"ಮುಂದಿನ 25 ವರ್ಷಗಳ ʻಅಮೃತ ಕಾಲʼದಲ್ಲಿ ನಿಮ್ಮ ತಂಡ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ"
"ಸಾಂಕ್ರಾಮಿಕ ರೋಗದ ನಂತರದ ಬದಲಾದ ವಿಶ್ವದ ಹೊಸ ಪರಿಸ್ಥಿತಿಯಲ್ಲಿ ಭಾರತವು ತನ್ನ ಪಾತ್ರವನ್ನು ಹೆಚ್ಚಿಸಬೇಕು ಮತ್ತು ವೇಗವಾಗಿ ಅಭಿವೃದ್ಧಿ ಹೋಂದಬೇಕಿದೆ"
"ಆತ್ಮನಿರ್ಭರ್ ಭಾರತ್ ಮತ್ತು ʻಆಧುನಿಕ ಭಾರತʼವು 21ನೇ ಶತಮಾನದಲ್ಲಿ ನಮಗೆ ದೊಡ್ಡ ಗುರಿಗಳಾಗಿವೆ, ನೀವು ಸದಾ ಅವುಗಳತ್ತ ಗಮನಹರಿಸಬೇಕು"
"ನಿಮ್ಮ ಎಲ್ಲ ವರ್ಷಗಳ ಸೇವೆಯಲ್ಲಿ, ಸೇವೆ ಮತ್ತು ಕರ್ತವ್ಯದ ಅಂಶಗಳು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನ ಮಾನದಂಡವಾಗಿರಬೇಕು"
"ನೀವು ಸಂಖ್ಯೆಗಳಿಗಾಗಿ ಕೆಲಸ ಮಾಡಬೇಡಿ, ಬದಲಿಗೆ ಜನರ ಜೀವನಕ್ಕಾಗಿ ಕೆಲಸ ಮಾಡಿ"
"ಅಮೃತ ಕಾಲದ ಈ ಅವಧಿಯಲ್ಲಿ ನಾವು ಸುಧಾರಣೆ, ಕಾರ್ಯದಕ್ಷತೆ, ಪರಿವರ್ತನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿಯೇ ಇಂದಿನ ಭಾರತವು 'ಸಬ್ ಕಾ ಪ್ರಯಾಸ್‌' ಆಶಯದೊಂದಿಗೆ ಮುನ್ನಡೆಯುತ್ತಿದೆ"
"ಯಾವುದೇ ಸವಾಲುಗಳಿಲ್ಲದ ಸರಳವಾದ ಕೆಲಸ ಎಂದಿಗೂ ನಿಮಗೆ ಸಿಗಬಾರದೆಂದು ನೀವು ಪ್ರಾರ್ಥಿಸಬೇಕು"
"ನೀವು ʻಆರಾಮ ವಲಯʼದ (ಕಂಫರ್ಟ್‌ ಝೋನ್‌) ಬಗ್ಗೆ ಹೆಚ್ಚು ಯೋಚಿಸಿದಷ್ಟೂ, ನಿಮ್ಮ ಪ್ರಗತಿ ಮತ್ತು ದೇಶದ ಪ್ರಗತಿಯನ್ನು ಹೆಚ್ಚಿನ ಮಟ್ಟದಲ್ಲಿ ನೀವು ತಡೆಯುತ್ತೀರಿ

ಬುನಾದಿ ಪಠ್ಯಕ್ರಮ ತರಗತಿಯನ್ನು ಪೂರ್ಣಗೊಳಿಸಿದ ಎಲ್ಲಾ ಯುವ ಮಿತ್ರರಿಗೆ ಬಹಳ ಅಭಿನಂದನೆಗಳು!. ಇಂದು ಹೋಳಿ ಹಬ್ಬ. ಈ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ, ನಿಮಗೆ, ಅಕಾಡೆಮಿಯ ಜನರಿಗೆ ಮತ್ತು ನಿಮ್ಮ ಕುಟುಂಬಗಳಿಗೆ ಹೋಳಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಜೀ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಗೌರವಾರ್ಥ ಪೋಸ್ಟಲ್ ಪ್ರಮಾಣ ಪತ್ರಗಳನ್ನೂ ನಿಮ್ಮ ಅಕಾಡೆಮಿ  ವಿತರಿಸಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಇಂದು  ಹೊಸ ಕ್ರೀಡಾ ಸಂಕೀರ್ಣ ಮತ್ತು ಹ್ಯಾಪಿ ವ್ಯಾಲಿ ಸಂಕೀರ್ಣಗಳನ್ನು ಉದ್ಘಾಟಿಸಲಾಗಿದೆ. ಈ ಸೌಲಭ್ಯಗಳು ತಂಡ ಸ್ಫೂರ್ತಿ, ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಬಲಪಡಿಸಲಿವೆ ಮತ್ತು ನಾಗರಿಕ ಸೇವೆಗಳನ್ನು ಇನ್ನಷ್ಟು ಸ್ಮಾರ್ಟ್ ಹಾಗು ದಕ್ಷಗೊಳಿಸಲಿವೆ. 

ಸ್ನೇಹಿತರೇ

ಕಳೆದ ಕೆಲವು ವರ್ಷಗಳಿಂದ, ನಾನು ನಾಗರಿಕ ಸೇವೆ ಅಧಿಕಾರಿಗಳ  ಹಲವಾರು ತಂಡಗಳನ್ನು ಭೇಟಿ ಮಾಡಿದ್ದೇನೆ ಮತ್ತು ಬಹಳ ಸಮಯವನ್ನು ಕಳೆದಿದ್ದೇನೆ. ಆದರೆ ನಿಮ್ಮ ತಂಡ ನನ್ನ ದೃಷ್ಟಿಯಿಂದ ಬಹಳ ವಿಶೇಷವಾದುದು. ನೀವು ನಿಮ್ಮ ವೃತ್ತಿ ಜೀವನವನ್ನು ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದಲ್ಲಿ ಆರಂಭ ಮಾಡುತ್ತಿರುವಿರಿ. ಭಾರತ ಸ್ವಾತಂತ್ರ್ಯದ 100 ನೇ ವರ್ಷವನ್ನಾಚರಿಸುತ್ತಿರುವಾಗ ನಮ್ಮಲ್ಲಿ ಬಹುಪಾಲು ಮಂದಿ ಬದುಕಿರುವುದಿಲ್ಲ. ಆದರೆ ನೀವು ಮತ್ತು ನಿಮ್ಮ ತಂಡ ಆ ಸಮಯದಲ್ಲಿ ಇರುತ್ತದೆ. ಸ್ವಾತಂತ್ರ್ಯದ ಈ ಪುಣ್ಯಕರ ಕಾಲಘಟ್ಟದಲ್ಲಿ ದೇಶವು ಮುಂದಿನ 25 ವರ್ಷಗಳ ಅವಧಿಯಲ್ಲಿ ಸಾಧಿಸುವ ಎಲ್ಲಾ ಬೆಳವಣಿಗೆ, ಅಭಿವೃದ್ಧಿಯಲ್ಲಿ  ನಿಮ್ಮ ಕಥೆ ಮತ್ತು ನಿಮ್ಮ ತಂಡ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಲಿಕ್ಕಿದೆ.  

