150 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ  ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಸುಮಾರು 10,900 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಹೊಸ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ - ಹೊಸ ಭಾವುಪುರ್ ನಡುವಿನ ವಿಶೇಷ ಸರಕು ಸಾಗಣೆ ಕಾರಿಡಾರ್ʼಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿಯವರು ಚಾಲನೆ ನೀಡಲಿರುವ ಇತರ ರೈಲ್ವೆ ಯೋಜನೆಗಳಲ್ಲಿ ʻಬಲ್ಲಿಯಾ-ಗಾಜಿಪುರ ಸಿಟಿʼ ರೈಲು ಮಾರ್ಗ ಡಬ್ಲಿಂಗ್‌ ಯೋಜನೆ; ʻಇಂದಾರಾ-ದೋಹ್ರಿಘಾಟ್ʼ ರೈಲು ಮಾರ್ಗ ಗೇಜ್ ಪರಿವರ್ತನೆ ಯೋಜನೆಗಳೂ ಸೇರಿವೆ.

ಪ್ರಧಾನಮಂತ್ರಿಯವರು ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು, ʻದೋಹ್ರಿಘಾಟ್-ಮವುʼ ಮೆಮು ರೈಲು ಹಾಗೂ ಹೊಸದಾಗಿ ಉದ್ಘಾಟಿಸಲಾದ ಮೀಸಲಾದ ಸರಕು ಕಾರಿಡಾರ್‌ನಲ್ಲಿ ಒಂದು ಜೋಡಿ ʻಲಾಂಗ್ ಹೌಲ್ ಗೂಡ್ಸ್ ರೈಲುʼಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ʻಬನಾರಸ್ ಲೋಕೋಮೋಟಿವ್ ವರ್ಕ್ಸ್ʼ ನಿರ್ಮಿಸಿದ 10,000ನೇ ಲೋಕೋಮೋಟಿವ್‌ಗೂ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಪ್ರಧಾನಮಂತ್ರಿಯವರು ಎರಡು ರಸ್ತೆ ಮೇಲ್ಸೇತುವೆಗಳೊಂದಿಗೆ (ಆರ್‌ಒಬಿ)  370 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ʻಶಿವಪುರ-ಫುಲ್ವಾರಿಯಾ-ಲಹರ್ತಾರಾʼ ಗ್ರೀನ್‌ಫೀಲ್ಡ್‌ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಇದು ವಾರಣಾಸಿ ನಗರದ ಉತ್ತರ ಮತ್ತು ದಕ್ಷಿಣ ಭಾಗದ ನಡುವಿನ ಸಂಚಾರವನ್ನು ಸರಾಗಗೊಳಿಸುತ್ತದೆ ಮತ್ತು ನಗರಕ್ಕೆ ಭೇಟಿ ನೀಡುವವರ ಅನುಕೂಲವನ್ನು ಹೆಚ್ಚಿಸುತ್ತದೆ. ಪ್ರಧಾನಮಂತ್ರಿಯವರು ಉದ್ಘಾಟಿಸಲಿರುವ ಇತರ ಪ್ರಮುಖ ಯೋಜನೆಗಳಲ್ಲಿ - 20 ರಸ್ತೆಗಳ ಬಲವರ್ಧನೆ ಮತ್ತು ಅಗಲೀಕರಣ; ಕೈಥಿ ಗ್ರಾಮದಲ್ಲಿ ಸಂಗಮ್ ಘಾಟ್ ರಸ್ತೆ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ವಸತಿ ಕಟ್ಟಡಗಳ ನಿರ್ಮಾಣವೂ ಸೇರಿವೆ.

