ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಗೌರವಾನ್ವಿತ ಶ್ರೀ. ಜೋಸೆಫ್ ಆರ್ ಬೈಡೆನ್ ಅವರೊಂದಿಗೆ ಸೌಹಾರ್ದಯುತ ಮತ್ತು ಫಲಪ್ರದ ದೂರವಾಣಿ ಮಾತುಕತೆ ನಡೆಸಿದರು
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬೈಡೆನ್ ಅವರು ಭಾರತ-ಅಮೆರಿಕ ನಡುವೆ ಬಲಗೊಳ್ಳುತ್ತಿರುವ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇದು ಎಲ್ಲಾ ಕ್ಷೇತ್ರಗಳಲ್ಲಿ ಸದೃಢವಾದ ಬೆಳವಣಿಗೆಗೆ ಕಾರಣವಾಗಿದೆ. ಎರಡೂ ದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುವ ಪರಸ್ಪರ ಲಾಭದಾಯಕ ಸಹಕಾರದ ಹೊಳೆಯುವ ಉದಾಹರಣೆಯಾಗಿ ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಮಹತ್ವದ ಒಪ್ಪಂದದ ಘೋಷಣೆಯನ್ನು ಅವರು ಸ್ವಾಗತಿಸಿದರು. ಭಾರತದಲ್ಲಿ ವಿಸ್ತರಿಸುತ್ತಿರುವ ನಾಗರಿಕ ವಿಮಾನಯಾನ ಕ್ಷೇತ್ರದಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಬೋಯಿಂಗ್ ಮತ್ತು ಇತರೆ ಅಮೆರಿಕ ಕಂಪನಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನ ನೀಡಿದರು.
ಇತ್ತೀಚೆಗೆ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ (ಐಸಿಇಟಿ) ಉಪಕ್ರಮದ ಮೊದಲ ಸಭೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಬಾಹ್ಯಾಕಾಶ, ಸೆಮಿಕಂಡಕ್ಟರ್, ಪೂರೈಕೆ ಸರಪಳಿಗಳು, ರಕ್ಷಣಾ ಜಂಟಿ-ಉತ್ಪಾದನೆ ಮತ್ತು ಜಂಟಿ-ಅಭಿವೃದ್ಧಿ, ಜ್ಞಾನ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವ ತೀವ್ರ ಬಯಕೆ ವ್ಯಕ್ತಪಡಿಸಿದರು.. ಪರಸ್ಪರ ಪ್ರಯೋಜನಕಾರಿಯಾಗಿರುವ ಉಭಯ ದೇಶಗಳ ನಡುವಿನ ರೋಮಾಂಚಕ ಜನರಿಂದ ಜನರ ಸಂಬಂಧಗಳನ್ನು ಹೆಚ್ಚಿಸಲು ಅವರು ಒಪ್ಪಿಕೊಂಡರು.
ಭಾರತದಲ್ಲಿ ನಡೆಯುತ್ತಿರುವ G20 ಅಧ್ಯಕ್ಷೀಯ ಶೃಂಗಸಭೆಯ ಸಮಯದಲ್ಲಿ ಅದರ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಉಭಯ ರಾಷ್ಟ್ರಗಳು ಸತತಸಂಪರ್ಕದಲ್ಲಿರಲು ಇಬ್ಬರು ನಾಯಕರು ಒಪ್ಪಿಗೆ ಸೂಚಿಸಿದರು.