ಸ್ನೇಹಿತರೇ

21 ನೇ ಶತಮಾನದ ಈ ಕಾಲಘಟ್ಟದಲ್ಲಿ ಇಡೀ ಜಗತ್ತಿನ ಕಣ್ಣು ಭಾರತದ ಮೇಲಿದೆ. ಕೊರೊನಾದಿಂದ ಉಂಟಾದ ಪರಿಸ್ಥಿತಿಯಿಂದಾಗಿ ಹೊಸ ಜಾಗತಿಕ ವ್ಯವಸ್ಥೆಯೊಂದು ಜನ್ಮ ತಳೆಯುತ್ತಿದೆ. ಈ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಭಾರತ ತನ್ನ ಪಾತ್ರವನ್ನು ಇನ್ನಷ್ಟು ಎತ್ತರಿಸಿಕೊಳ್ಳಬೇಕು ಮತ್ತು ಬಹಳ ತ್ವರಿತಗತಿಯಲ್ಲಿ ಅಭಿವೃದ್ಧಿ ಸಾಧಿಸಬೇಕು. ಕಳೆದ 75 ವರ್ಷಗಳಲ್ಲಿ ನಾವು ಸಾಧಿಸಿದ ಪ್ರಗತಿಯ ವೇಗಕ್ಕಿಂತ ಬಹಳ ಹೆಚ್ಚು ಪ್ರಮಾಣದ ವೇಗದಲ್ಲಿ ನಾವು ಮುನ್ನಡೆ ಸಾಧಿಸಲು ಇದು ಸಕಾಲ. ಸದ್ಯೋಭವಿಷ್ಯದಲ್ಲಿ ನೀವು ಯಾವುದಾದರೊಂದು ಜಿಲ್ಲೆಯನ್ನು ನಿಭಾಯಿಸುತ್ತೀರಿ ಅಥವಾ ಇಲಾಖೆಯನ್ನು ನಿಭಾಯಿಸುತ್ತೀರಿ. ಕೆಲವೊಮ್ಮೆ ಬಹಳ ದೊಡ್ಡ ಮೂಲಸೌಕರ್ಯ ಯೋಜನೆಯು ನಿಮ್ಮ ಮೇಲುಸ್ತುವಾರಿಯಲ್ಲಿ ನಡೆಯುತ್ತಿರಬಹುದು ಅಥವಾ ಯಾವುದಾದರೊಂದು ಮಟ್ಟದಲ್ಲಿ ನೀತಿ ರೂಪಣಾ ಮಟ್ಟದಲ್ಲಿ ನೀವು ನಿಮ್ಮ ಸಲಹೆಗಳನ್ನು ಕೊಡುತ್ತಿರಬಹುದು. ಇವೆಲ್ಲದರ ನಡುವೆಯೂ ನೀವು ಸದಾ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು ಮತ್ತು ಅದೆಂದರೆ 21 ನೇ ಶತಮಾನದ ಭಾರತದ ಬಹಳ ದೊಡ್ಡ ಗುರಿಯಾಗಿರುವ  ಆತ್ಮನಿರ್ಭರ ಭಾರತ, ಅಂದರೆ ನವಭಾರತದ ಬಗ್ಗೆ. ನಾವು ಈ ಸುಸಂದರ್ಭವನ್ನು ಕಳೆದುಕೊಳ್ಳಬಾರದು ಮತ್ತು ಆ ಕಾರಣಕ್ಕಾಗಿ ನಿಮ್ಮ ಮೇಲೆ ನನಗೆ ಬಹಳಷ್ಟು ನಿರೀಕ್ಷೆಗಳಿವೆ. ಈ ನಿರೀಕ್ಷೆಗಳು ನಿಮ್ಮ ವ್ಯಕ್ತಿತ್ವ, ನಿಮ್ಮ ಕಾರ್ಯಚಟುವಟಿಕೆಗಳು ಹಾಗು ನಿಮ್ಮ ಕೆಲಸದ ಸಂಸ್ಕೃತಿಗೆ ಸಂಬಂಧಿಸಿದಂತಹವುಗಳಾಗಿವೆ. ಆದುದರಿಂದ, ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಬಂಧಿಸಿ ಉಪಯೋಗಕ್ಕೆ ಬರಬಹುದಾದ ಸಣ್ಣ ಸಂಗತಿಗಳೊಂದಿಗೆ ನಾನು ಆರಂಭ ಮಾಡುತ್ತೇನೆ.

ಸ್ನೇಹಿತರೇ

ತರಬೇತಿಯ ಅವಧಿಯಲ್ಲಿ ನೀವು ಸರ್ದಾರ್ ಪಟೇಲ್ ಜೀ ಅವರ ಚಿಂತನೆ ಮತ್ತು ದೂರದೃಷ್ಟಿಯ ಬಗ್ಗೆ ಅರಿತುಕೊಂಡಿರುವಿರಿ. ಸೇವೆಯ ಉತ್ಸಾಹ, ಸ್ಫೂರ್ತಿ ಮತ್ತು ಕರ್ತವ್ಯದ ಭಾವನೆ ನಿಮ್ಮ ತರಬೇತಿಯ ಅವಿಭಾಜ್ಯ ಅಂಗ. ನೀವು ಈ ಸೇವೆಯಲ್ಲಿ ಎಷ್ಟು ವರ್ಷ ಇರುತ್ತೀರಿ ಎಂಬುದು ಮುಖ್ಯವಲ್ಲ, ಆದರೆ ಈ ಸಂಗತಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನ ಅಳತೆಗೋಲಾಗಿರಬೇಕು. ಸೇವೆಯ ಉತ್ಸಾಹ, ಸ್ಫೂರ್ತಿ ಅಥವಾ ಕರ್ತವ್ಯದ ಭಾವನೆ ಕ್ಷೀಣವಾಗುತ್ತಿದೆಯೇ .ಎಂಬುದನ್ನು ನಿರಂತರವಾಗಿ ತಮಗೆ ತಾವೇ ಕೇಳಿಕೊಳ್ಳುತ್ತಿರಬೇಕು. ಈ ಗುರಿಯೆಡೆಗಿನ ಗಮನವನ್ನು ನೀವು ಕಳೆದುಕೊಳ್ಳದಂತೆ ಸದಾ ನಿಮ್ಮನ್ನು ನೀವು ಮೌಲ್ಯಮಾಪನ  ಮಾಡಿಕೊಳ್ಳುತ್ತಿರಬೇಕು. ನೀವು ಈ ಗುರಿಯನ್ನು ಸದಾ ಅತ್ಯುನ್ನತ ಸ್ಥಾನದಲ್ಲಿಡಿ. ಅದರಿಂದ ವಿಮುಖವಾಗುವುದಾಗಲೀ, ಅದನ್ನು ದುರ್ಬಲಗೊಳಿಸುವುದಾಗಲೀ ಆಗಬಾರದು. ಅಂತಹ ಸಂದರ್ಭಗಳಲ್ಲಿ ವ್ಯಕ್ತಿ ಅಥವಾ ವ್ಯವಸ್ಥೆ  ತೊಂದರೆಗಳನ್ನು ಎದುರಿಸುತ್ತಿರುವುದನ್ನು ಮತ್ತು ಸೇವೆಯ ಭಾವ ಬದಿಗೆ ಸರಿಸಲ್ಪಟ್ಟು ಅಧಿಕಾರದ ಭಾವನೆ ಮೇಲುಗೈ ಸಾಧಿಸುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಕೆಲವೊಮ್ಮೆ ಈ ನಷ್ಟ ಬಹಳ ಮೊದಲೇ ಅಥವಾ ನಂತರ ಆಗಬಹುದು, ಆದರೆ ನಷ್ಟ ಮಾತ್ರ ಆಗಿಯೇ ಆಗುತ್ತದೆ. 