ಅಲ್ಲದೆ, ಪೊಲೀಸ್ ಸಿಬ್ಬಂದಿಯ ವಸತಿ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ, ʻಪೊಲೀಸ್ ಲೈನ್ʼ ಮತ್ತು ʻಪಿಎಸಿʼ ಭುಲ್ಲನ್‌ಪುರದಲ್ಲಿ 200 ಮತ್ತು 150 ಹಾಸಿಗೆಗಳ ಎರಡು ಬಹುಮಹಡಿ ಬ್ಯಾರಕ್ ಕಟ್ಟಡಗಳು, 9 ಸ್ಥಳಗಳಲ್ಲಿ ನಿರ್ಮಿಸಲಾದ ಸ್ಮಾರ್ಟ್ ಬಸ್ ತಂಗುದಾಣಗಳು ಹಾಗೂ ಅಲೈಪುರದಲ್ಲಿ ನಿರ್ಮಿಸಲಾದ 132 ಕಿಲೋವ್ಯಾಟ್ ಸಬ್ ಸ್ಟೇಷನ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ʻಸ್ಮಾರ್ಟ್ ಸಿಟಿ ಯೋಜನೆʼ ಅಡಿಯಲ್ಲಿ, ವಿವರವಾದ ಪ್ರವಾಸಿ ಮಾಹಿತಿಗಾಗಿ ವೆಬ್‌ಸೈಟ್ ಹಾಗೂ ʻಏಕೀಕೃತ ಪ್ರವಾಸಿ ಪಾಸ್ʼ ವ್ಯವಸ್ಥೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ʻಏಕೀಕೃತ ಪಾಸ್ʼ,  ಶ್ರೀ ಕಾಶಿ ವಿಶ್ವನಾಥ ಧಾಮ, ಗಂಗಾ ಕ್ರೂಸ್ ಮತ್ತು ಸಾರನಾಥದ ʻಲೈಟ್ ಅಂಡ್ ಸೌಂಡ್ ಶೋʼಗೆ ಒಂದೇ ಟಿಕೆಟ್ ಬುಕಿಂಗ್‌ಗೆ ಅವಕಾಶ ಒದಗಿಸುತ್ತದೆ. ಇದು ಸಮಗ್ರ ಕ್ಯೂಆರ್ ಕೋಡ್ ಸೇವೆಗಳನ್ನು ಸಹ ಒದಗಿಸುತ್ತದೆ.

ಪ್ರಧಾನಮಂತ್ರಿಯವರು 6,500 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಚಿತ್ರಕೂಟ್ ಜಿಲ್ಲೆಯಲ್ಲಿ ಸುಮಾರು 4000 ಕೋಟಿ ರೂ. ವೆಚ್ಚದಲ್ಲಿ 800 ಮೆಗಾವ್ಯಾಟ್ ಸೌರ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪೆಟ್ರೋಲಿಯಂ ಪೂರೈಕೆ ಸರಪಳಿಯನ್ನು ಹೆಚ್ಚಿಸಲು, ಮಿರ್ಜಾಪುರದಲ್ಲಿ 1,050 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಪೆಟ್ರೋಲಿಯಂ ತೈಲ ಟರ್ಮಿನಲ್ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿರುವ ಇತರ ಯೋಜನೆಗಳಲ್ಲಿ ಇವು ಸೇರಿವೆ: 900 ಕೋಟಿ ರೂ.ಗಳ ವೆಚ್ಚದಲ್ಲಿ ʻವಾರಣಾಸಿ-ಭದೋಹಿ ರಾಷ್ಟ್ರೀಯ ಹೆದ್ದಾರಿ 731ಬಿʼ(ಪ್ಯಾಕೇಜ್ -2) ಅಗಲೀಕರಣ; ʻಜಲ ಜೀವನ್ ಯೋಜನೆʼ ಅಡಿಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ 69 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು; ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್‌ನಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ʻಕ್ರಿಟಿಕಲ್ ಕೇರ್ ಯುನಿಟ್ʼ ನಿರ್ಮಾಣ; 8 ಗಂಗಾ ಘಾಟ್‌ಗಳ ಪುನರಾಭಿವೃದ್ಧಿ ಕಾಮಗಾರಿಗಳು, ದಿವ್ಯಾಂಗ ವಸತಿ ಮಾಧ್ಯಮಿಕ ಶಾಲೆಯ ನಿರ್ಮಾಣ ಕಾಮಗಾರಿಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
‘Make in India’ is working, says DP World Chairman

Media Coverage

‘Make in India’ is working, says DP World Chairman
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”