ಸ್ನೇಹಿತರೇ

ನಾನು ನಿಮಗೆ ಇನ್ನೊಂದು ಸಂಗತಿಯನ್ನು ತಿಳಿಸಲು ಬಯಸುತ್ತೇನೆ. ಅದು ನಿಮಗೆ ಉಪಯುಕ್ತವಾಗಬಹುದು. ನಾವು ಕರ್ತವ್ಯದ ಭಾವನೆಯೊಂದಿಗೆ ಕೆಲಸ ಮಾಡಿದಾಗ ಮತ್ತು ಉದ್ದೇಶದ ಭಾವನೆಯಿಂದ ಕೆಲಸ ಮಾಡಿದಾಗ ಯಾವ ಕೆಲಸವೂ ಹೊರೆ ಎನಿಸುವುದಿಲ್ಲ. ನೀವು ಕೂಡಾ ಇಲ್ಲಿಗೆ ಉದ್ದೇಶದ ಭಾವನೆಯಿಂದ ಬಂದಿದ್ದೀರಿ. ನೀವು ದೇಶಕ್ಕಾಗಿ  ಸಮಾಜಕ್ಕಾಗಿ  ಧನಾತ್ಮಕ ಬದಲಾವಣೆಯ ಭಾಗವಾಗಿ ಬಂದಿರುವಿರಿ. ಆದೇಶ ಕೊಡುವ ಮೂಲಕ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಮತ್ತು ಕರ್ತವ್ಯದ ಭಾವನೆಯಿಂದ ಇತರರನ್ನು ಪ್ರೋತ್ಸಾಹಿಸುತ್ತ, ಪ್ರೇರೇಪಿಸುತ್ತ ಕೆಲಸ ಮಾಡಿಸುವುದರ ನಡುವೆ ಬಹಳ ವ್ಯಾಪಕವಾದಂತಹ ವ್ಯತ್ಯಾಸವಿದೆ. ನೀವು ಈ  ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು  ಎಂದು ನಾನು ಭಾವಿಸುತ್ತೇನೆ. ತಂಡ ಸ್ಫೂರ್ತಿಗೆ ಇದು ಅವಶ್ಯ. ಇದರಲ್ಲಿ ಯಾವುದೇ ರಾಜಿಗೆ ಅವಕಾಶ ಇಲ್ಲ ಮತ್ತು ಅದು ಬಹಳ ಮುಖ್ಯ. 

ಸ್ನೇಹಿತರೇ

ಈಗ ಕೆಲವು ತಿಂಗಳ ನಂತರ, ನೀವು ತಳಮಟ್ಟದಲ್ಲಿ ಕೆಲಸ ಮಾಡಲು ಹೋಗುತ್ತೀರಿ.ನೀವು ಕಡತಗಳು ಮತ್ತು ನೈಜ ಸಂಗತಿಗಳ ನಡುವಿನ ಅಂತರವನ್ನು ತಿಳಿದುಕೊಂಡು ಕೆಲಸ ಮಾಡಬೇಕಾಗುತ್ತದೆ. ನಿಮಗೆ ಕಡತಗಳಲ್ಲಿ ನೈಜ ಭಾವನೆಗಳು ಗೊತ್ತಾಗುವುದಿಲ್ಲ. ನೈಜ ಭಾವನೆಗಳಿಗಾಗಿ ನೀವು ತಳಮಟ್ಟದ ವಾಸ್ತವದ ಜೊತೆ ಮುಖಾಮುಖಿಯಾಗಬೇಕಾಗುತ್ತದೆ. ನಿಮ್ಮ ಬದುಕಿನ ಮುಂದಿನ ಕಾಲಕ್ಕೆ ಇದು ನೆನಪಿಡಿ, ಕಡತಗಳಲ್ಲಿರುವ ದತ್ತಾಂಶಗಳು ಬರೇ ಸಂಖ್ಯೆಗಳಲ್ಲ. ಪ್ರತೀ ಅಂಕೆ ಸಂಖ್ಯೆಯೂ ಜೀವವನ್ನು ಹೊಂದಿದೆ. ಆ ಜೀವಕ್ಕೆ ಕೆಲ ಕನಸುಗಳಿರಬಹುದು ಅಥವಾ ಆಶೋತ್ತರಗಳನ್ನು ಅದು ಹೊಂದಿರಬಹುದು ಅಥವಾ ಕೆಲವು ಸವಾಲುಗಳು, ಕಷ್ಟಗಳನ್ನು ಅದು ಒಳಗೊಂಡಿರಬಹುದು. ನಾನು ನನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮಂತ್ರವು ನಿಮಗೆ ನಿರ್ಧಾರಗಳನ್ನು ಕೈಗೊಳ್ಳಲು ಧೈರ್ಯವನ್ನು ನೀಡುತ್ತದೆ ಮತ್ತು ನೀವದನ್ನು ಅನುಸರಿಸಿದರೆ ಆಗ ನೀವು ತಪ್ಪುಗಳನ್ನು ಮಾಡುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ.  

ಸ್ನೇಹಿತರೇ

ನೀವು ಎಲ್ಲೆಲ್ಲಿ ಕೆಲಸಕ್ಕೆ ನಿಯೋಜಿಸಲ್ಪಡುತ್ತೀರೋ ಅಲ್ಲಿ ಹೊಸತೇನನ್ನಾದರೂ ಮಾಡುವ ಉತ್ಸಾಹ ಮತ್ತು ಉತ್ಕಟೇಚ್ಛೆ ನಿಮ್ಮಲ್ಲಿರಬೇಕು. ಪರಿಸ್ಥಿತಿಯನ್ನು ಬದಲಾಯಿಸಲು ನಿಮ್ಮ ತಲೆಯಲ್ಲಿ ಹಲವಾರು ಚಿಂತನೆಗಳು ಬರಬಹುದು. ಆದರೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಅಂತಹ ಚಿಂತನೆಗಳು, ಯೋಚನೆಗಳು ಬಂದಾಗ ಇದು ಸರಿಯಲ್ಲ ಎಂಬ ಭಾವನೆ ಬಂದಾಗ ಮತ್ತು ಬದಲಾವಣೆ ಆಗಬೇಕು ಎಂಬ ಭಾವನೆ ಮೂಡಿದಾಗ ನೀವು ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಹಲವಾರು ವ್ಯವಸ್ಥೆಗಳು, ನೀತಿ ನಿಯಮಗಳ ಜಾಲಕ್ಕೆ ಸಿಲುಕುತ್ತೀರಿ ಮತ್ತು ಅವುಗಳು ಅಪ್ರಸ್ತುತ ಎಂದು ನಿಮಗನಿಸಲೂಬಹುದು. ಅಥವಾ ನೀವದನ್ನು ಇಷ್ಟಪಡದಿರಲೂಬಹುದು. ಅವುಗಳು ತೊಡಕಿನ ಸಂಗತಿಗಳು ಎಂದು ನೀವು ಭಾವಿಸಬಹುದು. ಅವೆಲ್ಲವೂ ತಪ್ಪು ಎಂದು ನಾನು ಹೇಳಲಾರೆ, ಅವುಗಳು ಹಾಗೆ ಆಗಿರಲೂಬಹುದು. ನಿಮಗೆ ಅಧಿಕಾರ ಇದ್ದಾಗ ನೀವು ನಿಮ್ಮದೇ ರೀತಿಯಲ್ಲಿ ಕಾರ್ಯಗಳನ್ನು ಮಾಡಲು ಹೊರಡುತ್ತೀರಿ. ಆದರೆ ನೀವು ತಾಳ್ಮೆಯಿಂದಿರಬೇಕು. ಮತ್ತು ಆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ನೀವು ನಾನು ಹೇಳಿದ ಹಾದಿಯನ್ನು ಅನುಸರಿಸುತ್ತೀರೋ?   

ನಾನು ನಿಮಗೆ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಯಾಕೆ ರೂಪಿಸಲಾಯಿತು ಅಥವಾ ಕಾನೂನನ್ನು ಮಾಡಲಾಯಿತು ಮತ್ತು ಆಗ ಅಲ್ಲಿ ಅಂತಹ ಯಾವ ಪರಿಸ್ಥಿತಿಗಳಿದ್ದವು ಎಂಬುದನ್ನು ಆಮೂಲಾಗ್ರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಕಡತದಲ್ಲಿರುವ ಪ್ರತಿಯೊಂದು ಶಬ್ದವನ್ನು ಕಣ್ಣೆದುರು ತಂದುಕೊಳ್ಳಿ ಮತ್ತು ಅದನ್ನು 20-50, ಅಥವಾ 100 ವರ್ಷಗಳ ಹಿಂದೆ ಯಾಕೆ ಮಾಡಲಾಯಿತು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ನೀವು ಗಂಭೀರವಾದ ಮತ್ತು ಆಳವಾದ ಅಧ್ಯಯನವನ್ನು ನಡೆಸಿ ಅದರ ಹಿಂದಿನ ತರ್ಕವನ್ನು ಕಂಡುಕೊಳ್ಳಿ ಮತ್ತು ಆ ವ್ಯವಸ್ಥೆ ಅಭಿವೃದ್ಧಿಗೊಳ್ಳಲು ಇದ್ದ ಅವಶ್ಯಕತೆಗಳ ಬಗ್ಗೆ ಚಿಂತಿಸಿ. ಅದರ ತಳಮಟ್ಟದವರೆಗೆ ಹೋಗಿ ಮತ್ತು ಆ ಕಾನೂನು ಅಥವಾ ನಿಯಮವನ್ನು ಮಾಡಲು ಇದ್ದ ಕಾರಣವನ್ನು ಹುಡುಕಿ. ನೀವು ಸಮಸ್ಯೆಯನ್ನು ಅಧ್ಯಯನ ಮಾಡಿ ಅದರ ತಲಸ್ಪರ್ಶೀ ಕಾರಣಗಳ ಹುಡುಕಾಟ ನಡೆಸಿದಾಗ ನಿಮಗೆ ಅದಕ್ಕೊಂದು ಸುಲಲಿತ ಪರಿಹಾರ ಹುಡುಕಲು ದಾರಿ ಒದಗಿ ಬರುತ್ತದೆ. ಬಹಳ ಅವಸರದಲ್ಲಿ ಮಾಡಿದ ಸಂಗತಿಗಳು ಕೆಲ ಕಾಲ ಬಹಳ ಸುಂದರವಾಗಿ ಕಾಣುತ್ತವೆ, ಆದರೆ ಅವುಗಳು ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ. ನೀವು ಎಲ್ಲಾ ಸಂಗತಿಗಳನ್ನೂ ಆಳವಾಗಿ ಹೊಕ್ಕು ಪರಿಶೀಲಿಸಿದಾಗ ನಿಮಗೆ ಆ ಕ್ಷೇತ್ರದ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಲಭಿಸುತ್ತದೆ. ಮತ್ತು ಇಂತಹ ಕೆಲಸಗಳನ್ನು ಮಾಡಿದ ಬಳಿಕ ನಿರ್ಧಾರ ಕೈಗೊಳ್ಳುವಾಗ ಇನ್ನೊಂದು ಸಂಗತಿಯನ್ನು ನೀವು ನೆನಪಿಡಬೇಕು.

ಮಹಾತ್ಮಾ ಗಾಂಧಿ ಅವರು ಸದಾ ಹೇಳುತ್ತಿದ್ದರು, ಏನೆಂದರೆ; ನಿಮ್ಮ ನಿರ್ಧಾರಗಳು ಸಮಾಜದ ಕೊನೆಯ ಸಾಲಿನಲ್ಲಿ ನಿಂತ ವ್ಯಕ್ತಿಗೆ ಪ್ರಯೋಜನಕಾರಿಯಾಗುವುದಾದಲ್ಲಿ, ಆಗ ನೀವು ನಿರ್ಧಾರ ಕೈಗೊಳ್ಳುವಲ್ಲಿ ಹಿಂಜರಿಯಬೇಡಿ. ನಾನು ಇದಕ್ಕೆ ಇನ್ನೊಂದು ಸಂಗತಿಯನ್ನು ಸೇರಿಸಲು ಬಯಸುತ್ತೇನೆ. ಅಂದರೆ ನೀವು ಏನೇ ನಿರ್ಧಾರ ಕೈಗೊಂಡರೂ, ನೀವು ಯಾವುದೇ ವ್ಯವಸ್ಥೆಯನ್ನು ಬದಲಾಯಿಸಿದರೂ ನೀವು ಆಗ ಅದನ್ನು ಇಡೀ ಭಾರತದ ಹಿನ್ನೆಲೆಯನ್ನು ಇಟ್ಟುಕೊಂಡು ನೋಡಬೇಕು, ಯಾಕೆಂದರೆ ನಾವು ಅಖಿಲ ಭಾರತೀಯ ಸೇವೆಗಳನ್ನು ಪ್ರತಿನಿಧಿಸುತ್ತೇವೆ. ನಿಮ್ಮ ಮನಸ್ಸಿನಲ್ಲಿರುವ ನಿರ್ಧಾರ ಸ್ಥಳೀಯವಾದುದಾಗಿರಬಹುದು ಆದರೆ ಕನಸು ಮಾತ್ರ ಇಡೀ ದೇಶಕ್ಕೆ ಅನುಗುಣವಾದುದಾಗಿರಬೇಕು. 

ಸ್ನೇಹಿತರೇ

ಸ್ವಾತಂತ್ರ್ಯದ ಈ “ಅಮೃತ ಕಾಲ”ದಲ್ಲಿ ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಆದುದರಿಂದ, ಭಾರತವು “ಸಬ್ ಕಾ ಪ್ರಯಾಸ್” ಉತ್ಸಾಹದೊಂದಿಗೆ ಮುನ್ನಡೆಯುತ್ತಿದೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಪ್ರತಿಯೊಬ್ಬರ ಪ್ರಯತ್ನದ ಶಕ್ತಿಯನ್ನು ಮತ್ತು ಅವರ ಭಾಗವಹಿಸುವಿಕೆಯ ಶಕ್ತಿಯನ್ನು ಅರಿಯಬೇಕು. ನಿಮ್ಮ ಕಾರ್ಯದಲ್ಲಿ ಪ್ರತಿಯೊಬ್ಬ ಸಿಬ್ಬಂದಿಯನ್ನು ಮತ್ತು ಅನೇಕ ಅಂಶಗಳನ್ನು ಒಳಗೊಳಿಸಿಕೊಂಡಷ್ಟೂ ಅದು ಮೊದಲ ವರ್ತುಲವಾಗುತ್ತದೆ. ಆದರೆ ನೀವು ಸಾಮಾಜಿಕ ಸಂಘಟನೆಗಳನ್ನು ಮತ್ತು ಜನಸಾಮಾನ್ಯರನ್ನು ಸೇರಿಸಿಕೊಂಡು ಹೋದಂತೆ ಅದು ದೊಡ್ಡ ವರ್ತುಲವಾಗುತ್ತದೆ. ಈ ರೀತಿಯಲ್ಲಿ ಪ್ರತಿಯೊಬ್ಬರೂ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಿಮ್ಮ ಪ್ರಯತ್ನದ ಭಾಗವಾಗಬೇಕು. ಮತ್ತು ಅಲ್ಲಿ ಅವರ ಮಾಲಕತ್ವ ಇರಬೇಕು. ಮತ್ತು ನೀವು ಈ ಕೆಲಸಗಳನ್ನು ಮಾಡಿದರೆ ಆಗ ನೀವು ಗಳಿಸಿಕೊಳ್ಳುವ ಬಲ, ಶಕ್ತಿ ನಿಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಅಮೋಘವಾಗಿರುತ್ತದೆ. 

ಉದಾಹರಣೆಗೆ, ದೊಡ್ಡ ನಗರದಲ್ಲಿ ಮಹಾನಗರ ಪಾಲಿಕೆ, ಮುನ್ಸಿಪಲ್ ಕಾರ್ಪೋರೇಶನ್ ಅನೇಕ ಮಂದಿ ನೈರ್ಮಲ್ಯ ಕೆಲಸಗಾರರನ್ನು ಹೊಂದಿರುತ್ತದೆ, ಅವರು ನಗರವನ್ನು ಸ್ವಚ್ಛವಾಗಿಡಲು ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರ ಪ್ರಯತ್ನಗಳಲ್ಲಿ ಪ್ರತಿಯೊಬ್ಬ ನಾಗರಿಕರೂ, ಪ್ರತೀ ಕುಟುಂಬವೂ  ಭಾಗಿಯಾದರೆ  ಮತ್ತು ಇದು ಕೊಳಚೆ,ಕಸದ ವಿರುದ್ಧದ ಜನಾಂದೋಲನವಾದರೆ ಅದು ಸ್ವಚ್ಛತಾ ಕಾರ್ಮಿಕರಿಗೆ ದೈನಂದಿನ ಹಬ್ಬವಾಗಲಾರದೇ?. ಇದರ ಪರಿಣಾಮ ಬಹು ಆಯಾಮದ್ದಾಗಿರುವುದಿಲ್ಲವೇ?. ಪ್ರತಿಯೊಬ್ಬರ ಪ್ರಯತ್ನಗಳು ಧನಾತ್ಮಕ ಫಲಿತಾಂಶ ತರುತ್ತವೆಯಲ್ಲವೆ. ಜನರ ಸಹಭಾಗಿತ್ವ ಇದ್ದಾಗ ಒಂದು ಕೂಡಿಸು ಒಂದು ಎಂದರೆ ಅದು ಇಬ್ಬರಲ್ಲ, ಅದು ಹನ್ನೊಂದಾಗುತ್ತದೆ. 

ಸ್ನೇಹಿತರೇ

ಇಂದು ನಾನು ನಿಮಗೆ ಇನ್ನೊಂದು ಕೆಲಸವನ್ನು ಕೊಡಲು ಬಯಸುತ್ತೇನೆ.ನಿಮ್ಮ ವೃತ್ತಿ ಜೀವನದುದ್ದಕ್ಕೂ ಈ ಕೆಲಸವನ್ನು ನೀವು ಮಾಡುತ್ತಲೇ ಇರಬೇಕು ಮತ್ತು ಆ ರೀತಿಯಲ್ಲಿ ಅದು ನಿಮ್ಮ ಬದುಕಿನ ಭಾಗವಾಗಬೇಕು ಮತ್ತು ಅದು ಅಭ್ಯಾಸವೂ ಆಗಬೇಕು. ಮತ್ತು ಆಚರಣೆಗೆ ಸಂಬಂಧಿಸಿ ನನ್ನ  ಸರಳ ವ್ಯಾಖ್ಯಾನ ಎಂದರೆ ಪ್ರಯತ್ನದ ಮೂಲಕ ಬೆಳೆಸಿಕೊಳ್ಳಲಾದ ಉತ್ತಮ ಅಭ್ಯಾಸ. 

ನೀವು ಯಾವುದೇ ಜಿಲ್ಲೆಗೆ ನಿಯೋಜಿಸಲ್ಪಟ್ಟರೂ ಆ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಸಂಕಷ್ಟಗಳ ಬಗ್ಗೆ ವಿಶ್ಲೇಷಣೆ ಮಾಡಿ. ಆ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಪೂರ್ವಾಧಿಕಾರಿಗಳು ಯಾಕೆ ಪ್ರಯತ್ನ ಮಾಡಲಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರಬಹುದು. ನೀವು ನಿಯೋಜಿಸಲ್ಪಟ್ಟ ಪ್ರದೇಶಗಳ ಐದು ಸವಾಲುಗಳನ್ನು- ಜನರ ಬದುಕನ್ನು ಕಷ್ಟ ಪರಂಪರೆಗೆ ದೂಡಿರುವ ಮತ್ತು ಅವರ ಅಭಿವೃದ್ಧಿಗೆ ತೊಡಕಾಗಿರುವ ಸವಾಲುಗಳನ್ನು ಗುರುತಿಸಿ. 

ಸ್ಥಳೀಯ ಮಟ್ಟದಲ್ಲಿ ಅವುಗಳನ್ನು ಗುರುತಿಸುವುದು ನಿಮಗೆ ಬಹಳ ಮುಖ್ಯ. ಮತ್ತು ಇದು ಯಾಕೆ ಅವಶ್ಯ ಎಂಬುದನ್ನೂ ನಾನು ನಿಮಗೆ ತಿಳಿಸುತ್ತೇನೆ. ನಾವು ಸರಕಾರ ರಚಿಸಿದಾಗ ನಾವು ಇಂತಹ ಹಲವು ಸವಾಲುಗಳನ್ನು ಗುರುತಿಸಿದ್ದೆವು. ಒಮ್ಮೆ ಸವಾಲುಗಳು ಗುರುತಿಸಲ್ಪಟ್ಟಾದ ಬಳಿಕ ಅವುಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾವು ಮುಂದುವರೆದೆವು. ಸ್ವಾತಂತ್ರ್ಯ ದೊರಕಿದ ಇಷ್ಟು ವರ್ಷಗಳಾದ ಬಳಿಕವೂ ಬಡವರಿಗೆ ಪಕ್ಕಾ ಮನೆ ಲಭ್ಯವಾಗಬೇಡವೇ?. ಇದು ಒಂದು ಸವಾಲು ಆಗಿತ್ತು ಮತ್ತು ಆ ಸವಾಲನ್ನು ನಾವು ಕೈಗೆತ್ತಿಕೊಂಡೆವು. ನಾವು ಅವರಿಗೆ ಪಕ್ಕಾ ಮನೆಯನ್ನು ಕೊಡಲು ನಿರ್ಧರಿಸಿದೆವು ಮತ್ತು ಪಿ.ಎಂ. ಆವಾಸ್ ಯೋಜನಾದ ವಿಸ್ತರಣೆಗೆ  ತ್ವರಿತಗತಿಯನ್ನು ಒದಗಿಸಿದೆವು.  

ದೇಶದಲ್ಲಿರುವ ಇಂತಹ ಹೆಚ್ಚಿನ ಜಿಲ್ಲೆಗಳಲ್ಲಿ ಬಹಳ ದೊಡ್ಡ ಸವಾಲುಗಳಿವೆ, ಅಭಿವೃದ್ಧಿಯ ಸ್ಪರ್ಧೆಯಲ್ಲಿ ಅವುಗಳು ದಶಕಗಳಷ್ಟು ಹಿಂದುಳಿದಿವೆ. ಒಂದು ರಾಜ್ಯ ಬಹಳ ಮುಂದಿರಬಹುದು, ಆದರೆ ಅದರ ಎರಡು ಜಿಲ್ಲೆಗಳು ಬಹಳ ಹಿಂದೆ ಉಳಿದಿರಬಹುದು. ಒಂದು ಜಿಲ್ಲೆ ಬಹಳ ಮುಂದಿರಬಹುದು, ಆದರೆ ಅದರ ಎರಡು ಬ್ಲಾಕ್ ಗಳು ಬಹಳ ಹಿಂದೆ ಉಳಿದಿರಬಹುದು. ನಾವು ಒಂದು ದೇಶವಾಗಿ ಅಂತಹ ಜಿಲ್ಲೆಗಳು ಗುರುತಿಸಲ್ಪಡುವಂತಹ ನೀಲ ನಕಾಶೆಯನ್ನು ತಯಾರು ಮಾಡಿದೆವು ಮತ್ತು ಅವುಗಳನ್ನು ರಾಜ್ಯದ ಸರಾಸರಿಗೆ ಸಮನಾಗಿ ಅಭಿವೃದ್ಧಿ ಮಾಡಲು ಮತ್ತು ಸಾಧ್ಯವಾದರೆ ರಾಷ್ಟ್ರೀಯ ಸರಾಸರಿಗೆ ಸಮನಾಗಿ ಅಭಿವೃದ್ಧಿ ಮಾಡಲು ಆಶೋತ್ತರಗಳ ಜಿಲ್ಲೆ ಎಂಬ ಅಭಿಯಾನವನ್ನು ಆರಂಭ ಮಾಡಬೇಕಾಯಿತು. 

ಅದೇ ರೀತಿ, ವಿದ್ಯುತ್ ಮತ್ತು ಬಡವರಿಗೆ ಅಡುಗೆ ಅನಿಲ ಸಂಪರ್ಕ ಇನ್ನೊಂದು ಸವಾಲಾಗಿತ್ತು. ನಾವು ಸೌಭಾಗ್ಯ ಯೋಜನೆಯನ್ನು ಆರಂಭ ಮಾಡಿದೆವು. ಮತ್ತು ಅವರಿಗೆ ಉಚಿತ ಅನಿಲ ಸಂಪರ್ಕಗಳನ್ನು ಉಜ್ವಲಾ ಯೋಜನೆ ಅಡಿಯಲ್ಲಿ ನೀಡಿದೆವು. ಸ್ವಾತಂತ್ರ್ಯದ ಬಳಿಕ ಇಂತಹ ಕೆಲಸ ಆಗುತ್ತಿರುವುದು ಇದೇ ಮೊದಲು. ಸರಕಾರ ಇದರ ಬಗ್ಗೆ ಮಾತನಾಡಿತು ಮತ್ತು ಯೋಜನೆಗಳನ್ನು ಪೂರ್ಣತ್ವದೆಡೆಗೆ ಕೊಂಡೊಯ್ಯಲು ಕಾರ್ಯವಿಧಾನಗಳನ್ನು ರೂಪಿಸಿತು. 

ಈ ಹಿನ್ನೆಲೆಯಲ್ಲಿ, ನಾನು ನಿಮಗೆ ಒಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ವಿವಿಧ ಇಲಾಖೆಗಳ ನಡುವಣ ಸಮನ್ವಯದ ಕೊರತೆಯಿಂದ ಯೋಜನೆಗಳು ವರ್ಷಗಟ್ಟಲೆ ಉಳಿದುಬಿಡುತ್ತಿದ್ದವು. ರಸ್ತೆಯೊಂದು ನಿರ್ಮಾಣವಾದರೆ, ಅದನ್ನು ಮರುದಿನ ಟೆಲಿಫೋನ್ ಇಲಾಖೆಯವರು ಅಗೆದು ಹಾಕುತ್ತಿದ್ದುದನ್ನು ಮತ್ತು ಬಳಿಕ ಚರಂಡಿ ಇಲಾಖೆ ಮತ್ತೆ ಅಗೆದು ಹಾಕುತ್ತಿದ್ದುದನ್ನು ನಾವು ನೋಡಿದ್ದೇವೆ. ಆದುದರಿಂದ ಸಮನ್ವಯದ ಕೊರತೆಯ ಈ ಸವಾಲನ್ನು ಎದುರಿಸಲು ಎದುರಿಸಲು ನಾವು ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯನ್ನು ರೂಪಿಸಿದ್ದೇವೆ. ಎಲ್ಲಾ ಸರಕಾರಿ ಇಲಾಖೆಗಳು, ರಾಜ್ಯಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪ್ರತೀ ಭಾಗೀದಾರರು ಎಲ್ಲಾ ಮಾಹಿತಿಯನ್ನೂ ಸಾಕಷ್ಟು ಮುಂಚಿತವಾಗಿ ಹೊಂದಿರುವಂತೆ ಖಚಿತಪಡಿಸಲಾಗುವುದು. ನೀವು ಸವಾಲನ್ನು ಗುರುತಿಸಿದ ಬಳಿಕ ಪರಿಹಾರವನ್ನು ಹುಡುಕುವುದು ಮತ್ತು ಆ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡುವುದು ಬಹಳ ಸುಲಭವಾಗುತ್ತದೆ. 

ನಿಮ್ಮ ಪ್ರದೇಶದ ಜನರಿಗೆ ಸಂತೋಷ ನೀಡಬಲ್ಲವು ಎನ್ನುವಂತಹ 5-7-10 ಸವಾಲುಗಳನ್ನು  ಗುರುತಿಸಿ ಅವುಗಳಿಗೆ ಪರಿಹಾರ ಹುಡುಕುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಸರಕಾರದಲ್ಲಿ ಅವರ ನಂಬಿಕೆ ಮತ್ತು ನಿಮ್ಮ ವಿಷಯದಲ್ಲಿ ಅವರ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ನೀವು ನಿಮ್ಮ ಅಧಿಕಾರಾವಧಿಯಲ್ಲಿ ನಿಮ್ಮ ಪ್ರದೇಶದ ಆ ಸಮಸ್ಯೆಗಳನ್ನು ಬಗೆಹರಿಸಲು ಮನಸ್ಸು ಮಾಡಿ. 

ನಮ್ಮ ಧರ್ಮ ಗ್ರಂಥಗಳಲ್ಲಿ ಸ್ವಂತ ಸುಖದ ಪ್ರಸ್ತಾಪ ಇದೆ. ಒಂದು ನಿರ್ದಿಷ್ಟ ಕೆಲಸವನ್ನು ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸಿದರೆ ಅದು ಮನಸ್ಸಂತೋಷವನ್ನು ಕೊಡುತ್ತದೆ ಮತ್ತು ಅದಕ್ಕೆ ಹೋಲಿಸಿದಾಗ  ಕೆಲವೊಮ್ಮೆ ಜೀವನದಲ್ಲಿ ಹಲವು ಕೆಲಸಗಳನ್ನು ಮಾಡಿದರೂ ವ್ಯಕ್ತಿಗೆ ಬಹಳ ಸಂತೋಷ ದೊರೆಯದೇ ಇರಬಹುದು. ಅದು ಕೊನೆಯಿಲ್ಲದಂತಹ ಆನಂದ.  ಮತ್ತು ಅದು ಆಯಾಸದ ಭಾವನೆಯನ್ನು ತರುವುದೇ ಇಲ್ಲ. 1-2-5 ಸವಾಲುಗಳನ್ನು ಕೈಗೆತ್ತಿಕೊಂಡು ಸಂಪನ್ಮೂಲಗಳನ್ನು, ಅನುಭವಗಳನ್ನು ಮತ್ತು ಪ್ರತಿಭೆಯನ್ನು ಬಳಸಿಕೊಂಡು ಅವುಗಳನ್ನು ನಿಭಾಯಿಸುವುದು ಸ್ವಂತ ಸುಖದ ಅನುಭವವನ್ನು ನೀಡುತ್ತದೆ!. ಆ ಸವಾಲುಗಳಿಗೆ ಪರಿಹಾರಗಳನ್ನು ಹುಡುಕಿದಾಗ ದೊರೆಯುವ ತೃಪ್ತಿ, ಸಮಾಧಾನ ಬಹಳ ದೊಡ್ಡದು. 

ನಿಮ್ಮ ಕ್ರಮಗಳು ಮನಸ್ಸಿಗೆ ಸಮಾಧಾನ, ಶಾಂತಿ ನೀಡುವಂತಿರಬೇಕು ಮತ್ತು ಫಲಾನುಭವಿಗಳು ನಿಮ್ಮ ಪ್ರಯತ್ನಗಳನ್ನು ಗುರುತಿಸುವಂತಿರಬೇಕು. ನೀವು 20 ವರ್ಷಗಳ ಹಿಂದೆಯೇ ಆ ಸ್ಥಳವನ್ನು ಬಿಟ್ಟು ಹೋಗಿದ್ದರೂ,  ನಿಮ್ಮ ಪ್ರದೇಶದ ಜನರು ಬಹಳ ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಹುಡುಕುವಲ್ಲಿ ನಿಮ್ಮ ಪ್ರಯತ್ನಗಳನ್ನು ಗುರುತಿಸುವಂತಿರಬೇಕು. 

ಗುಣಾತ್ಮಕ ಬದಲಾವಣೆಗಳನ್ನು ತರಬಲ್ಲ ಇಂತಹ ವಿಷಯಗಳ ಬಗ್ಗೆ ನೀವು ಅನ್ವೇಷಣೆ ನಡೆಸುವಂತಾಗಬೇಕು ಎಂಬುದು ನನ್ನ ಆಶಯವಾಗಿದೆ. ಅಂತಾರಾಷ್ಟ್ರೀಯ ಅಧ್ಯಯನಗಳ ಪರಾಮರ್ಶೆ, ಕಾನೂನುಗಳ ಅಧ್ಯಯನಕ್ಕೆ ನೀವು ಹಿಂಜರಿಯಬಾರದು ಮತ್ತು ಇದಕ್ಕಾಗಿ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಿ. ದೇಶದ ವಿವಿಧ ಜಿಲ್ಲೆಗಳ ಜವಾಬ್ದಾರಿ ಹೊಂದಿರುವ 300-400 ಜನರು ಕೈಗೊಳ್ಳುವ ಸಂಘ ಶಕ್ತಿಯ ಪರಾಕ್ರಮ ಮತ್ತು ಕೌಶಲ್ಯದ ಬಗ್ಗೆ ಕಲ್ಪನೆ ಮಾಡಿಕೊಳ್ಳಿ. ಬೇರೊಂದು ಮಾತುಗಳಲ್ಲಿ ಹೇಳುವುದಾದರೆ ನೀವು ಒಗ್ಗೂಡಿದರೆ ಅರ್ಧ ಭಾರತದಲ್ಲಿ ಹೊಸ ಆಶಯ, ಭರವಸೆಗಳಿಗೆ ಜನ್ಮ ನೀಡಬಲ್ಲಿರಿ. ಮತ್ತು ಅಲ್ಲಿ ಅಭೂತಪೂರ್ವ ಬದಲಾವಣೆ ಸಾಧ್ಯವಾಗಲಿದೆ. ನೀವು ಏಕಾಂಗಿ ಅಲ್ಲ. ನಿಮ್ಮ ಧೋರಣೆ, ಪ್ರಯತ್ನಗಳು ಮತ್ತು ಉಪಕ್ರಮಗಳು ಅರ್ಧ ಭಾರತದ 400 ಜಿಲ್ಲೆಗಳಲ್ಲಿ ಪ್ರಭಾವ ಬೀರಬಲ್ಲವು. 

ಸ್ನೇಹಿತರೇ

ನಮ್ಮ ಸರಕಾರ ನಾಗರಿಕ ಸೇವೆಯ ಈ ಪರಿವರ್ತನೆಯ ಶಕೆಯನ್ನು ಸುಧಾರಣೆಗಳ ಮೂಲಕ ಬೆಂಬಲಿಸುತ್ತಿದೆ. ಮಿಷನ್ ಕರ್ಮಯೋಗಿ ಮತ್ತು ಆರಂಭ ಕಾರ್ಯಕ್ರಮಗಳು ಇದರ ಭಾಗಗಳಾಗಿವೆ. ನಿಮ್ಮ ಅಕಾಡೆಮಿಯ ತರಬೇತಿಯ ಸ್ವರೂಪವು ಈಗ ಕರ್ಮಯೋಗಿ ಮಿಷನ್ ಆಧರಿಸಿದೆ ಎಂದು ನನಗೆ ತಿಳಿಸಲಾಗಿದೆ. ಇದರಿಂದ ನಿಮಗೆಲ್ಲರಿಗೂ ಬಹಳ ಪ್ರಯೋಜನವಾಗಲಿದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ. ನಾನು ಇನ್ನೊಂದು ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನೀವು ನಿಮಗೆ ಯಾವುದೇ ಸರಳ ಕೆಲಸಗಳು ಬೇಡ ಎಂದು ಪ್ರಾರ್ಥನೆ ಮಾಡುತ್ತಿರಬೇಕು. ನಾನು ಈ ಮಾತನ್ನು ಹೇಳಿದ ಬಳಿಕ ನಿಮ್ಮ ಮುಖಗಳು ಜೋಲು ಮೋರೆಯಾಗುತ್ತಿರುವುದನ್ನು ನಾನು ಕಾಣಬಲ್ಲೆ. 

ನಮಗೆ ಯಾವುದೇ ಸುಲಭದ ಕೆಲಸ ಬೇಡ ಎಂದು ಪ್ರಾರ್ಥಿಸಿ ಎಂದು ಹೇಳುತ್ತಿರುವ ಇವರು ಎಂತಹ ಪ್ರಧಾನ ಮಂತ್ರಿ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ನೀವು ಸದಾ ಸವಾಲೆಸೆಯುವ ಕೆಲಸಗಳಿಗಾಗಿ ಎದುರು ನೋಡುತ್ತಿರಬೇಕು. ಮತ್ತು ಇದು ನಿಮ್ಮ ಪ್ರಯತ್ನ, ಆಶಯವೂ ಆಗಿರಬೇಕು. ಸವಾಲೆಸೆಯುವಂತಹ ಕೆಲಸಗಳು ನೀಡುವ ಸಂತೋಷ ಬಹಳ ಭಿನ್ನವಾಗಿರುತ್ತದೆ. ನೀವು ಸಂತೃಪ್ತ ವಲಯದಲ್ಲಿಯೇ ಇರುವ ಬಗೆ ಹೆಚ್ಚು ಚಿಂತಿತರಾದರೆ ನೀವು ದೇಶದ ಪ್ರಗತಿಯನ್ನು ಹಳಿ ತಪ್ಪಿಸುವುದು ಮಾತ್ರವಲ್ಲ, ನಿಮ್ಮ ಪ್ರಗತಿಯೂ ಹಳಿ ತಪ್ಪುತ್ತದೆ. ನಿಮ್ಮ ಬದುಕೂ ಸ್ಥಗಿತಗೊಳ್ಳುತ್ತದೆ. ಕೆಲವು ವರ್ಷಗಳ ಬಳಿಕ ನಿಮ್ಮ ಬದುಕೂ ನಿಮಗೆ ಹೊರೆಯಾಗುತ್ತದೆ. ನಿಮ್ಮ ಬದುಕಿನಲ್ಲಿ ವಯಸ್ಸು ನಿಮ್ಮ ಕಡೆ ಇರುವಂತಹ ಹಂತದಲ್ಲಿ ನೀವಿದ್ದೀರಿ. ಈ ವಯಸ್ಸಿನಲ್ಲಿ ಅಪಾಯವನ್ನು ಎದುರಿಸುವ ಸಾಮರ್ಥ್ಯ ಅತ್ಯಂತ ಹೆಚ್ಚು ಇರುತ್ತದೆ. ಸವಾಲಿನ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ ಮುಂದಿನ 2-4 ವರ್ಷಗಳಲ್ಲಿ ನೀವು ಕಲಿಯುವುದು ಕಳೆದ 20 ವರ್ಷಗಳಲ್ಲಿ ನೀವು ಕಲಿತುದಕ್ಕಿಂತ ಹೆಚ್ಚಾಗಿರುತ್ತದೆ. ಮತ್ತು ಈ ಪಾಠಗಳು ಮುಂದಿನ 20-25 ವರ್ಷಗಳಲ್ಲಿ ನಿಮಗೆ ಬಹಳ ಪ್ರಯೋಜನಕ್ಕೆ ಬರುತ್ತವೆ. 

ಸ್ನೇಹಿತರೇ

ನೀವು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರಬಹುದು, ವಿವಿಧ ಸಾಮಾಜಿಕ ಶ್ರೇಣಿಗಳಿಂದ ಬಂದವರಿರಬಹುದು, ಆದರೆ ನೀವು “ಏಕ ಭಾರತ್, ಶ್ರೇಷ್ಠ ಭಾರತ್” ಹಿಂದಿನ ಪ್ರಮುಖ ಚಾಲಕ ಶಕ್ತಿ ಕೂಡಾ. ನಿಮ್ಮ ಸೇವಾ ಮನೋಭಾವ, ನಿಮ್ಮ ವಿನೀತ ವ್ಯಕ್ತಿತ್ವ ಮತ್ತು ನಿಮ್ಮ ಪ್ರಾಮಾಣಿಕತೆ ಬರಲಿರುವ ವರ್ಷಗಳಲ್ಲಿ ನಿಮಗೆ ಪ್ರತ್ಯೇಕ, ವಿಶಿಷ್ಟ ವ್ಯಕ್ತಿತ್ವವನ್ನೇ ರೂಪಿಸಿ, ಗುರುತಿಸುವಿಕೆಯನ್ನು ತರಲಿದೆ. ಬಹಳ ಹಿಂದೆ, ನಾನು ಈ ಬಗ್ಗೆ ಒಂದು ಸಲಹೆ ಮಾಡಿದ್ದೆ, ಅದು ಈ ಬಾರಿ ಜಾರಿಯಾಗಿದೆಯೋ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಅದೆಂದರೆ, ನೀವು ಅಕಾಡೆಮಿಗೆ ಬರುವಾಗ ನೀವು ಬಹಳ ದೀರ್ಘವಾದ ಪ್ರಬಂಧ ಬರೆಯಬೇಕು ಮತ್ತು ಈ ಕ್ಷೇತ್ರಕ್ಕೆ ಸೇರ್ಪಡೆಯಾಗುವುದಕ್ಕೆ ಸಂಬಂಧಿಸಿ ಕಾರಣಗಳನ್ನು ವಿವರವಾಗಿ ತಿಳಿಸಬೇಕು. ನಿಮ್ಮ ಕನಸುಗಳು ಮತ್ತು ನಿರ್ಧಾರಗಳನ್ನೂ ಅದು ಒಳಗೊಂಡಿರಲಿ. ನೀವು ಯಾಕೆ ಈ ವಿಭಾಗವನ್ನು ಆಯ್ಕೆ ಮಾಡಿಕೊಂಡಿರಿ?, ನೀವು ಏನು ಮಾಡಬೇಕೆಂದಿರುವಿರಿ? ಈ ಸೇವೆಯ ಮೂಲಕ ನಿಮ್ಮ ಬದುಕನ್ನು ಹೇಗೆ ನೋಡುತ್ತೀರಿ?. ಈ ಪ್ರಬಂಧವನ್ನು ಸಂಗ್ರಹಿಸಿಡಿ. ನೀವು 25 ಅಥವಾ 50 ವರ್ಷ ಪೂರ್ಣಗೊಳಿಸಿದಾಗ ಇಲ್ಲೊಂದು ಕಾರ್ಯಕ್ರಮ ನಡೆಯುವ ಸಾದ್ಯತೆ ಬಹುಷಃ ಇರಬಹುದು. 

ಮುಸ್ಸೋರಿಯ ಈ ಅಕಾಡೆಮಿಯನ್ನು 50 ವರ್ಷಗಳ ಹಿಂದೆ ಬಿಟ್ಟು ಹೋದವರು 50 ವರ್ಷಗಳ ಬಳಿಕ ಮರಳಿ ಬರುತ್ತಾರೆ. ನೀವು ನಿಮ್ಮ ಮೊದಲ ಪ್ರಬಂಧವನ್ನು 25 ಅಥವಾ 50 ವರ್ಷಗಳ ಬಳಿಕ ಓದಿ. ನೀವು ನಿಮ್ಮ ಕನಸಿನಂತೆ ಬದುಕಿರುವಿರೋ ಮತ್ತು ಆ ಗುರಿಗಳನ್ನು ಸಾಧಿಸಿರುವಿರೋ ಎಂಬುದನ್ನು ವಿಶ್ಲೇಷಣೆ ಮಾಡಿ.  ಆದುದರಿಂದ ಈ ಪ್ರಬಂಧವನ್ನು ಈ ಕ್ಯಾಂಪಸ್ ಬಿಡುವುದಕ್ಕೆ ಮೊದಲು ಬರೆಯುವುದು ಬಹಳ ಮುಖ್ಯ. 

ಇಲ್ಲಿ ಅನೇಕ ತರಬೇತಿ ಮಾದರಿಗಳಿವೆ. ಅಲ್ಲಿ ಗ್ರಂಥಾಲಯವಿದೆ ಮತ್ತು ಎಲ್ಲವೂ ಇಲ್ಲಿದೆ. ಆದರೆ ನಾನು ತರಬೇತಿಯಲ್ಲಿ ಎರಡು ಕಾರ್ಯಕ್ರಮಗಳನ್ನು ಸೇರಿಸಿಕೊಳ್ಳಬೇಕು ಎಂದು ನಿರ್ದೇಶಕರು ಮತ್ತು ಇತರರಲ್ಲಿ ಕೋರುತ್ತೇನೆ. ಅಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಗೆ ಸಂಬಂಧಿಸಿ ಉತ್ತಮ ಪ್ರಯೋಗಾಲಯ ಇರಬೇಕು. ಮತ್ತು ನಮ್ಮ ಎಲ್ಲಾ ಅಧಿಕಾರಿಗಳೂಆರ್ಟಿಫಿಷಿಯಲ್ ಇಂಟಲಿಜನ್ಸ್ ಬಗ್ಗೆ ತರಬೇತಿ ಪಡೆದಿರಬೇಕು. ಅದೇ ರೀತಿ, ದತ್ತಾಂಶ ಆಡಳಿತ ಕೂಡಾ ತರಬೇತಿಯ ಅಂಗವಾಗಬೇಕು. ಬರಲಿರುವ ಕಾಲಘಟ್ಟದಲ್ಲಿ ದತ್ತಾಂಶ ಬಹಳ ದೊಡ್ಡ ಶಕ್ತಿಯಾಗಲಿದೆ. ದತ್ತಾಂಶ ಆಡಳಿತದ ಬಗ್ಗೆ ನಾವು ನಾವು ಪ್ರತಿಯೊಂದನ್ನೂ ಕಲಿಯಬೇಕು ಮತ್ತು ತಿಳಿದುಕೊಳ್ಳಬೇಕು. ಹಾಗು ಅದನ್ನು ಎಲ್ಲ ಕಡೆಯೂ ಅಳವಡಿಸಿಕೊಳ್ಳಬೇಕು. ಈ ಎರಡು ಸಂಗತಿಗಳು ಮುಂದಿನ ತಂಡಗಳಿಗೆ ಬಹಳ ಉಪಯುಕ್ತವಾಗಲಿವೆ. 

ಮತ್ತು ಸಾಧ್ಯವಿದ್ದರೆ ನಿಮ್ಮ ಕರ್ಮಯೋಗಿ ಮಿಷನ್ನಿನಲ್ಲಿ ದತ್ತಾಂಶ ಆಡಳಿತಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್ ಆರಂಭ ಮಾಡಿ. ಜನತೆಗೆ ಆನ್ ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮತ್ತು ಪ್ರಮಾಣ ಪತ್ರಗಳನ್ನು ಪಡೆಯಲು ಇದರಿಂದ ಸಾಧ್ಯವಾಗುವಂತೆ ಮಾಡಿ.  ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸರ್ಟಿಫಿಕೇಟ್ ಕೋರ್ಸ್ ಕೂಡಾ ಅಲ್ಲಿರಲಿ. ಅಲ್ಲಿ ಆನ್ ಲೈನ್ ಪರೀಕ್ಷೆ ಇರಬೇಕು ಮತ್ತು ಅಧಿಕಾರಿಗಳು ಕೂಡಾ ಪರೀಕ್ಷೆ ಬರೆಯಬೇಕು ಹಾಗು ಪ್ರಮಾಣಪತ್ರ ಪಡೆಯಬೇಕು. ನಿಧಾನವಾಗಿ ಇದು ಆಧುನಿಕ ನವ ಭಾರತದ ಕನಸನ್ನು ನನಸು ಮಾಡಲು ಬಹಳ ದೊಡ್ಡ ಸಹಾಯವನ್ನು ಮಾಡುತ್ತದೆ. 

ಸ್ನೇಹಿತರೇ

ನಿಮ್ಮೊಂದಿಗೆ ಒಬ್ಬನಾಗಿರಲು ಮತ್ತು ಕೆಲ ಕಾಲವನ್ನು ಕಳೆಯುವುದಕ್ಕೆ ನಾನು ಬಹಳ ಇಷ್ಟಪಡುತ್ತೇನೆ, ಆದರೆ ಸಮಯಾವಕಾಶದ ಅಭಾವದಿಂದಾಗಿ, ಇತರ ಸಮಸ್ಯೆಗಳಿಂದಾಗಿ ಮತ್ತು ಸಂಸತ್ ಅಧಿವೇಶನದಿಂದಾಗಿ, ನನಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಈಗಲೂ, ನಾನು ನಿಮ್ಮೆಲ್ಲರನ್ನೂ ಕಾಣುತ್ತಿದ್ದೇನೆ, ತಂತ್ರಜ್ಞಾನಕ್ಕೆ ಧನ್ಯವಾದಗಳು. ನಾನು ನಿಮ್ಮ ಮುಖಭಾವವನ್ನು ಓದಬಲ್ಲೆ ಮತ್ತು ನಾನು ನಿಮ್ಮೊಂದಿಗೆ ನನ್ನ ಚಿಂತನೆಯನ್ನು ಹಂಚಿಕೊಂಡಿದ್ದೇನೆ. 

ನಿಮ್ಮೆಲ್ಲರಿಗೂ ಶುಭವಾಗಲಿ. ಬಹಳ ಅಭಿನಂದನೆಗಳು.

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.